ಕೊಡವ ಅಭಿವೃದ್ಧಿ ನಿಗಮ ಕುರಿತು ಸದನದಲ್ಲಿ ಶಾಸಕರ ಮನವಿ

ಬೆಂಗಳೂರು: ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಕುರಿತಂತೆ ನಡೆಯುತ್ತಿದ್ದ ಚರ್ಚೆ ಸಂದರ್ಭ ತಮ್ಮ ಸರದಿ ಬಂದಾಗ ಶಾಸಕರು ಮಾತನಾಡಿದರು.
ನಿಗಮ ಸ್ಥಾಪನೆಗೆ ಈ ಹಿಂದೆ ಮನವಿ ಮಾಡಲಾಗಿತ್ತು. ಇದೇ ಹಿನ್ನಲೆಯಲ್ಲಿ ಮುಖ್ಯಮಂತ್ರಯವರು ಪ್ರಸಕ್ತ ಬಜೆಟ್ ನಲ್ಲಿ ರೂ.10 ಕೋಟಿಯನ್ನು ಕೊಡವರ ಶ್ರೇಯಾಭಿವೃದ್ಧಿಗಾಗಿ ಎಂದು ಮಂಜೂರು ಮಾಡಿದ್ದಾರೆ. ನಿಜಕ್ಕೂ ಇದು ಸ್ವಾಗತಾರ್ಹ. ಆದರೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಾದರೆ ಇನ್ನೂ ಹೆಚ್ಚಿನ ಆರ್ಥಿಕ ಮಂಜೂರಾತಿಯ ಅಗತ್ಯವಿದೆ. ಮುಖ್ಯಮಂತ್ರಿಯವರು ಮುಂದೆ ಪೂರಕ ಬಜೆಟ್ ನಲ್ಲಿ ಈ ಬಗ್ಗೆ ಮಂಜೂರಾತಿ ನೀಡುವಂತೆ ಬೋಪಯ್ಯ ಕೋರಿದರು.
ಕೊಡವರು ಸೇನೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಶಿಸ್ತುಬದ್ಧ ಜೀವನ ನಡೆಸುತ್ತಿದ್ದಾರೆ. ಹಾಗೆಂದು ಎಲ್ಲರೂ ಉತ್ತಮ ಆರ್ಥಿಕ ಸ್ಥಿತಿಯಲ್ಲಿದ್ದಾರೆ ಎನ್ನುವಂತಿಲ್ಲ. ಕೊಡವರಲ್ಲಿ ಅನೇಕ ಮಂದಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಅವಶ್ಯಕತೆ ಇದೆ ಎಂದು ಶಾಸಕ ಬೋಪಯ್ಯ ಸದನದಲ್ಲಿ ಸಮರ್ಥಿಸಿದರು