ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ(ರಿ) ವತಿಯಿಂದ ಬೆಂಗಳೂರಿನಲ್ಲಿ ನಡೆದ ಅರೆಭಾಷೆ ದಿನಾಚರಣೆ

‘ಅರೆಭಾಷೆ ದಿನಾಚರಣೆ’ ಅಂಗವಾಗಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ(ರಿ), ಬೆಂಗಳೂರು ಇದರ ಲಗ್ಗೆರೆಯಲ್ಲಿರುವ “ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ” ದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಸಂಜೆ 7:30ಕ್ಕೆ ಸಭಾ ಕಾರ್ಯಕ್ರಮ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀ ರಾಜೇಶ್ ತೇನನ, ಉಪಾಧ್ಯಕ್ಷರಾದ ರವೀಂದ್ರನಾಥ್ ಕೇವಳ, ಜಂಟಿ ಕಾರ್ಯದರ್ಶಿಗಳಾದ ಸೋಮಣ್ಣ ಕುಂಬಗೌಡನ, ಮಹಿಳಾ ಘಟಕದ ಅಧ್ಯಕ್ಷಿಣಿ ಶ್ರೀಮತಿ ಗೀತಾ ರವೀಂದ್ರನಾಥ್ ಕೇವಳ, ಯುವ ಘಟಕದ ಕಾರ್ಯದರ್ಶಿ ಶ್ರೀ ದಿಲೀಪ್ ಮೂಲೆಮಜಲು ಹಾಗೂ ಸಮಾರಂಭಕ್ಕೆ ಅತಿಥಿಗಳಾಗಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪದ್ಮನಾಭ ಕೋಲ್ಚಾರ್, ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅರೆಭಾಷೆ ಸಾಹಿತಿ, ಕವಿ ಶ್ರೀ ಭವಾನಿಶಂಕರ ಹೊದ್ದೇಟಿ, ಅರೆಭಾಷೆಗೆ ಹೊಸ ಚೈತನ್ಯ ತಂದು ಹಾಡು, ಸಂಸ್ಕೃತಿಗೆ ಪ್ರದರ್ಶನ ಕಲೆಯ ರೂಪ ಕೊಟ್ಟು ಬೆಳೆಸಿದ ಶ್ರೀ ಅಮ್ಮಾಜಿರ ಪೊನ್ನಪ್ಪ, ಅಮೇರಿಕಾದಲ್ಲಿ ನೆಲಸಿದ್ದರೂ, ಭಾಷೆಗೆ, ಬಂಧುಗಳಿಗೆ, ಸಮಾಜದ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಶ್ರೀ ಒಂಪ್ರಕಾಶ್ ಮದುವೆಗದ್ದೆ ಇವರುಗಳು ವೇದಿಕೆಯನ್ನು ಅಲಂಕರಿಸಿದ್ದರು.

ಕು. ಭೂಮಿಕಾ ಉಳುವಾರು ಅವರ ಪ್ರಾರ್ಥನೆ ಹಾಗು ಅತಿಥಿಗಣ್ಯರಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷರಾದ ಶ್ರೀ ರಾಜೇಶ್ ತೇನನ ಎಲ್ಲರನ್ನೂ ಸ್ವಾಗತಿಸಿ, ‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ’ ಸ್ಥಾಪನೆ ಹಿನ್ನೆಲೆ ಹಾಗು ಭಾಷೆಯ ಬೆಳವಣಿಗೆಗೆ ಪೂರಕವಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.

ಅತಿಥಿಗಳಾದ ಶ್ರೀ ಪಧ್ಮನಾಭ ಕೋಲ್ಚಾರ್ ರವರು ಅರೆಭಾಷೆಯ ಹಾಗು ಅರೆಭಾಷಿಕ ಗೌಡರ ಸಂಸ್ಕೃತಿ, ಸಾಹಿತ್ಯದ ವಿವಿಧ ಬೆಳವಣಿಗೆಗಳ ಬಗ್ಗೆ ಸಭೆಗೆ ಮನನ ಮಾಡಿದರು.

ಶ್ರೀಯುತ ಭವಾನಿಶಂಕರ ಹೊದ್ದೇಟಿಯವರು ತಮ್ಮ ಸಾಹಿತ್ಯಾನುಭವವನ್ನು ಹಂಚಿಕೊಂಡರಲ್ಲದೆ, ಹಲವು ಅರೆಭಾಷೆ ಚುಟುಕ ಹಾಗು ಹಾಡನ್ನು ಹಾಡಿ ಎಲ್ಲರ ಮನರಂಜಿಸಿದರು.

ಶ್ರೀಯುತ ಓಂಪ್ರಕಾಶ್ ಮದುವೆಗದ್ದೆ ಇವರು ಕಳೆದ ಮೂರು ದಶಕಗಳಿಂದ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರೂ, ಅಪ್ಪಟ ಅರೆಭಾಷೆ ಮಾತನಾಡಿ, ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಿ ಬೆಳೆಸಲು ಕರೆಕೊಟ್ಟರಲ್ಲದೆ, ತಮ್ಮ ಸಂಪೂರ್ಣ ಬೆಂಬಲ, ಸಹಕಾರವನ್ನು ಕೊಡುವುದಾಗಿಯು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಿಗೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸುಮಾರು ಇನ್ನೂರಕ್ಕೂ ಅಧಿಕ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮಾಜ ಬಂದುಗಳು ಬಿಡುವು ಮಾಡಿಕೊಂಡು ಸಂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶ್ರೀ ರಾಜೇಶ್ ಅಂಬೆಕಲ್ಲು ನಿರೂಪಿಸಿದರು ಹಾಗು ಸಮಾಜದ ಉಪಾಧ್ಯಕ್ಷರಾದ ಶ್ರೀ ರವೀಂದ್ರನಾಥ್ ಕೇವಳ ಇವರು ವಂದನಾರ್ಪಣೆ ನೆರವೇರಿಸಿದರು. ನಂತರ ಸಹಬೋಜನ, ವಾಲಗ ಕುಣಿತದೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.

ಹಾಗೆಯೆ ಶ್ರೀಯುತ ಪೊನ್ನಪ್ಪ ಅಮ್ಮಾಜಿರರವರು ತಮ್ಮ ಭಾಲ್ಯದ ಘಟನೆಗಳಿಂದ ಹಿಡಿದು ಅರೆಭಾಷೆಯ ಮೊಟ್ಟಮೊದಲ ಟೇಪ್ ಕ್ಯಾಸೆಟ್ ನಲ್ಲಿ ಹಾಡುಗಳ ಸರಮಾಲೆ “ಪೊನಿದ್ವನಿ” ಹಿನ್ನೆಲೆ ಹಾಗು ಅನುಭವ ಹಂಚಿಕೊಂಡರಲ್ಲದೆ ಅರೆಭಾಷೆಯ ಹಾಡನ್ನು ಸಭಿಕರ ಜೊತೆಯಲ್ಲಿ ಹಾಡಿ, ಎಲ್ಲರ ಮನರಂಜಿಸಿದರು.

error: Content is protected !!