ಕೊಡಗು ಬಚಾವೋ ವೇದಿಕೆ ವತಿಯಿಂದ ಯಶಸ್ವಿಯಾಗಿ ನಡೆದ ಜನಜಾಗೃತಿ ಸಮಾವೇಶ

ಇಂದು ಬೆಳಿಗ್ಗೆ ಪೂರ್ವನಿಗದಿಯಂತೆ ಮಡಿಕೇರಿ ನಗರದ ಕಾವೇರಿ ಒಳಸಭಾಂಗಣದಲ್ಲಿ 10:30ಗೆ ಕೊಡಗು ಬಚಾವೋ ವೇದಿಕೆ ವತಿಯಿಂದ “ಸರ್ವ ಜನಾಂಗದ ಶಾಂತಿಯ ತೋಟ” ವಿಷಯ ಕೇಂದ್ರಿತ ಜನ ಜಾಗೃತಿ ಸಮಾವೇಶವು ಯಶಸ್ವಿಯಾಗಿ ಜರುಗಿತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಹಾಗು ಕೊಡಗು ಬಚಾವೋ ವೇದಿಕೆಯ ಅಧ್ಯಕ್ಷರಾದ ಶ್ರೀ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ‘ಕೊಡಗಿನಲ್ಲಿ ಹಲವಾರು ವರ್ಷಗಳಿಂದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜದ ಹದವನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಮಾಡದಿದ್ದರೂ, ಬಿಜೆಪಿ ಗೆಲ್ಲುತ್ತದೆ ಎಂಬ ಹುಂಬ ಧೈರ್ಯದಿಂದ ಆಡಳಿತಾರೂಢ ಪಕ್ಷ ಬೀಗುತ್ತಿದೆ. ಆದ್ದರಿಂದ ಅವರಿಗೆ ಜನರ ಕುರಿತು ಕಾಳಜಿ ಇಲ್ಲ “ಎಂದು ವಿಷಾಧ ವ್ಯಕ್ತಪಡಿಸಿದರು.

“ರಾಜ್ಯ ಸಂಪುಟದಲ್ಲಿ ನಮ್ಮ ಜಿಲ್ಲೆಯ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಕೇಂದ್ರದಲ್ಲಿ ಕೂಡ ಕಾಫಿ ಬೆಳೆಗೆ ಒಳ್ಳೆಯ ಬೆಂಬಲ ಬೆಲೆ ಸಿಗುತ್ತಿಲ್ಲ. ಪ್ರವಾಸೋದ್ಯಮ ತೀರಾ ಕುಂಟಿತವಾಗಿದೆ. ಸರಕಾರ ರಚಿಸೋದರಲ್ಲೂ ಉರಳಿಸೋದರಲ್ಲೂ ಕೊಡಗು ಜಿಲ್ಲೆಯ ಜನ ಪ್ರತಿನಿಧಿಗಳು ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹಿಂದೊಮ್ಮೆ ಕೊಡಗಿನಲ್ಲಿ 24 ಶಾಸಕರಿದ್ದರು. ವಿಲೀನ ಆದ ಬಳಿಕ 5 ಶಾಸಕ ಸ್ಥಾನಗಳಿತ್ತು. ನಂತರ ಅದು 3 ಸ್ಥಾನಕ್ಕೆ ಸೀಮಿತವಾಯಿತು. ಈಗ ಜಿಲ್ಲೆಯನ್ನು ಪ್ರತಿನಿಧಿಸಲು ಕೇವಲ ಎರಡು ಶಾಸಕ ಸ್ಥಾನವಿದೆ. ಹಾಗಾಗಿ ರಾಜಕೀಯವಾಗಿ ಕೊಡಗು ಅದರ ಬಲ ತೋರಿಸಲು ಸಾಧ್ಯವಾಗುತ್ತಿಲ್ಲ. ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ” ಎಂದು ಬೇಸರ ಪಟ್ಟರು.
“ಕೊಡಗು ಕಣ್ಣೀರಿನಲ್ಲಿದೆ. ಜಿಲ್ಲೆಯ ಕಟ್ಟ ಕಡೆಯ ಪ್ರಜೆ ಇವತ್ತು ಭ್ರಮನಿರಸನದಲ್ಲಿದ್ದಾನೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳತ್ತ ಬೆಳಕು ಚೆಲ್ಲಲಾಗುತ್ತಿಲ್ಲ. ವನ್ಯಜೀವಿ-ಮನುಷ್ಯ ನಡುವಣ ಸಂಘರ್ಷ ವಿಪರೀತವಾಗಿದೆ. ಬೆಳೆಗಾರ, ರೈತ ಸಂಕಷ್ಟದಲ್ಲಿದ್ದಾನೆ. ಸಾಕಷ್ಟು ಸಾವು ನೋವುಗಳೂ ಕೂಡ ವನ್ಯ ಮೃಗಗಳಿಂದ ಸಂಭವಿಸುತ್ತಿದೆ. ಅದಾಗ್ಯೂ ಜನರನ್ನು ಭಾವನಾತ್ಮಕ ವಿಚಾರಗಳಿಂದ ಪ್ರಚೋದಿಸಿ ದಾರಿ ತಪ್ಪಿಸಲಾಗುತ್ತಿದೆ. ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಬಹಿಷ್ಕರಿಸಿ ಜನ ದೂರ ಇಡಬೇಕು. ಕೊಡಗಿನಲ್ಲಿ ಶಾಂತಿಯುತ ವಾತಾವರಣ ಮತ್ತೆ ನೆಲೆಗೊಳ್ಳುವಂತಾಗಬೇಕು. ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಂಗೊಳಿಸುವಂತಾಗಬೇಕು. ಕೊಡಗು ಬಚಾವೋ ವೇದಿಕೆ ಜಿಲ್ಲೆಯಲ್ಲಿ ಆ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಭರವಸೆಯ ಮಾತನ್ನಾಡಿದರು.

ನಂತರ ಪೊನ್ನಂಪೇಟೆಯ ಶಾರದಾಶ್ರಮದ ಯತಿಗಳಾದ ಸ್ವಾಮಿ ಧರ್ಮಾನಾಥನಂದ ಜೀ ಮಹರಾಜ್ ಅವರು ಆರ್ಶೀವಚನ ನೀಡಲು ಮುಂದಾಗಿ,”ಧಾರ್ಮಿಕ ಸಾಮರಸ್ಯ ಹಾಗು ವಿವಿಧತೆಯಲ್ಲಿ ಏಕತೆ ಸಂದೇಶದೊಂದಿಗೆ ನಾವು ಮುನ್ನಡೆಯಬೇಕು. ಮತಾಂಧತೆ ಮತ್ತು ಧರ್ಮಾಂಧತೆಯಿಂದ ಸಮಾಜನದ ಸಂಪೂರ್ಣ ಸ್ವಾಸ್ಥ್ಯ ಕೆಡುತ್ತದೆ. ಶ್ರೀ ಸ್ವಾಮಿ ವಿವೇಕಾನಂದರು ಇದನ್ನೇ ಪ್ರತಿಪಾದಿಸಿದ್ದರು. ಈಗಾಗಲೇ ನಾವು 21ನೇ ಶತಮಾನದಲ್ಲಿದ್ದೇವೆ, ಆದರೂ ಧಾರ್ಮಿಕ ಅಸಹಿಷ್ಣುತೆ ಇಲ್ಲದೆ ಆಗಿಲ್ಲ. ಪ್ರತಿಯೊಬ್ಬನಲ್ಲೂ ದೈವಿಕ ಅಂಶವಿರುತ್ತದೆ ಅದನ್ನು ಅವನು ಭಕ್ತಿ-ಭಾವದಿಂದ ಮತ್ತು ಸೇವೆಯಿಂದ ಕಂಡುಕೊಳ್ಳಬೇಕು. ರಾಜಕಾರಣವೇ ಬೇರೆ, ಧರ್ಮವೇ ಬೇರೆ. ಅವೆರಡನ್ನೂ ಸಮ್ಮಿಳಿತಗೊಳಿಸಬಾರದು. ಕೆಲವು ರಾಜಕಾರಣಿಗಳು ಅಶಾಂತಿಯ ವಾತಾವರಣ ಸೃಷ್ಟಿಸಿ, ತಮ್ಮ ಸ್ವಾರ್ಥ ಸಾಧನೆಯ ಕುತಂತ್ರ ಮಾಡುತ್ತಿದ್ದಾರೆ. ಅದಕ್ಕೆ ಜನರು ಬಲಿಯಾಗದೆ, ಅಭಿವೃದ್ಧಿಯ ವಿಚಾರಕ್ಕೆ ಒತ್ತು ನೀಡಬೇಕು. ಪ್ರತಿಯೊಬ್ಬರೂ ಕೂಡ ಧಾರ್ಮಿಕವಾಗಿ ಸ್ವತಂತ್ರ್ಯವಾಗಿರಬೇಕು. ಅವರವರ ಆಚರಣೆ ಅವರಿಗೇ ಬಿಟ್ಟಿದ್ದು. ಧರ್ಮವೆಂಬುದು ಸಂಸ್ಕೃತಿ ಮತ್ತು ಮಾನವೀಯತೆಯ ನೆಲೆಗಟ್ಟಿನಲ್ಲಿರಬೇಕು. ಧರ್ಮದ ಮೂಲ ಉದ್ದೇಶವೇ ಆಧ್ಯಾತ್ಮಿಕ ಬೆಳವಣಿಗೆಯಾಗಿದೆ. ಧರ್ಮವೆಂಬುದು ಮೃಗೀಯ ಮನುಷ್ಯನನ್ನು ಭಾವುಕ ಮನುಷ್ಯನನ್ನಾಗಿ ಮತ್ತು ಭಾವುಕ ಮನುಷ್ಯನ್ನು ಪರಮಾತ್ಮನನ್ನಾಗಿ ಮಾಡಬೇಕು ಎಂದರು.
ಅದರೊಂದಿಗೆ ಆರ್ಶೀವಚನ ನೀಡಿದ ಶಾಂತಿ ಚಚ್೯ ಫಾದರ್ ಅಮೃತ್ ರಾಜ್, “ಧರ್ಮೋ ರಕ್ಷತಿ ರಕ್ಷಿತಃ ಎನ್ನುತ್ತಾರೆ. ಮಾನವ ಧರ್ಮ ರಕ್ಷಣೆಯೇ ನಿಜವಾದ ಧರ್ಮ. ಆ ಧರ್ಮ ರಕ್ಷಣೆಯನ್ನು ನಾವು ಎಲ್ಲೋ ಮರೆತಿದ್ದರಿಂದಲೋ ಏನೋ ಪ್ರಕೃತಿ ವಿಕೋಪಗಳಾದವು. ಎಂದರು.
ಸುನ್ನಿ ಸ್ಟುಡೆಂಟ್ ಫೆಡರೇಶನ್ ಅಧ್ಯಕ್ಷರಾದ ಟಿ.ಯು ಶಾಫಿ ಸವದಿ ಮಾತನಾಡುತ್ತಾ,” ಜಾತಿ ಧರ್ಮಗಳ ಹೆಸರಿನಲ್ಲಿ ಮನುಷ್ಯರು ತಮ್ಮ ನಡುವೆ ಕಂದಕ ಸೃಷ್ಟಿಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ. ಜಾತ್ಯಾತೀತತೆಯ ಬುನಾದಿಯಲ್ಲಿರುವ ಈ ದೇಶ ಯಾವತ್ತಿಗೂ ರಾಜಕೀಯದ ಸೋಗಿಗೆ ಬಲಿಯಾಗಬಾರದು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಅಧ್ಯಕ್ಷರಾದ ತಂಬ್ಳಿಕ್ ದಾರಿಮಿ, ಸಾಹಿತಿ ಮತ್ತು ನಿವೃತ್ತ ಪ್ರಾಂಶುಪಾಲರಾದ ಡಾ.ಜೆ ಸೋಮಣ್ಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಶ್ರೀಧರ್ ಹೆಗ್ಗಡೆ ಹಾಗು ಕೊಡಗು ಬಚಾವೋ ವೇದಿಕೆ ಸದಸ್ಯರು ಹಾಜರಿದ್ದರು.