fbpx

ಕೊಡಗು ಫೈಟ್ಸ್ ಕರೋನಾ

ಕೊಡಗಿನಲ್ಲಿ ಕೊರೊನಾದ ಸಂಖ್ಯೆ ನಿತ್ಯ ಏರುತ್ತಿದೆ. ಐವತ್ತಕ್ಕೂ ಹೆಚ್ಚು ಪ್ರಕರಣಗಳು ಆದ ಕಾರಣ ಜನರಲ್ಲಿ ಮತ್ತೆ ಅತಂಕ ಮನೆ ಮಾಡಿದೆ. ಜಿಲ್ಲೆಯನ್ನು ಸ್ವಲ್ಪ ಮಟ್ಟಿಗೆ ಬಲ್ಲವನಾದುದರಿಂದ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ ಬರೆಯುತ್ತಿದ್ದೇನೆ.

ಕೊರೋನಾ ವೈರಸ್ (ಸಾಂದರ್ಭಿಕ ಚಿತ್ರ)

೧. ಹೊರಜಿಲ್ಲೆಯಿಂದ ಪ್ರವಾಸಿಗರು ಒಳಗೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಜಿಲ್ಲೆಗೆ ಸಂಬಂಧಪಟ್ಟ ಐಡೆಂಟಿಟಿ ಪ್ರೂಫ್ ಇಲ್ಲದವರನ್ನು ಒಳಗೆ ಬಿಡಬೇಡಿ. ಎಲ್ಲಾ ಅನಧಿಕೃತ ಹೋಮ್ ಸ್ಟೇಗಳ ಮೇಲೆ ಆಯಾ ಗ್ರಾಮ ಮತ್ತು ಪಂಚಾಯತ್ ಮಟ್ಟದಲ್ಲಿ ನಿಗಾ ಇಡಬೇಕು. ಪ್ರವಾಸಿಗರು ಪ್ರಮುಖ ಟೂರಿಸ್ಟ್ ಸ್ಪಾಟ್ಗಳು ಮುಚ್ಚಿದ್ದರೂ, ಹೊಸ ಜಾಗಗಳನ್ನು ಹುಡುಕುತ್ತಾ ಅಲೆದಾಡುವುದು ಕಂಡು ಬಂದರೆ ಸ್ಥಳದಲ್ಲೇ ದಂಡಹಾಕಬೇಕು.

೨. ಕೊರೊನಾ ರೋಗ ಬಂದವರು ಆತಂಕ ಪಡುವ ಅಗತ್ಯವಿಲ್ಲ. ( ಇದನ್ನು ನಾನು ನಾಲ್ಕು ತಿಂಗಳಿಂದ ಬರೆಯುತ್ತಿದ್ದೇನೆ) . ಆರೋಗ್ಯ ಚನ್ನಾಗಿರುವವರಲ್ಲಿ ಇದು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಮಕ್ಕಳಲ್ಲಿ ಇದು ಬಂದು ಹೋದದ್ದು, ಗೊತ್ತಾಗುವುದಿಲ್ಲ. ಬಹಳಷ್ಟು ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮನ್ನು ಕೂಡ ಈ ವೈರಸ್ ಉಂಟು ಮಾಡಲಿಲ್ಲ .ಕನಿಷ್ಟ ಪಕ್ಷ ನೂರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಬಂದ ಮಕ್ಕಳಿಗೆ ಪುಣೆಯ ನಮ್ಮ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಿದ್ದೇವೆ .ಆಟ ಆಡಿಕೊಂಡು ಹತ್ತು ದಿನ ಆಸ್ಪತ್ರೆಯಲ್ಲಿ ಇದ್ದು ನಂತರ ಮನೆಗೆ ತೆರಳಿದ್ದಾರೆ‌. ಒಂದೇ ಒಂದು ಕೊರೊನಾ ಪಾಸಿಟಿವ್ ಮಗು ಕೂಡ ಇಲ್ಲಿ ವೆಂಟಿಲೇಟರ್ ಮೇಲೆ ಹೋಗಿಲ್ಲ. ಪಿಡಿಯಾಟ್ರಿಕ್ ರೋಗಿಗಳಲ್ಲಿ ಕೊರೊನಾ ಅಪಾಯಕಾರಿಯಲ್ಲವೆಂಬ ಅಂಕಿ ಅಂಶಗಳು ಪ್ರಪಂಚದ ಎಲ್ಲಾ ಮೂಲಗಳಿಂದ ಹರಿದು ಬರುತ್ತಿದೆ. ಈ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಕೊರೊನಾದಿಂದ ಗುಣವಾದುದರ ಹಿಂದ ವೈದ್ಯರ ಪಾತ್ರ ಬಹಳ ಕಡಿಮೆ. ಅದೊಂದು ವೈರಸ್ , ಅದರ ಯೋಗ್ಯತೆಯೇ ಅಷ್ಟು , ಆರೋಗ್ಯವಂತರಲ್ಲಿ ಅದರ ಆಟ ನಡೆಯುವುದಿಲ್ಲ. ಮೊದಮೊದಲು ನಾವು ಯಾವದೇ ಔಷಧಿಯನ್ನು ಕೊಡದೆ ಇದ್ದ ಕಾರಣ ಮಗು ಆಟವಾಡಿಕೊಂಡು ಇದ್ದಾಗಲೂ ತಾಯಿಯ ಮುಖದಲ್ಲಿ ಚಿಂತೆಯ ಕಾರ್ಮೋಡವಿತ್ತು. ತಾಯಿಯ ಸಮಾಧಾನಕ್ಕಾಗಿ ನಾವು ವಿಟಾಮಿನ್ ಸಿ ಮತ್ತು ಝಿಂಕ್ ಸಿರಫ್ ಕೊಡಲು ಶುರುಮಾಡಿದೆವು ! ಕೊರೊನಾ ಪಾಸಿಟಿವ್ ಬಂದ ಆರೋಗ್ಯವಂತರು , ಮಕ್ಕಳು ಜಿಲ್ಲಾಸ್ಪತ್ರೆಗೆ ಹೋಗುವಾಗ ಉತ್ತಮ ಪುಸ್ತಕಗಳನ್ನು/ಆಟಿಕೆಗಳನ್ನು ತಗೆದುಕೊಂಡು ಹೋಗಿ ನೆಮ್ಮದಿಯಿಂದ ಕಾಲ ಕಳೆಯಿರಿ.

ಕೊಡಗು ಜಿಲ್ಲೆಯ ಭೂಪಟ

೪.ಸೀನಿಯರ್ ಸಿಟಿಜನ್ಗಳು , ರಕ್ತದೊತ್ತಡ, ಮಧುಮೇಹ ಹಾಗು ಇತರೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಬರದಂತೆ ರಕ್ಷಿಸುವುದು ಆಡಳಿತ ವ್ಯವಸ್ಥೆಯ ಮುಖ್ಯ ಜವಾಬ್ದಾರಿಯಾಗಬೇಕಿದೆ. ಇವರ ಶ್ವಾಸಕೋಶ ಮತ್ತು ಬೇರೆ ಅಂಗಾಂಗಗಳು ಆಗಲೇ ಹದಗೆಟ್ಟು ಹೋಗಿರುವ ಕಾರಣ ಈ ವೈರಾಣು ಒಂದಷ್ಟು ಒತ್ತಡ ಹೇರಿದರೆ ಇವರ ದೇಹ ತಡೆದುಕೊಳ್ಳಲಾರದು.
ಇಂತವರನ್ನು ಪತ್ತೆ ಹಚ್ಚಿ ಅಗತ್ಯವಾದ ಸಾಮಾನುಗಳನ್ನು ಹೋಮ್ ಡೆಲಿವರಿ ಮಾಡುವುದು ಮತ್ತು ಇವರು ಬೇರೆಯವರ ಸಂಪರ್ಕಕ್ಕೆ ಬರದ ಹಾಗೆ ನೋಡಿಕೊಂಡರೆ ಕೊಡಗಿನಲ್ಲಿ ಒಂದೇ ಒಂದು ಸಾವು ಕೊರೊನಾದಿಂದ ಸಂಭವಿಸದು.

೫) ಮಾಸ್ಕ್ ಮತ್ತೆ ಕಿಟ್ ಹಂಚುವ ಸಾರ್ವಜನಿಕ ಕಾರ್ಯಕ್ರಮಗಳಿಂದ ಕೂಡ ಜನರು ಜಾಸ್ತಿ ಸೇರುತ್ತಾರೆ. ಜನಪ್ರತಿನಿಧಿಗಳು ಮತ್ತು ನಾಯಕರು ಬಂದಾಗ ಬೆಂಬಲಿಗರ ಹಿಮ್ಮೇಳವಿರುತ್ತದೆ. ಈ ಕೆಲಸವನ್ನು ತಮ್ಮ ಸಹಾಯಕರ / PA ಮಟ್ಟದಲ್ಲಿ ಗುಂಪು ಸೇರಿಸದೆ ಮಾಡಿಸುವುದು ಸೂಕ್ತ.

೬. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಅರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯಲ್ಲಿ ಸಾರ್ವಜನಿಕರು ಹುರುಪನ್ನು ತುಂಬಬೇಕು. ಅಸಲಿ ಯುದ್ಧ ಈಗಷ್ಟೆ ಶುರುವಾಗಿದೆ. ಸರಕಾರಿ ಆಸ್ಪತ್ರೆಗೆ ಅದರೇ ಅದ ಲಿಮಿಟೇಷನ್ ಇದೆ. ಅದು ಹೈ ಕ್ಲಾಸ್ ಇದ್ದಿದ್ದರೆ ಖಾಸಗಿ ಆಸ್ಪತ್ರೆಗೆ ಯಾರೂ ಹೋಗುತ್ತಿರಲಿಲ್ಲ. ಅಲ್ಲಿಯ ಚಿಕ್ಕ ಪುಟ್ಟ ಸಮಸ್ಯೆಗಳ ಬಗ್ಗೆ ದೃಷ್ಯಾವಳಿ ಮಾಡಿ ಅಲ್ಲಿ ಸೇವೆ ಸಲ್ಲಿಸುವವರ ಮೊರಾಲ್ ಡೌನ್ ಮಾಡಬೇಡಿ. ನಿಮಗಿಂತ ಜಾಸ್ತಿ ರಿಸ್ಕ್ ಅವರು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲೆ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಅರಿತು ಸಹಕರಿಸಿ.

೭. ಮುಂಬೈ ಮತ್ತು ಪುಣೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನಡೆಯುತ್ತಿತ್ತು. ಪ್ರಕರಣಗಳು ಮಿತಿಮೀರಿದ ಕಾರಣ ನಂತರ ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳನ್ನು ದಾಖಲು ಮಾಡಲು ಶುರುಮಾಡಿಕೊಂಡವು. ಮುಂಬೈ ಮತ್ತು ಡೆಹಲಿಯಲ್ಲಿ ಆಸ್ಪತ್ರೆ ಬರ್ತಿಯಾದ ಕಾರಣ ಉಸಿರಾಟದ ಸಮಸ್ಯೆಗಳು ಇಲ್ಲದ ಕೊರೊನಾ ರೋಗಿಗಳನ್ನು ಮನೆಯಲ್ಲಿ ಕ್ವಾರಂಟೈನ್ ಆಗಲು ಹೇಳಿ ಸಮಸ್ಯೆ ಉಂಟಾದಾಗ ಬಂದು ಆಸ್ಪತ್ರೆಗೆ ದಾಖಲಾಗಲು ಹೇಳಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಯಲ್ಲೂ ಈಗಿರುವ ನಿಯಮಾವಳಿಗಳು ಪರಿಸ್ಥಿತಿಯ ಆಧಾರದ ಮೇಲೆ ಬದಲಾಗಬಹುದು‌. ಕೊಡಗಿನಲ್ಲಿ ಕೇಸುಗಳು ಗಣನೀಯವಾಗಿ ಏರಿಕೆಯಾದರೆ
ಸಹಾಯಕ್ಕೆ ಬರಲು ದೊಡ್ಡ ಖಾಸಗಿ ಆಸ್ಪತ್ರೆಗಳು ಅಥವಾ ಖಾಸಗಿ ಮೆಡಿಕಲ್ ಕಾಲೇಜು ಇಲ್ಲ. ನಮ್ಮ ಜಿಲ್ಲೆಯ ಗಡಿಭಾಗದಲ್ಲಿರುವ ಕೆವಿಜಿ ಮೆಡಿಕಲದ ಕಾಲೇಜು ಸುಳ್ಯ ಈಗ ಕೋವಿಡ್ ಆಸ್ಪತ್ರೆಯಾಗಿದೆ. ಒಂದು ವೇಳೆ ಜಿಲ್ಲಾಸ್ಪತ್ರೆಯ ಸಾಮರ್ಥ್ಯ ಮೀರಿ ಕೇಸುಗಳು ಹೆಚ್ಚಾದಲ್ಲಿ ಕೆವಿಜಿಯ ಮೇಲೊಂದು ಕಣ್ಣಿಟ್ಟಿರಿ.

೮ . ರಾಮಾಯಣ ಹೇಳಿ ಮುಗಿಸಿದ ಮೇಲೆ ರಾಮ ಸೀತೆಗೆ ಏನಾಗಬೇಕೆಂಬುದನ್ನು ನಾನು ಪುನರಾವರ್ತಿಸುವುದಿಲ್ಲ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದರಿಂದ ವೈರಸ್ ಹರಡುವುದನ್ನು ತಡೆಯಬಹುದೆಂದು ನಾನು ಬಹಳಷ್ಟು ಬಾರಿ ಬರೆದಿದ್ದೇನೆ.

ಮೇಜರ್ | ಡಾ| ಕುಶ್ವಂತ್ ಕೋಳಿಬೈಲು
ಮಕ್ಕಳ ತಜ್ಞರು
ಪುಣೆ

error: Content is protected !!