ಕೊಡಗು ಜೂನಿಯರ್ ಕಾಲೇಜಿನಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ: ಕಾಲೇಜು ಪ್ರಾಂಶುಪಾಲರ ವಿರುದ್ಧ ದೂರು ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಟಿವಿ ಮಾಧ್ಯಮದ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಗೆ ಮಡಿಕೇರಿಯ ಮುಸ್ಲಿಂ ಜಮಾಅತ್ ಗಳ ಒಕ್ಕೂಟದಿಂದ ದೂರು ನೀಡಲಾಗಿದೆ.

ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಟಿವಿ ಕ್ಯಾಮೆರಾಗಳ ಮುಂದೆ ಏರು ಧ್ವನಿಯಲ್ಲಿ ಗದರಿಸಿ, ಎಫ್ ಐಆರ್ ದಾಖಲಿಸುವ ಬೆದರಿಕೆಯನ್ನು ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡ ದೃಶ್ಯದಲ್ಲಿ, ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆಯಾಗುವಂತೆ ಚಿತ್ರೀಕರಿಸಿರುವುದು ಸ್ಪಷ್ಟವಾಗಿದ್ದು, ಇದು ಜೆ.ಜೆ ಕಾಯ್ದೆ ಪ್ರಕಾರ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಘಟನೆಯನ್ನು ಚಿತ್ರೀಕರಿಸಲು ಅವಕಾಶ ಮಾಡಿಕೊಟ್ಟು, ಸಾರ್ವಜನಿಕವಾಗಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ತಂದಿರುವ ಸದರಿ ವ್ಯಕ್ತಿಯ ವಿರುದ್ಧ ಹಾಗೂ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿರುವ ಟಿವಿ ಸಂಸ್ಥೆಯ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!