ಕೊಡಗು ಜಿಲ್ಲೆಗೆ ದಿನಾಂಕ ಜೂನ್ 2 ಮತ್ತು 3 ರಂದು ಯೆಲ್ಲೋ ಅಲರ್ಟ್

ಮುಂಗಾರು ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಹವಾಮಾನ ಇಲಾಖೆ ಈ ಬಾರಿ ಮುಂಗಾರುಮಳೆ ಯಾವ ಪ್ರಮಾಣದಲ್ಲಿ ಇರಲಿದೆ ಎಂಬ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದು ಈ ವರ್ಷದ ನೈಋತ್ಯ ಮುಂಗಾರಿನ ಎರಡನೇ ದೀರ್ಘ ಮುನ್ಸೂಚನೆಯನ್ನು ಬಿಡುಗಡೆಗೊಳಿಸಿದೆ.
ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿ ಇರಲಿದ್ದು ಕೇಂದ್ರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮೋಹಪತ್ರ ಒಟ್ಟಾರೆಯಾಗಿ ಭಾರತದಲ್ಲಿ ಈ ಬಾರಿ ಮನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ(ಜೂನ್‌ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯ ಪ್ರಮಾಣದಲ್ಲಿ ಇರಲಿದೆ. 96-104 ಶೇಕಡಾ ಪ್ರಮಾಣದ ಮಳೆಯಾಗಬಹುದು. ದೀರ್ಘಾವಧಿಯ ಸರಾಸರಿಯಲ್ಲಿ ಮಳೆಯ ಪ್ರಮಾಣ ನೈಋತ್ಯ ಮುಂಗಾರಿನಲ್ಲಿ 101 ಶೇಕಡಾದಷ್ಟು ಬೀಳುವ ಸಾಧ್ಯತೆಯಿದೆ ಎಂದು ಮೃತ್ಯುಂಜಯ ಮೋಹಪತ್ರ ಮಾಹಿತಿ ನೀಡಿದ್ದಾರೆ.

ಇನ್ನು ಈ ಬಾರಿ ನೈಋತ್ಯ ಮುಂಗಾರು ಮೂರು ದಿನಗಳು ತಡವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ. ಜೂನ್ 3ರಂದು ಕೇರಳ ಕರಾವಳಿಗೆ ಮಾನ್ಸೂನ್ ಅಪ್ಪಳಿಸುವ ಸಾಧ್ಯತೆಯಿದ್ದು ರಾಜ್ಯಕ್ಕೆ ಜೂನ್ 5 ರಂದು ಮುಂಗಾರು ಆಗಮಸುವ ಮುನ್ಸೂಚನೆಯಿದೆ. ಹೀಗಾಗಿ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ .

error: Content is protected !!