fbpx

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿದ್ಯಾರ್ಥಿಗಳಿಗೆ ಸಣ್ಣ ಕಥಾ ಸ್ಪರ್ಧೆ

ಸಣ್ಣ ಕಥೆ ರಚನೆ ಕುರಿತು ಕಥೆಗಾರರಾದ ರಂಜಿತ್ ಕವಲಪಾರ ಅವರಿಂದ ಉಪನ್ಯಾಸ

ಮಡಿಕೇರಿ. ಅ 30 ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯನ್ನು ಮಡಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪಿ. ಕೇಶವ ಕಾಮತ್ ಅವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ವೇದಮೂರ್ತಿ ಅವರು ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಕೊಡಗು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ಅವರು ಮಾತನಾಡಿ ಕೊಡಗಿನ ಗೌರಮ್ಮ ಕನ್ನಡದ ಪ್ರಥಮ ಕಥೆಗಾರ್ತಿ. ಸಣ್ಣ ಸಣ್ಣ ಕಥೆಗಳನ್ನು ಬರೆಯುವ ಮೂಲಕ ಪ್ರಖ್ಯಾತಿ ಪಡೆದವರು ಅವರು. ಕಥೆಗಾರ್ತಿ ಮಾತ್ರವಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹಣ ಸಂಗ್ರಹದ ನಿಮಿತ್ತ ಕೊಡಗಿಗೆ ಬಂದಿದ್ದ ಮಹಾತ್ಮ ಗಾಂಧಿಯವರಿಗೆ ತಮ್ಮ ಮೈ ಮೇಲಿನ ಚಿನ್ನಾಭರಣವನ್ನು ನೀಡುವುದರ ಮೂಲಕ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿಯೂ ಗೌರಮ್ಮ ಹೆಸರು ಮಾಡಿದ್ದಾರೆ. ಬಿ.ಜೆ ವಸಂತ ಅನ್ನುವವರು ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಎರಡು ದತ್ತಿಗಳನ್ನು ಸ್ಥಾಪನೆ ಮಾಡಿ ಈಗಾಗಲೇ 14 ಪ್ರಶಸ್ತಿಗಳನ್ನು ಕೊಡಲಾಗಿದೆ. ವಿದ್ಯಾರ್ಥಿಗಳಲ್ಲಿ ಕಥೆಯ ಆಸಕ್ತಿ ಬಿತ್ತುವ ಸಲುವಾಗಿ ಅವರಿಗೂ ಕೂಡ ಪ್ರತ್ಯೇಕ ದತ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳನ್ನು ಸಾಹಿತ್ಯಕವಾಗಿ ಬೆಳೆಸುವ ದೃಷ್ಠಿಯಿಂದ ಕಥೆ ರಚನೆಯಂತಹ ಸ್ಪರ್ಧೆಗಳನ್ನು ಏರ್ಪಡಸುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟುವ ಕೆಲ್ಸಕ್ಕೆ ಕೈ ಜೋಡಿಸಬೇಕು ಎಂದರು.

ಸಣ್ಣ ಕಥಾ ರಚನೆ ಕುರಿತು ಮಾತನಾಡಿದ ಸಣ್ಣ ಕಥೆಗಾರರಾದ ರಂಜಿತ್ ಕವಲಾಪರ ಅವರು ಮಾತನಾಡಿ ಕಥೆಗಾರರು ಹೆಚ್ಚು ಗಂಭೀರವಾಗಿ ಇರಬಾರದು. ಕಥೆಗಾರರಿಗೆ ಕಥಾ ವಸ್ತುಗಳು ಸಿಗುವುದು ಜನಸಾಮಾನ್ಯರ ನಡುವೆ. ಆತ ಜನರ ನಡುವೆ ಬೆರೆಯಬೇಕು. ಕಥೆಗಳನ್ನು ವಿಷಯ ಆಧಾರಿತವಾಗಿ ಬರೆಯಲು ಕಷ್ಟ. ಸಣ್ಣ ಕಥೆಗಳು ಎಂದರೆ ಒಂದು ದೊಡ್ಡ ಘಟನೆಗಳನ್ನು ಸಣ್ಣದಾಗಿ ಹೇಳುವುದಾಗಿದೆ. ನಾವು ಹೇಳಬೇಕಾದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳುವುದು. ಕಥೆಗಳನ್ನು ಬರೆಯುವಾಗ ಆ ಕಥೆಯ ಪಾತ್ರ ಮತ್ತು ವಿಚಾರಗಳ ಬಗ್ಗೆ ನಮಗೆ ಗೊತ್ತಿರಬೇಕು. ಒಂದು ವಿಷಯದ ಕುರಿತು ಸ್ಪಷ್ಟತೆ ಇದ್ದಾಗ ಮಾತ್ರ ಆ ಪಾತ್ರದಲ್ಲಿ ನಾವುಗಳು ಮುಳುಗಬಹುದು.

ಮನುಷ್ಯನನ್ನು ಪಾತ್ರವಾಗಿ ರಚಿಸುವಾಗ ಮನುಷ್ಯ ಮನುಷ್ಯನಂತೆ ಕಾಣಬೇಕು. ನಮ್ಮ ಕಥೆಯ ನಾಯಕನನ್ನು ಹೆಚ್ಚು ಆಡಂಬರವಾಗಿ ಚಿತ್ರಿಸಬಾರದು. ವ್ಯಕ್ತಿಯ ಬಗ್ಗೆ ಬರೆಯುವಾಗ ಆತನ ವರ್ತನೆಗಳ ಜೊತೆ ಜೊತೆಯಲ್ಲೇ ನಾವಿರಬೇಕು. ವ್ಯಕ್ತಿಯ ನಡವಳಿಕೆಯ ಹಿನ್ನೆಲೆಯನ್ನು ಗಮನಿಸಬೇಕು. ಮತ್ತು ಅ ಅಷ್ಟೇ ತಾಳ್ಮೆ ಕಥೆಗಾರನಿಗೆ ಇರಬೇಕು. ಕಥೆಗಾರನಲ್ಲಿ ಆತುರ ಇರಬಾರದು, ತಾಳ್ಮೆಯ ಗ್ರಹಿಕೆ ಇರಬೇಕು. ಒಂದು ವಿಷಯದ ಬಗ್ಗೆ ಬರೆಯುವಾಗ ಆ ವಿಷಯದ ಕುರಿತು ನಾವು ತಿಳಿದುಕೊಂಡಿರಬೇಕು. ಗೌರಮ್ಮನವರ ಬಗ್ಗೆ ಬರೆಯುವಾಗ ಅವರ ವ್ಯಕ್ತಿತ್ವದ ಹಿನ್ನೆಲೆ ಗೊತ್ತಿರಬೇಕು. ಇತಿಹಾಸದ ಬಗ್ಗೆ ಬರೆಯುವಾಗ ತುಂಬಾ ಎಚ್ಚರಿಕೆಯಿಂದ ಬರೆಯಬೇಕು. ಪರಿಸ್ಥಿತಿಯನ್ನು ತುಂಬಾ ಗಮನಿಸಬೇಕು. ಕಥೆಗಾರರು ತಾವು ಬರೆದ ಕಥೆಯನ್ನು ಒಂದಷ್ಟು ದಿನಗಳವರೆಗೆ ಹಾಗೆ ಇಟ್ಟಿರಬೇಕು. ಹಾಗಿದ್ದಾಗ ತಾವು ಬರೆದಲ್ಲಿ ಒಂದಷ್ಟು ಗೊಂದಲಗಳು ನಮಗೆ ಅರ್ಥವಾಗುತ್ತದೆ. ಅಮಲಿನಲ್ಲಿ ಇರುವಾಗ, ತುಂಬಾ ಸಿಟ್ಟು ಮತ್ತು ಸಂತೋಷದಲ್ಲಿ ಇರುವಾಗ ಬರೆಯಬಾರದು. ಕಥೆ ಬರೆಯುವಾಗ ಒಂದು ಪಯಣ ಇರಬೇಕು. ಅನುಭವಕ್ಕೆ ವಯಸ್ಸಾದಾಗ ಅದನ್ನು ಬರೆದರೆ ಹೆಚ್ಚು ಇಷ್ಟವಾಗಿಬಿಡುತ್ತದೆ. ಆ ಕ್ಷಣಕ್ಕೆ ಅನ್ನಿಸಿದಾಗ ಬರೆದರೆ ಅದಕ್ಕೆ ಪಕ್ವತೆ ಇರುವುದಿಲ್ಲ. ಓದುವ ಆಸಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಕನ್ನಡ ಕಾಲಕಾಲಕ್ಕೆ ಬದಲಾದ ಭಾಷೆ. ಈಗಿನ ಕನ್ನಡದಲ್ಲಿ ಸರಳವಾಗಿ ಕಥೆ ಬರೆಯಬಹುದು. ಕಥೆಗಾರರು ನೆನ್ನೆಯ ಚಿಂತೆಯನ್ನು ಬಿಡಬೇಕು, ನಾಳೆಯ ಚಿಂತೆಯನ್ನು ತೆಗೆದುಹಾಕಬೇಕು. ಆ ಕ್ಷಣವನ್ನು ಮಾತ್ರ ಆನಂದಿಸಬೇಕು. ಕನ್ನಡದ ಅತ್ಯದ್ಭುತ ಕಥೆಗಾರರು ತುಂಬಾ ಇಂಗ್ಲೀಷ್ ಓದುತ್ತಾ ಇದ್ದರು. ಆದರೆ ಸಾಧ್ಯವಾದಷ್ಟು ಮೂಲ ಭಾಷೆಗಳಲ್ಲಿ ಪುಸ್ತಕಗಳನ್ನು ಓದುವ ಪ್ರಯತ್ನ ಮಾಡಿ. ಸಾಧ್ಯವಾದಷ್ಟು ಪರ ಭಾಷೆಗಳನ್ನು ಕಲೆತು, ಓದಿ ಮತ್ತು ತಮ್ಮ ಭಾಷೆಯಲ್ಲೇ ಬರೆಯಿರಿ, ಪರ ವ್ಯವಸ್ಥೆ, ಅಲ್ಲಿನ ಸಮಾಜ ಹೇಗಿದೆ ಎಂಬುದನ್ನು ಅರಿಯಲು ಬೇರೆ ಬೇರೆ ಭಾಷೆಗಳ ಪುಸ್ತಕ ಓದಬೇಕು. ವಿದ್ಯಾರ್ಥಿಗಳು ಮೊದಲು ಉದ್ಯೋಗ ಗಿಟ್ಟಿಸಿಕೊಳ್ಳುವ ಹಾಗೆ ಮಾಡಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಬೇಕು. ಆದರೆ ನಂತರ ಕಥೆ ಬರೆಯಬೇಕು. ಇನ್ನೊಬ್ಬರ ಮಾತಿಗೆ ಹೆಚ್ಚು ಕಿವಿ ಕೊಡಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್. ಐ. ಮುನೀರ್ ಅಹಮದ್ ಹಾಗೂ ಶ್ರೀಮತಿ ರೇವತಿ ರಮೇಶ್ ಮತ್ತು ಫ್ಯಾನ್ಸಿ ಮುತ್ತಣ್ಣನವರು, ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಅಂಬೆಕಲ್ಲು ನವೀನ್, ಪತ್ರಕರ್ತರು

ಹಾಗೂ ಯುವ ಕಥೆಗಾರರಾದ ರಂಜಿತ್ ಕವಲಾಪರ, ಅಲ್ಲಾರಂಡ ರಂಗಚಾವಡಿ ಮತ್ತು ಸಿರಿಗನ್ನಡ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಅಲ್ಲಾರಂಡ ವಿಠಲ್ ನಂಜಪ್ಪ, ಪತ್ರಕರ್ತರಾದ ಕೌಸರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ. ಡಿ. ಶಿವಶಂಕರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೆಚ್. ಕೆ. ಸುಶೀಲ ಸೇರಿದಂತೆ ವಿವಿಧ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!