ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ-ಸಾಧಕರಿಗೆ ಸನ್ಮಾನ

ಗೌಡ ಸಮುದಾಯದವರು ಬೌದ್ಧಿಕ-ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಬೇಕು
:ಲಕ್ಷ್ಮೀ ನಾರಾಯಣ ಕಜೆಗದ್ದೆ

ಮಡಿಕೇರಿ,ಮಾ.೭; ಯಾವದೇ ಸಮುದಾಯವಾಗಲೀ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಬೌದ್ಧಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಇರಬೇಕು; ಗೌಡ ಸಮುದಾಯದಲ್ಲಿ ಇದರ ಕೊರತೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಗುರುತಿಸಿಕೊಳ್ಳಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಅಭಿಪ್ರಾಯಪಟ್ಟರು.

ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು, ದ.ಕ. ಜಿಲ್ಲೆಗಳು ಪ್ರಕೃತಿ ಸಂಪತ್ತನ್ನು ಹೊಂದಿರುವ ಪ್ರದೇಶಗಳಾಗಿವೆ. ಇದನ್ನೇ ಸಾಹಿತ್ಯದ ಮೂಲಕ ಬಿಂಬಿಸಿ, ಗುರುತಿಸುವಂತೆ ಮಾಡಬಹುದು. ಕುಪ್ಪಳ್ಳಿ ಸೇರಿದಂತೆ ಮಲೆನಾಡು ಪ್ರದೇಶವನ್ನು ಕುವೆಂಪು, ತೇಜಸ್ವಿ ಅವರುಗಳು ಕತೆ, ಕಾವ್ಯಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಹಾಗಾಗಿ ಪ್ರಸ್ತುತ ಮಲೆನಾಡಿನ ಜನತೆಯ ಮೇಲೆ ಸಾಹಿತ್ಯ ಬೀರಿದ ಪ್ರಭಾವವನ್ನು ಕಾಣ ಬಹುದಾಗಿದೆ. ನಾವುಗಳು ಬೌದ್ಧಿಕವಾಗಿ ಹಿಂದೆ ಇದ್ದೇವೆ, ನಮ್ಮಲ್ಲಿ ಕೆಲವರು ಕಲಿತದ್ದನ್ನ ಮರೆಯುತ್ತಿದ್ದಾರೆ. ಪ್ರಸ್ತುತ ಪದವಿ ಒಂದೇ ಸಾಕಾಗುವದಿಲ್ಲ; ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದರು. ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಲು ಸರಕಾರದ ಮೂಲಕ ಅಕಾಡೆಮಿ ಹಾಗೂ ಇದೀಗ ಅರೆಭಾಷೆ ಅಧ್ಯಯನ ಪೀಠ ಸಿಕ್ಕಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಚಿತ್ರಕಲೆ, ಸಿನಿಮಾ, ರಂಗಭೂಮಿ ಸೇರಿದಂತೆ ಅಧ್ಯಯನದಲ್ಲೂ ತೊಡಗಿಸಿಕೊಳ್ಳುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕೆಂದು ಕರೆ ನೀಡಿದರು.

ಮೀಸಲಾತಿಯಿಂದ ತೊಂದರೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ; ಜಾತಿ ಪದ್ಧತಿ ಹಾಗೂ ಮೀಸಲಾತಿಗಳಿಂದಾಗಿ ಇತರ ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗ ಹೊಂದಿಕೊಳ್ಳಲು ತೊಂದರೆಯಾಗುತ್ತಿದೆ; ಮೀಸಲಾತಿಯ ದುರುಪಯೋಗವಾಗುತ್ತಿದ್ದು, ಇದೊಂದು ಗಂಭೀರ ವಿಚಾರವಾಗಿದೆ. ಅನೇಕರು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಮೀಸಲಾತಿ ಹೋದರೆ ಎಲ್ಲವೂ ಸರಿಯಾಗಲಿದೆ ಎಂದು ಅಭಿಪ್ರಾಯಿಸಿದರು. ಸಂಘದ ವತಿಯಿಂದ ಶಿಕ್ಷಣ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡವರು ಮುಂದಿನ ದಿನಗಳಲ್ಲಿ ಇತರ, ಅವಶ್ಯಕತೆ ಇರುವ ಪ್ರತಿಭೆಗಳಿಗೆ ಮಾಹಿತಿ, ತರಬೇತಿ ಮೂಲಕ ಮಾರ್ಗದರ್ಶನ ನೀಡಬೇಕು. ಪೋಷಕರು ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು.

ಜ್ಞಾನ ಕೇಂದ್ರ ಸ್ಥಾಪನೆ
ಸಂಘದ ಮೂಲಕ ಮೈಸೂರಿನಲ್ಲಿ ವಿದ್ಯಾರ್ಥಿ ನಿಲಯ ನಡೆಸಲಾಗುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಸಂಘದ ನಿರ್ದೇಶಕರುಗಳ ಸಹಕಾರದೊಂದಿಗೆ ಮೂವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಅವಕಾಶ ನೀಡಲಾಗಿದೆ. ಸಂಘದ ಸದಸ್ಯರುಗಳು ಹಾಗೂ ಸಮುದಾಯ ಬಾಂಧವರು ಸಹಕಾರ, ನೆರವು ನೀಡಿದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಅವಕಾಶ ನೀಡಬಹುದಾಗಿದೆ. ಇದಕ್ಕೆ ಎಲ್ಲರೂ ಮನಸು ಮಾಡಬೇಕೆಂದರು. ಅಲ್ಲದೆ, ಸಂಘದ ಮೂಲಕ ಜ್ನಾನ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಎಲ್ಲಿ ಆರಂಭ ಮಾಡಬೇಕೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ನಂತರದಲ್ಲಿ ತೀರ್ಮಾನಿಸಲಾಗುವದೆಂದು ಹೇಳಿದರು.

ಅತಿಥಿಯಾಗಿದ್ದ ನಿವೃತ್ತ ಶಿಕ್ಷಕ ದೇವಜನ ನಾಣಯ್ಯ ಮಾತನಾಡಿ, ವಿಜ್ನಾನದಿಂದ, ಜ್ನಾನ, ಜ್ನಾನದಿಂದ ಪ್ರತಿಭೆ, ನಂತರ ಪುರಸ್ಕಾರ, ಜ್ನಾನ ಬೆಳೆಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು, ಪುರಸ್ಕಾರ ಪಡೆಯಲು ದೀರ್ಘ ಕಾಲದ ಸಮಯಾವಕಾಶ ಬೇಕಿದ್ದು, ಚಿಕ್ಕಂದಿನಿAದಲೇ ಪ್ರಯತ್ನ ಆರಂಭಿಸಬೇಕೆAದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮತ್ತೊರ್ವ ಅತಿಥಿ, ನಿವೃತ್ತ ಶಿಕ್ಷಕ ತೆಕ್ಕಡೆ ಮುತ್ತಣ್ಣ ಮಾತನಾಡಿ, ವಿದ್ಯೆ ಆಸ್ತಿ, ಐಶ್ವರ್ಯಗಳಿಗಿಂತಲೂ ಮಿಗಿಲಾದ ಸಂಪತ್ತು. ಜ್ನಾನದೊಂದಿಗೆ, ಕಲೆ, ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ತಾಯಿ, ತಂದೆ, ಗುರು ತ್ರಿಮೂರ್ತಿಗಳು ಎಂದು ಬಣ್ನಿಸಿದ ಅವರು; ಎಲ್ಲರೂ ಆದರ್ಶಗಳಾಗಿ ಬದುಕಬೇಕು, ಚಿಕ್ಕಂದಿನಿAದಲೇ ಸಂಸ್ಕಾರ, ಸಂಸ್ಕೃತಿ ಕಲಿಯಬೇಕೆಂದು ಹಿತ ನುಡಿಗಳನ್ನಾಡಿದರು.
ಸಮಾರಂಭದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಗೂ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉನ್ನತ ಶಿಕ್ಷಣ ಪಡೆದವರು, ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದಲ್ಲಿ ಸಂಘದ ಸಹ ಕಾರ್ಯದರ್ಶಿ ತಳೂರು ದಿನೇಶ್ ಕುಮಾರ್, ನಿರ್ದೇಶಕರುಗಳಾದ ಪಾಣತ್ತಲೆ ಮಂದಪ್ಪ, ಕೆದಂಬಾಡಿ ಕೀರ್ತಿ ಕುಮಾರ್, ಹುದೇರಿ ಜಗದೀಶ್, ಕುದುಪಜೆ ಬೋಜಪ್ಪ, ಕಾಳೇರಮ್ಮನ ಲತಾ, ಚೆರಿಯಮನೆ ರೋಹಿಣಿ, ಮೈಸೂರು ಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ್, ಕಾರ್ಯದರ್ಶಿ ಕುಂಟಿಕಾನ ಗಣಪತಿ ಇದ್ದರು.
ಚಪ್ಪೇರ ಮೌಲ್ಯ ಪ್ರಾರ್ಥಿಸಿದರೆ, ಸಂಘದ ನಿರ್ದೇಶಕ ದೇವಂಗೋಡಿ ಹರ್ಷ ಸ್ವಾಗತಿಸಿದರು. ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಖಜಾಂಚಿ ಕಟ್ಟೆಮನೆ ಸೋನಾಜಿತ್, ನಿರ್ದೇಶಕರುಗಳಾದ ಪರಿಚನ ಸತೀಶ್, ಕೆದಂಬಾಡಿ ಕಾಂಚನ ಕಾರ್ಯಕ್ರಮ ನಡೆಸಿಕೊಟ್ಟರು. ಉಪಾಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ವಂದಿಸಿದರು

error: Content is protected !!