ಕೊಡಗಿನ ಸಲೀಂ ಅಲಿ!

Exclusive ವರದಿ: ಗಿರಿಧರ್ ಕೊಂಪುಳೀರ
‘ಕೇವಲ ಆಹಾರ ಸೇವನೆಯಿಂದ ಮಾನವ ಜೀವಿಸಲು ಸಾಧ್ಯವಿಲ್ಲ,ನಿವೃತ್ತಿ ನಂತರ ಗಡಿಯಾರ ನೋಡಿಕೊಂಡು ಕಾಲ ಕಳೆಯುವುದರಿಂದ ಬದಲಾಗಿ ಪಕ್ಷಿಗಳ ವೀಕ್ಷಣೆ ಮಾಡಿದರೆ ಆರೋಗ್ಯ ಆಯಸ್ಸು ವೃದ್ಧಿಸುತ್ತದೆ’. : ಡಾ.ಸಲೀಂ ಅಲಿ, ಪಕ್ಷಿ ತಜ್ಞರು
ಮನೆಯ ಗುಬ್ಬಚ್ಚಿಯಿಂದ ಹಿಡಿದು ಅರಣ್ಯದಲ್ಲಿನ ಪಕ್ಷಿಗಳ ಸಂಶೋಧನೆಯಲ್ಲಿ ತನ್ನ ಜೀವನ ಸವಿಸಿದ ಡಾ.ಸಲೀಂ ಅಲಿ ರವರ ಹಾದಿಯಲ್ಲಿ ಸಾಗುತ್ತಿದ್ದಾರೆ. ವಿದೇಶಿಯರಿಗೆ ಗೊತ್ತು ಆದರೆ ನಮ್ಮ ಜಿಲ್ಲೆಯವರಿಗೇ ಮಾಹಿತಿ ಇಲ್ಲ, ಈ ಅಪರೂಪದ ಕೊಡಗಿನ ವ್ಯಕ್ತಿಯೊಬ್ಬರನ್ನು ನಿಮ್ಮ ‘ಸುದ್ದಿ ಸಂತೆ’ ಪರಿಚಯಿಸುತ್ತಿದೆ. ರೆಸಾರ್ಟ್ ವೊಂದರಲ್ಲಿ ಪ್ರವಾಸಿಗರ ಗೈಡ್ ಆಗಿ , ಆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಜಿಲ್ಲೆಯ ಅಪರೂಪದ ಹಕ್ಕಿಗಳ ಸಂಶೋಧನೆ ಮತ್ತು ಪ್ರವಾಸಿಗರಿಗೆ ಜಿಲ್ಲೆ ಪಕ್ಷಿಗಳ ಪರಿಚಯ ಮಾಡುತ್ಥಿರುವವರು ಯಾರು ಗೊತ್ತಾ…?

ಅವರೇ ಕೊಡಗಿನ ಹಕ್ಕಿ ಮಾನವ ,”Bird Man Of Coorg” ಗಣೇಶ್ ಹೆಚ್ ಆರ್. ಕಳೆದ 20 ವರ್ಷಗಳಿಂದ ಇದೇ ಕಾಯಕದಲ್ಲಿ ತೊಡಗಿಕೊಂಡಿರುವ ಗಣೇಶ್ ಮೂಲತಃ ನೆಲ್ಲಿಹುದಿಕೇರಿಯವರು.
ಗಣೇಶ್ ಅಂದಾಜಿಸಿದಂತೆ ಕೊಡಗಿನಲ್ಲಿ 302 ವಿವಿಧ ರೀತಿಯ ಹಕ್ಕಿಗಳಿವೆ. ಸಾಮಾನ್ಯವಾಗಿ ಪಶ್ಚಿಮಘಟ್ಟದಲ್ಲಿ ಕಂಡುಬರುವ ಹಕ್ಕಿಗಳ ಪೈಕಿ ರಾಜ್ಯದ ಅಧಿಕ ಹಕ್ಕಿಗಳು ಕೊಡಗಿನಲ್ಲೇ ಇರುವುದು ವಿಶೇಷವಾಗಿರುವುದರಿಂದ ಇವರ ಅಧ್ಯಾಯನಕ್ಕೆ ಸ್ಪೂರ್ತಿಯಾಗಿದೆ.
ಗ್ರೇಟ್ ಪೈಡ್ ಹಾರ್ನ್ ಬಿಲ್,ಬ್ಲು ವಿಂಗ್ ಪ್ಯಾರಕೀಟ್,ಗ್ರೆ ಹೆಡೆಡ್ ಬುಲ್ ಬುಲ್,ವೈಟ್ ಬೆಲ್ಲೀಡ್ ಟ್ರೀಪೈ,ಬ್ಲಾಕ್ ಈಗಲ್,ಬೆಲ್ಲಿಡ್ ಬ್ಲು ಫ್ಲೈ ಕ್ಯಾಚರ್ ಮತ್ತು ಸಿಲೋನ್ ಫ್ರಾಗ್ ಮೌತ್ ಜಿಲ್ಲೆಯ ಪ್ರಮುಖ ಹಕ್ಕಿಗಳ ಪರಿಚಯ ಇವರಿಗಿದೆ.
ಇಂತಹ ಹಕ್ಕಿಗಳು ಜಿಲ್ಲೆಯ ಕಕ್ಕಬೆ,ಶಾಂತಳ್ಳಿ,ಪೆರುಂಬಾಡಿ,ದುಬಾರೆ,ರಂಗಸಮುದ್ರ ಸೇರಿದ ಪಶ್ಚಿಮ ಘಟ್ಟಗಳು ಇವರ ಪ್ರಮುಖ ಪ್ರದೇಶಗಳು.ಪಕ್ಷಿ ವೀಕ್ಷಣೆಗೆ ಯಾರಾದರು ಇಚ್ಚೆ ಪಟ್ಟಲ್ಲಿ ಅವರನ್ನು ಆಯಾ ಪ್ರದೇಶಗಳಿಗೆ ಕರೆದೊಯುತ್ತಾರೆ. ಬೆಳಗ್ಗೆ 6 ರಿಂದ 10.30ರ ವರೆಗೆ,ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣಕ್ಕೆ ಸೂಕ್ತ ಸಮಯವಾದ ಕಾರಣ,ಪ್ರವಾಸಿಗರಿಗೆ ಮತ್ತು ವನ್ಯ ಜೀವಿ ಛಾಯಾಗ್ರಾಹಕರಿಗೆ ಒಂದು ದಿನದ ಮುಂಚಿತವಾಗಿ ಮಾಹಿತಿ ನೀಡಿ ಕಾಡಿಗೆ ತೆರಳಿಬಿಡುತ್ತಾರೆ. ಬೆಳಗಿನ ಹೊತ್ತಿನಲ್ಲಿ ಹಕ್ಕಿಗಳ ಸಂವಹನ ,ಮರಿಗಳು ತಾಯಿ ಒಡನಾಟ,ಗೂಡು ನಿರ್ಮಾಣ,ಹೆಣ್ಣು ಗಂಡು ಹಕ್ಕಿಗಳ ಆಹಾರ ಬೇಟೆ ಮುಖ್ಯವಾಗಿದ್ದು,ಅವುಗಳ ವರ್ಗ, ಆಹಾರ ಪದ್ದತಿ ಹೀಗೆ ಅಧ್ಯಾಯನ ಜೊತೆ ಜೊತೆಗೆ ಕಾರ್ಯ ನಿರ್ವಹಿಸುತ್ತಾರೆ. 30 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ರಿಶಿ ವ್ಯಾಲಿ ಎನ್ನುವಲ್ಲಿ ಪಕ್ಷಿಗಳು ಮತ್ತು ವೀಕ್ಷಣೆ ಕುರಿತು ವಿಶೇಷ ತರಬೇತಿ ಪಡೆದು,ಡಾ.ಸಲೀಂ ಅಲಿ ಪ್ರೇರಣೆಯಿಂದ ತನ್ನ ಹವ್ಯಾಸದ ಜೊತೆಗೆ ಸಂಶೋಧನೆ ಮತ್ತು ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಫೋಟೋ ಗ್ರಾಫರ್ ಕೂಡ ಆಗಿರುವುದರಿಂದ ಇವರ ಬಳಿ ಬಹುತೇಕ ಕೊಡಗಿನ ಹಕ್ಕಿಗಳ ಚಿತ್ರಗಳಿದೆ.


ಹಕ್ಕಿಗಳನ್ನೇ ಕರೆಯುತ್ತಾರೆ: ಗಣೇಶ್ ರಲ್ಲಿ ಇರುವ ಮತ್ತೊಂದು ವಿಶೇಷ ಎಂದರೆ ಜಿಲ್ಲೆಯ 240 ಹಕ್ಕಿಗಳ ಕರೆಗಳನ್ನು ಗುರುತ್ತಿಸುತ್ತಾರೆ. ಇವುಗಳಲ್ಲಿ 30 ಹಕ್ಕಿಗಳ ಧ್ವನಿಯನ್ನು ಸ್ವತಃ ತಾವೇ ಮಾಡುತ್ತಾರೆ.ಹಕ್ಕಿ ವೀಕ್ಷಣೆಗೆ ಹೋಗುವ ಸಂದರ್ಭ ಹೆಣ್ಣು ಇಲ್ಲವೇ ಗಂಡು ಹಕ್ಕಿಯನ್ನು ತನ್ನ ಬೈನ್ಯಾಕ್ಯುಲರ್ ನಲ್ಲಿ ಗುರುತಿಸಿ ಅವುಗಳ ಸಂಗಾತಿಯನ್ನು ಕರೆಯುತ್ತಾರೆ ಕೆಲ ಹೊತ್ತಿನಲ್ಲೇ ಆ ಹಕ್ಕಿಗಳು ಪ್ರತ್ಯಕ್ಷವಾಗುವುದು ಇವರಿಗೆ ಹಕ್ಕಿಗಳ ಮೇಲೆ,ಅವುಗಳ ಸ್ವರದ ಮೇಲೆ ಇರುವ ಹಿಡಿತಕ್ಕೆ ಇರುವ ಕೈಗನ್ನಡಿ.


ಅಧ್ಯಾಯನದ ಹಕ್ಕಿ ಕೊಡಗಿನಲ್ಲಿ ಅಪರೂಪದ ಅಪರೂಪದ ಹಕ್ಕಿಗಳ ಪ್ರಭೇದಗಳಿದೆ,ಕೆಲವೊಂದು ದಿನನಿತ್ಯ ಕಾಣಸಿಗುವ ಪಟ್ಟಣ ಮತ್ತು ಮನೆ ಸುತ್ತಮುತ್ತಲಿನ ಹಕ್ಕಿಗಳಾದರೆ.ದಟ್ಟಾರಣ್ಯ,ಬಯಲು ಸೀಮೆ,ಹುಲ್ಲುಗಾವಲು,ಕೃಷಿ ಪ್ರದೇಶ ಹೀಗೆ ಹತ್ತು ಹಲವು ಬಗೆಯ ಸ್ಥಳಗಳಲ್ಲಿ ನಶಿಸಿರುವ ಮತ್ತು ಅಳಿವಿನ ಅಂಚಿನಲ್ಲಿರು ಹಕ್ಕಿಯ ಬಗ್ಗೆ ಅಧ್ಯಾಯನ ನಡೆಸುತ್ತಿದ್ದಾರೆ.ಇದೀಗ ಪಶ್ಚಿಮ ಘಟ್ಟದಲ್ಲಿರುವ ಅಪರೂಪದ ಹಕ್ಕಿಯ ಬಗ್ಗೆ ಮಾಹಿತಿ ಪಡೆದಿರುವ ಇವರು ಕೊರೊನಾ ಹಿನ್ನಲೆಯಲ್ಲಿ ಅರಣ್ಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ದಟ್ಟಾರಣ್ಯದಲ್ಲಿ ಅದರಲ್ಲೂ ನಿಶಾಚಾರಿಯಾಗಿರುವ ಈ ಹಕ್ಕಿಯನ್ನು ಗುರುತಿಸಿ, ಹೊರ ಪ್ರಪಂಚಕ್ಕೆ ತಿಳಿಸುವ ಗುರಿಯನ್ನು ಹೊಂದಿದ್ದಾರೆ.

ಕಳೆದ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ತನ್ನ ಮನೆ ಕಳೆದುಕೊಂಡಿದ್ದಾರೆ, ಇಬ್ಬರು ಮಕ್ಕಳು ಪತ್ನಿಯೊಂದಿಗೆ ಸದ್ಯಕ್ಕೆ ದುಬಾರೆ ಸಮೀಪ ನೆಲೆಸಿದ್ದಾರೆ.
ತರಬೇತಿ ನೀಡಲು ಸಿದ್ಧ: ಹಕ್ಕಿಗಳ ವೀಕ್ಷಣೆ,ಛಾಯಾಗ್ರಹಣ ಮಾಡುವುದಕ್ಕೆ ನಿಜಕ್ಕೂ ತಾಳ್ಮೆ ಅಗತ್ಯ ಮತ್ತು ಅವುಗಳ ಬಗ್ಗೆ ಅರಿವಿರಬೇಕಾಗುತ್ತದೆ. ಈ ಹಿಂದೆ ಹಲವು ಭಾರಿ ತರಬೇತಿ ಪಡೆಯಲು,ಸಮಯ ಹೊಂದಾಣಿಕೆಯಾದೆ ಅರ್ಧದಲ್ಲೇ ಬಿಟ್ಟು ಹೋದವರು ಇದ್ದಾರೆ. ಕೆಲವೊಂದು ಸಂದರ್ಭ ಇವರ ಇಬ್ಬರು ಹೆಣ್ಣು ಮಕ್ಕಳೇ ಅಪ್ಪನ ಜೊತೆ ಕಾಡಿಗೆ ಪ್ರವಾಸಿಗರೊಂದಿಗೆ ತೆರಳುತ್ತಾರೆ.

ಬದಲಾಗುತ್ತಿರುವ ತಂತ್ರಜ್ಞಾನ, ಮೂಬೈಲ್ ತರಂಗ, ಹವಮಾನ ವೈಪರಿತ್ಯ, ಕೃಷಿ ಜಮೀನಿನಲ್ಲಿ ವಿಷಕಾರಿ ಔಷಧಿ ಸಿಂಪಡನೆ ಹೀಗೆ ಹತ್ತು ಹಲವು ಕಾರಣದಿಂದ ಹಚ್ಚ ಹಸುರಿನ ಕಾಡುಗಳು ಕಾಂಕ್ರಿಟ್ ಕಾಡುಗಳಾಗಿವೆ. ಕಳೆದ ಮಳೆಗಾಲದಲ್ಲಿ ರಾಜ್ಯದ ವಿವಿಧೆಡೆ ಹಕ್ಕಿಗಳು ,ಹದ್ದು ಕಾಗೆಗಳು ತಮ್ಮನ್ನು ತಾವು ರಕ್ಷಿಸಿಕೊಳಲು ಸಾಧ್ಯವಾಗದೆ ಪ್ರಾಣ ಬಿಟ್ಟಿವೆ.ಪರಿಸರದ ಮನುಷ್ಯನ ಕ್ರೌರ್ಯ ನಿಲ್ಲುವರೆಗೂ ಪ್ರಾಣಿ ಪಕ್ಷಿಗಳಿಗೆ ಉಳಿಗಾಲವಿಲ್ಲ.
