“ಕೊಡಗಿನ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ಸಂಸ್ಥೆ ಮಡಿಕೇರಿಯಲ್ಲಿ ಅತ್ಯುತ್ತಮ ಅವಕಾಶ”

ಯಾವುದೇ ಕೆಲಸದಲ್ಲಿ ನಾವು ಯಶಸ್ಸು ಕಾಣಬೇಕಾದರೆ ಪರಿಶ್ರಮ ಅಗತ್ಯವಿರುತ್ತದೆ. Success comes before work only in dictionary ಎಂಬ ನುಡಿ ಆಂಗ್ಲ ಭಾಷೆಯಲ್ಲಿ ಇದೆ. ಯಾವುದೇ ವೃತ್ತಿಯಲ್ಲಿ ನಾವು ವೃತ್ತಿ ಧರ್ಮವನ್ನು ಪಾಲಿಸಿದಲ್ಲಿ ನಮ್ಮ ಮತ್ತು ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ ಸರ್ಕಾರ ಹಲವು ಪದವಿ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ, ಈ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ಕೂಡ ಮುಂಚೂಣಿಯಲ್ಲಿದೆ. ನಮ್ಮ ಭಾರತ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವೂ ಪ್ರಾಮುಖ್ಯತೆ ಹೊಂದಿದೆ. ಉದ್ಯೋಗಗಳು ನಮ್ಮ ದೇಶದ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಗಳಲ್ಲಿ ಮುಖ್ಯ ಭಾಗವಾಗಿದೆ. ಉದ್ಯೋಗ ಒಬ್ಬ ವ್ಯಕ್ತಿಯು ಆರ್ಥಿಕವಾಗಿ ಸ್ವತಂತ್ರರನಾಗಲು ಸಹಾಯ ಮಾಡುತ್ತದೆ.
ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ, ಈ ನಿಟ್ಟಿನಲ್ಲಿ ಉದ್ಯೋಗ ಮತ್ತು ಕೈಗಾರಿಕ ತರಬೇತಿ ಇಲಾಖೆ ಕೂಡ ಕಾರ್ಯನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈ ಇಲಾಖೆಯ ಅಧಿನದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ 1964ರಲ್ಲಿ ಗ್ರೇಡ್1 ಐ.ಟಿ.ಐ ಕಾಲೇಜು ಸ್ಥಾಪನೆಗೊಂಡಿತು. ಈವರೆಗೆ ಸಾವಿರಾರು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಕಲಿತು ತಮ್ಮ ವೃತ್ತಿ ಜೀವನದಲ್ಲಿ ಸಂತೋಷವಾಗಿದ್ದಾರೆ. ಐ.ಟಿ.ಐ ಸಂಸ್ಥೆ ಕಾಲೇಜು ರಸ್ತೆಯ ಪೋಲಿಸ್ ಮೈತ್ರಿಹಾಲ್ ಬಳಿ ವಿಶಾಲವಾದ ಕ್ಯಾಂಪಸ್ ಹೊಂದಿದೆ. ಉತ್ತಮ ಪರಿಸರ, ಆಟದ ಮೈದಾನ, ಪರಿಶುದ್ಧ ಗಾಳಿ, ಬೆಳಕು, ಶಿಸ್ತಿನ ವಾತಾವರಣ ಮತ್ತು ಎಲ್ಲಾ ಮೂಲಭೂತ ಸೌಲಭ್ಯಗಳ ಕಟ್ಟಡದೊಂದಿಗೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಐ.ಟಿ.ಐ ಸಂಸ್ಥೆ ಪ್ರೋತ್ಸಾಹಿಸುತ್ತಿದೆ. ಸಂಸ್ಥೆಯಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಕೌಶಲ್ಯವೃದ್ಧಿ, ವೃತ್ತಿಪರತೆ, ಉದ್ಯಮಶೀಲತೆ, ಆರ್ಥಿಕತೆ ಬಗೆಗೆ ಅನುಭವಿ ತರಬೇತಿ ಅಧಿಕಾರಿಗಳು ತರಬೇತಿ ನೀಡುತ್ತಿದ್ದಾರೆ. ಸಂಸ್ಥೆಯು ಸುಸ್ಸಜ್ಜಿತ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಮತ್ತು ವಿವಿಧ ತಾಂತ್ರಿಕ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರಯೋಗಾಲಯಗಳು ಮತ್ತು ಅತಿ ದೊಡ್ಡ ವರ್ಕ್‌ಶಾಪ್ ಹೊಂದಿರುವ ವೈಫೈ ಕ್ಯಾಂಪಸ್ ಆಗಿದೆ.
ಸರ್ಕಾರಿ ತರಬೇತಿ ಸಂಸ್ಥೆ ಮಡಿಕೇರಿಯಲ್ಲಿ ಎಲ್ಲಾ ವೃತ್ತಿ ತರಬೇತಿಗಳ ಅವಧಿ 2 ವರ್ಷವಾಗಿದ್ದು, ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಪ್ರೆಂಟಿಶಿಪ್ ತರಬೇತಿಗೆ (ಎನ್ ಎ ಪಿ ಪ್ರಮಾಣ ಪತ್ರ) ಸಂಸ್ಥೆಯ ವತಿಯಿಂದಲೆ ಶಿಫಾರಸು ಮಾಡಲಾಗುತ್ತದೆ, ಡಿಪ್ಲೋಮಾ ಇಂಜಿನಿಯರಿಂಗ್ ಸೇರ ಬಯಸುವ ವಿಧ್ಯಾರ್ಥಿಗಳು ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಗಾರಿಕಾ ಸಂಸ್ಥೆಗಳಲ್ಲಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕಾರ್ಖಾನೆಗಳಲ್ಲಿ ಉದ್ಯೋಗ ಪಡೆಯುವ ವಿಫುಲ ಅವಕಾಶಗಳಿವೆ, ಇದಲ್ಲದೆ ಸ್ವಂತವಾಗಿ ತಾವೇ ಕಾರ್ಖಾನೆಗಳನ್ನು ತೆರೆದು ಸ್ವಾವಲಂಬಿಯಾಗಿ ಉದ್ಯಮಶೀಲತೆಯನ್ನು ಬೆಳೆಸಬಹುದು.
ತರಬೇತಿ ಸಂಸ್ಥೆಯಲ್ಲಿ ಹತ್ತನೆ ತರಗತಿ ಪೂರ್ಣಗೊಳಿಸಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ, ಬಿಸಿಎಂ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನು ಪಡೆಯಬಹುದು, ವಿದ್ಯಾರ್ಥಿ ವೇತನವನ್ನು, ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದು ಇದರೊಂದಿಗೆ ಬಸ್ ಪಾಸ್ ಸೌಲಭ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಸಂಸ್ಥೆಯಲ್ಲಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ “ನೇಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್” (NCVT) ನಿಂದ ನಡೆಸಲಾಗುತ್ತದೆ ಮತ್ತು ಪ್ರಮಾಣ ಪತ್ರವನ್ನು ಸಹ ಅಲ್ಲಿಂದಲೇ ನೀಡಲಾಗುತ್ತಿದೆ.
ಮಡಿಕೇರಿ ಸರ್ಕಾರಿ ಐಟಿಐ ಸಂಸ್ಥೆಯಲ್ಲಿರುವ ವಿವಿಧ ವೃತ್ತಿ ತರಬೇತಿಗಳು:

ಎಲೆಕ್ಟ್ರಿಷಿಯನ್ – ವಿದ್ಯುತ್ ಮೊಟಾರ್‌ಗಳು, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮುಂತಾದ ಗೃಹೋಪಯೋಗಿ ವಸ್ತುಗಳ ದುರಸ್ತಿ ಮಾಡುವುದು, ಹೌಸ್ ವೈರಿಂಗ್ ಮತ್ತು ಮುಖ್ಯವಾಗಿ ವಿದ್ಯುತ್ ಉತ್ಪಾದನಾ ಘಟಕಗಳು, ವಿದ್ಯುತ್‌ಗೆ ಸಂಬಂಧಿಸಿದ ಕಾರ್ಖಾನೆಗಳಲ್ಲಿ ಉದ್ಯೋಗ ನಿರ್ವಹಿಸುವ ತರಬೇತಿ ನೀಡಲಾಗುತ್ತದೆ.

ಇಲೆಕ್ಟ್ರಾನಿಕ್ ಮೆಕ್ಯಾನಿಕ್ – ಈ ವೃತ್ತಿಯಲ್ಲಿ ಮೊಬೈಲ್ ಫೋನ್, ಕಂಪ್ಯೂಟರ್, ಕ್ಯಾಮರ, ಎಲ್‌ಸಿಡಿ, ಎಲ್‌ಇಡಿ ಟಿವಿಗಳ ದುರಸ್ತಿ ಮತ್ತು ನಿರ್ವಹಣೆಯನ್ನು ತರಬೇತಿ ನೀಡಲಾಗುತ್ತದೆ, ತರಬೇತಿ ನಂತರ ಸ್ವ ಉದ್ಯೋಗವನ್ನು ಮತ್ತು ವಿವಿಧ ಕಾರ್ಖಾನೆಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ವೃತ್ತಿಗಳು:

1)ಫಿಟ್ಟರ್ – ಬಿಡಿಭಾಗಗಳು, ಶೀಟ್ ಮೆಟಲ್ ಮತ್ತು ಜೋಡಣೆಗೆ ಸಂಬಂಧಿಸಿದಂತೆ ವಿಧ್ಯಾರ್ಥಿಗಳು ಸ್ವತಃ ತಾವೇ ಕೈಯಾರೆ ತಯಾರಿಸುವ ತರಬೇತಿ ನೀಡಲಾಗುತ್ತದೆ.

2)ಮೆಷಿನಿಸ್ಟ್ – ಹಲವು ಯಂತ್ರಗಳನ್ನು ಉಪಯೋಗಿಸಿ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತದೆ.
3)ಟರ್ನರ್ – ಇಲ್ಲಿ ಲೇಥ್ ಎಂಬ ಯಂತ್ರದ ಸಹಾಯದಿಂದ ಬಿಡಿಭಾಗಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತದೆ.
4)ವೆಲ್ಡರ್ – ವೆಲ್ಡ್ ಮಾಡುವ ಕ್ರಮ, ಎಲೆಕ್ಟ್ರೋಡ್ ಆಯ್ಕೆ, ವೆಲ್ಡ್ ಮಾಡುವ ಸಾಧನಗಳು ದೋಷ ರಹಿತವಾಗಿರುವಂತೆ ನಿರ್ವಹಣೆ ಮಾಡುವುದು, ಸುರಕ್ಷತ ಉಪಕರಣಗಳ ಬಳಕೆಯ ಬಗೆಗೆ ತರಬೇತಿ ನೀಡಲಾಗುತ್ತದೆ.
ಮಡಿಕೇರಿ ತರಬೇತಿ ಸಂಸ್ಥೆಯು ಕೊಡಗು ಜಿಲ್ಲೆಯ ಆಟೊಮೊಬೈಲ್ ಸಂಸ್ಥೆಗಳು ಮತ್ತು ಇತರ ಎಲ್ಲಾ ಕೈಗಾರಿಕಾ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿ ಇರುವುದರಿಂದ ಜಿಲ್ಲೆಯಲ್ಲೇ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ವರ್ಷ ರಾಜ್ಯ ಸರ್ಕಾರದಿಂದ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾ ಆಸ್ಪತ್ರೆ, ತಾಲ್ಲೋಕು ಆಸ್ಪತ್ರೆಗಳು, ಸೇರಿದಂತೆ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಸುಮಾರು 350 ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸುತ್ತಿದ್ದು ಅವುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಐಟಿಐ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ.
ಸರ್ಕಾರವು ರಾಜ್ಯದ 150 ಐ.ಟಿ.ಐ ಸಂಸ್ಥೆಗಳನ್ನು ಉನ್ನತೀಕರಣ ಮಾಡಲು ಟಾಟಾ ಟೆಕ್ನಾಲಜೀಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಲ್ಲಿ ನಮ್ಮ ಜಿಲ್ಲೆಯ ಮಡಿಕೇರಿ ಐ.ಟಿ.ಐ ಸಂಸ್ಥೆಯು ಸೇರಿದೆ. ಈಗಾಗಲೇ ಸಂಸ್ಥೆಯಲ್ಲಿ ಟಾಟಾ ಟೆಕ್ನಾಲಜೀಸ್ ಅವರು ಅತ್ಯುತ್ತಮ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದಾರೆ. ಈ ವರ್ಷದಿಂದ ಟಾಟಾ ಟೆಕ್ನಾಲಜೀಸ್ ಮತ್ತು ಇತರೆ 19 ಕೈಗಾರಿಕೆಗಳ ಸಹಯೋಗದೊಂದಿಗೆ ಇತ್ತಿಚಿಗೆ ಬಹುಬೇಡಿಕೆಯಲ್ಲಿ ಇರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ರೋಬೊಟಿಕ್ಸ್, ಕ್ಯಾಡ್/ಕ್ಯಾಮ್, ಸಿಎನ್‌ಸಿ ಮತ್ತು ಇತರ ಆಧುನಿಕ ಯಂತ್ರಗಳ ಮೂಲಕ ಕೌಶಲ್ಯ ತರಬೇತಿಯನ್ನು 2ವರ್ಷ, 1ವರ್ಷ ಮತ್ತು ಆರು ತಿಂಗಳ ಕೊರ್ಸ್‌ಗಳಂತೆ ತರಬೇತಿ ನೀಡಲಾಗುತ್ತದೆ.
ಸರ್ಕಾರಿ ಐ.ಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಯೋಗೇಶ್ ಅವರು ಕೌಶಲ್ಯ ತರಬೇತಿಯನಲ್ಲಿ ಗುಣಮಟ್ಟದ ಮಾನದಂಡಗಳನ್ನು ಸ್ಥಾಪಿಸಲು ಬೋಧಕ ವೃಂದದವರೊಂದಿಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ನೀಡುವುದು ಅವರ ಮೂಲ ಉದ್ದೇಶವಾಗಿರುತ್ತದೆ. ಇವರೊಂದಿಗೆ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀ ಚಂಗಪ್ಪ ಅವರು ಸಲಹೆ ಸೂಚನೆಗಳನ್ನು ನೀಡಿ ಕುಂದು ಕೊರತೆಗಳನ್ನು ನಿವಾರಿಸುತ್ತ ತರಬೇತಿ ಉತ್ತಮವಾಗಿ ನಡೆಯುವಲ್ಲಿ ಶ್ರಮಿಸುತ್ತಿದ್ದಾರೆ. ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಶ್ರೀ ಇಂದ್ರೇಶ್ ಮತ್ತು ಶ್ರೀ ಸೂರ್ಯನಾರಾಯಣ ಅವರು ಎಲ್ಲಾ ಬೋಧಕ ಸಿಬ್ಬಂದಿಗಳಿಗೆ ಉತ್ತಮ ಸಹಕಾರಗಳನ್ನು ಮಾರ್ಗದರ್ಶನಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರೇರೇಪಿಸಲು ವಿಶೇಷವಾದ ತರಗತಿಗಳನ್ನು ನೀಡಿ ತರಬೇತಿಯು ಉತ್ತಮವಾಗಿ ಸಾಗಿಸುವಲ್ಲಿ ನೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸಂಸ್ಥೆಯು ಜನಪ್ರತಿನಿಧಿಗಳ ಸಹಕಾರವನ್ನು ನಿರೀಕ್ಷಿಸುತ್ತಿದೆ.
ಮಡಿಕೇರಿ ಐ.ಟಿ.ಐ ಸಂಸ್ಥೆಯಲ್ಲಿ 2021-2022ನೇ ಸಾಲಿನ ಪ್ರವೇಶ ಪ್ರಕ್ರಿಯೆ ದಿನಾಂಕ 29 ಜುಲೈನಿಂದ ಪ್ರಾರಂಭಗೊಂಡಿದೆ ಕೊನೆಯ ದಿನಾಂಕ ಆಗಸ್ಟ್ 28. ತರಬೇತಿಯನ್ನು ಪಡೆಯಲು ಅತಿ ಕಡಿಮೆ ಶುಲ್ಕ 1200/- ನಿಗದಿಯಾಗಿರುತ್ತದೆ, ಪ್ರವೇಶಾತಿಗೆ www.emptrg.nic.in ಅನ್ನು ಸಂಪರ್ಕಿಸಬಹುದು ಅಥವಾ ಸಂಸ್ಥೆಗೆ ನೇರವಾಗಿ ಬೇಟಿ ನೀಡಿ ಪ್ರವೇಶಾತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08272-298357 ಮತ್ತು ಪ್ರಾಂಶುಪಾಲರ ಮೊಬೈಲ್ ಸಂಖ್ಯೆ 9036796935 ಅನ್ನು ಸಂಪರ್ಕಿಸಬಹುದು. ಕೌಶಲ್ಯವೃದ್ಧಿ, ಉದ್ಯಮಶೀಲತೆ, ಮತ್ತು ಸ್ವಾವಲಂಬಿಯಾಗಿ ಜೀವನ ಸಾಗಿಸಲು ಕೊಡಗಿನ ವಿದ್ಯಾರ್ಥಿಗಳಿಗೆ ಮಡಿಕೇರಿ ಕೈಗಾರಿಕಾ ತರಬೇತಿ ಸಂಸ್ಥೆ ಅತ್ಯುತ್ತಮ ಸಂಸ್ಥೆಯಾಗಿದೆ. ಕೊಡಗಿನ ವಿದ್ಯಾರ್ಥಿಗಳು ಈ ಅದ್ಭುತ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿದೆ.

ಮರಗೋಡು