ಕೊಡಗಿನ ಗಡಿಯಲ್ಲಿ ತಪಾಸಣೆ ಬಿಗಿ ಮಾಡಿ- ಲಾಕ್ ಡೌನ್ ವೈರಸ್ ನಿಯಂತ್ರಣಕ್ಕೆ ಪರಿಹಾರ ಅಲ್ಲ

ಕೊಡಗು ಚೇಂಬರ್ ಆಫ್ ಕಾಮರ್ಸ್ ಹೇಳಿಕೆ
ಕೊಡಗಿನ ಗಡಿ ಭಾಗಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ವೀಕ್ ಎಂಡ್ ಕರ್ಫ್ಯೂ ಜಾರಿ ಮೂಲಕ ಜಿಲ್ಲೆಯೊಳಗಿನ ವರ್ತಕರನ್ನು ಬಲಿಪಶು ಮಾಡಬಾರದೆಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಒತ್ತಾಯಿಸಿದೆ.
ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ತಕ್ಷಣ ಸರ್ಕಾರ ಮತ್ತು ಜಿಲ್ಲಾಡಳಿತ ವೀಕ್ ಎಂಡ್ ಕರ್ಫ್ಯೂ ನಿಯಮವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯ ನಂತರ ಎಲ್ಲಾ ಅಂಗಡಿಗಳನ್ನು ಬಂದ್ ಮಾಡುವುದರಿಂದ ಕೋವಿಡ್ ನಿಯಂತ್ರಣಕ್ಕೆ ಬರುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ವರ್ತಕ ಸಮುದಾಯಕ್ಕೆ ತೊಂದರೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಈ ದಿಢೀರ್ ನಿರ್ಧಾರದಿಂದ ವರ್ತಕರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಕರ್ಫ್ಯೂ ಎನ್ನುವ ಭಯದಿಂದ ರೋಗಿಗಳು ಆಸ್ಪತ್ರೆಗೆ ತೆರಳುವುದಕ್ಕೂ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 4 ವರ್ಷಗಳಿಂದ ಕೊಡಗಿನ ವ್ಯಾಪಾರೋದ್ಯಮಿಗಳು ಅತಿವೃಷ್ಟಿ ಮತ್ತು ಕೋವಿಡ್ ಕಾರಣದಿಂದ ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸಿದ್ದಾರೆ.
ಬ್ಯಾಂಕ್ ಸಾಲ ತೀರಿಸಲಾಗದೆ ಕಾನೂನು ಕ್ರಮ ಎದುರಿಸುವಂತಹ ಪರಿಸ್ಥಿತಿ ಬಂದೊದಗಿದೆ. ಕಳೆದ ಒಂದು ತಿಂಗಳಿನಿAದ ಕೊಂಚ ಚೇತರಿಸಿಕೊಳ್ಳುತ್ತಿದ್ದ ಜಿಲ್ಲೆಯ ವರ್ತಕರಿಗೆ ವೀಕ್ ಎಂಡ್ ಕರ್ಫ್ಯೂ ಜಾರಿಯಿಂದ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.3 ರೊಳಗೇ ಇದ್ದು, ಜನರು ಕೂಡ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಎಲ್ಲರೂ ಸಹಕಾರ ನೀಡುತ್ತಿರುವಾಗ ಕರ್ಫ್ಯೂ ಜಾರಿಯ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಕರ್ಫ್ಯೂ ಎನ್ನುವ ಪದದ ಅರ್ಥಕ್ಕೆ ಕಳಂಕ ತರುವ ರೀತಿಯಲ್ಲಿ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಮಧ್ಯಾಹ್ನ 2 ಗಂಟೆಯವರೆಗೆ ಮದ್ಯ, ಮಾಂಸ ಸೇರಿದಂತೆ ಎಲ್ಲವನ್ನೂ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ.
ಆದರೆ ಅರ್ಧದಿನ ಬಂದ್‌ಗೆ ಕರೆ ಕೊಟ್ಟು ವರ್ತಕರು ಹಾಗೂ ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದ ವರ್ತಕರು ನಷ್ಟ ಅನುಭವಿಸುತ್ತಾರೆಯೇ ಹೊರತು ಕೋವಿಡ್ ನಿಯಂತ್ರಣಕ್ಕೆ ಬರುವ ಯಾವುದೇ ವಿಶ್ವಾಸ ಉಳಿದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ ಕರ್ಫ್ಯೂ ಹೇರುವುದನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿರುವ ಅವರು, ಪ್ರತಿಬಾರಿ ವರ್ತಕರನ್ನು ಬಲಿಪಶು ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಆರಂಭಿಸಬೇಕು,
ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು, ಸಿಸಿ ಕ್ಯಾಮರಾ ಅಳವಡಿಸಬೇಕು, ಜಿಲ್ಲೆಗೆ ಬರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಈ ರೀತಿಯ ಸುಧಾರಿತ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ವರ್ತಕರನ್ನೇ ಹೊಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಅತಿವೃಷ್ಟಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ನಷ್ಟ ಅನುಭವಿಸುತ್ತಿರುವ ವ್ಯಾಪಾರೋದ್ಯಮಿಗಳಿಗೆ ಸರ್ಕಾರದಿಂದ ಯಾವುದೇ ನೆರವು ದೊರೆತ್ತಿಲ್ಲ. ಇದೀಗ ವ್ಯಾಪಾರ, ವಹಿವಾಟು ಆರಂಭವಾದ ಒಂದೇ ತಿಂಗಳಿನಲ್ಲಿ ಗಡಿ ಜಿಲ್ಲೆ ಎನ್ನುವ ನೆಪವೊಡ್ಡಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ, ಸರ್ಕಾರ ಕೂಡ ಕೊಡಗಿನಂತಹ ಅತಿಹೆಚ್ಚು ಮಳೆಯಾಗುವ ಬೆಟ್ಟಗುಡ್ಡ ಪ್ರದೇಶದ ವರ್ತಕ ಸಮುದಾಯದ ಹಿತ ಕಾಯುವ ಕಾಳಜಿಯನ್ನು ತೋರಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಮತ್ತು ಅತಿವೃಷ್ಟಿ ನಿರ್ವಹಣೆಯ ಉಸ್ತುವಾರಿ ಹೊಂದಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಡಿಕೇರಿಗೆ ಆಗಮಿಸಿದಾಗ ಚೇಂಬರ್ ಆಫ್ ಕಾಮರ್ಸ್ ವರ್ತಕ ಸಮುದಾಯ ಎದುರಿಸುತ್ತಿರುವ ಕಷ್ಟ, ನಷ್ಟಗಳ ಬಗ್ಗೆ ವಿವರಿಸಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡಬಾರದೆಂದು ಮನವಿ ಮಾಡಿಕೊಂಡಿತ್ತು. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದರಾದರೂ ನಂತರದ ಬೆಳವಣಿಗೆಯಲ್ಲಿ ದಿಢೀರ್ ಆಗಿ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ.
ಇದು ವರ್ತಕ ವರ್ಗಕ್ಕೆ ಆಘಾತವಾನ್ನುಂಟು ಮಾಡಿದ್ದು, ಸರ್ಕಾರ ತಕ್ಷಣ ಈ ಕ್ರಮವನ್ನು ಹಿಂದಕ್ಕೆ ಪಡೆಯಬೇಕು. ದಿಢೀರ್ ಬೆಳವಣಿಗೆಯಿಂದ ಸಾವಿರಾರು ಪ್ರವಾಸಿಗರು ಗೊಂದಲಕ್ಕೀಡಾಗಿದ್ದು, ಅತಂತ್ರರಾಗಿದ್ದಾರೆ. ಜಿಲ್ಲೆಯೊಳಗಿರುವ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಅತಂತ್ರರಾಗಿದ್ದಾರೆ ಎಂದು ಗಮನ ಸೆಳೆದಿರುವ ದೇವಯ್ಯ ಹಾಗೂ ನವೀನ್, ವರ್ತಕರ ಹಿತದೃಷ್ಟಿಯಿಂದ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಕೊಡಗು ಜಿಲ್ಲೆಯನ್ನು ಕರ್ಫ್ಯೂ, ಲಾಕ್‌ಡೌನ್ ನಂತಹ ಶಿಕ್ಷಗಳಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.