fbpx

ಕೊಡಗಿಗೆ ಆಗಮಿಸುತ್ತಿರುವ ಅತಿಥಿಗಳು: ಎಲ್ಲೆಲ್ಲೂ ಬೆಳ್ಳಕ್ಕಿಗಳು

ಪೊಟೋ ಹಾಗು ವಿಶೇಷ ವರದಿ
ಗಿರಿಧರ್ ಕೊಂಪುಳಿರ, ಪತ್ರಕರ್ತರು

ಕೊಡಗು: ಇವು ವರ್ಷಕೊಮ್ಮೆ ಜಿಲ್ಲೆಗೆ ವಲಸೆ ಬಂದು, ಸಂತಾನಾಭಿವೃದ್ದಿ ನಡೆಸಿ ಮತ್ತೆ ತಮ್ಮ ಸ್ಥಳಗಳಿಗೆ ತೆರಳುವ ಸ್ಥಳೀಯವಾಗಿ ಕರೆಯುವ ಪೋಳೆ,ಕೊಕ್ಕರೆಗಳ ಜೀವನ ಕ್ರಮ.

ವರ್ಷಂಪ್ರತಿ ಕೊಡಗಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ತಂಡೋಪತಂಡವಾಗಿ ಆಗಮಿಸುವ ಈ ಬೆಳ್ಳಕ್ಕಿಗಳು ಸುಲಭವಾಗಿ ಆಹಾರ ಸಿಗುವ ಅದರಲ್ಲೂ ಭತ್ತದ ಉಳುಮೆ ನಡೆಯುವ ಪ್ರದೇಶದ ಎತ್ತರದ ಮರ, ಬಿದಿರಿನ ಪೊದೆಗಳಲ್ಲಿ ಆಶ್ರಯ ಪಡೆಯುತ್ತೆ.ಮುಖ್ಯವಾಗಿ ಕಾವೇರಿ ನದಿ ತಟದಲ್ಲೇ ಹೆಚ್ಚಾಗಿ ಕಂಡು ಬರುತ್ತದೆ.

ಉಳುಮೆ ಮಾಡುವ ಸಂದರ್ಭ ಸಿಗುವ ಎರೆಹುಳು,ಕಪ್ಪೆ,ಹುಳು ಉಪ್ಪಟೆಗಳೇ ಮುಖ್ಯ ಆಹಾರ.ಈ ಹಿಂದೆಯಲ್ಲಾ ಎತ್ತುಗಳಲ್ಲಿ ಊಳುವ ಸಂದರ್ಭ ಅವುಗಳ ಮೇಲೆ ಕೂತು ತಮ್ಮ ಆಹಾರ ಬೇಟೆ ನಡೆಸುತ್ತಿದದ್ದೂ ಇದೆ. ಮಳೆಗಾಲದಲ್ಲಿ ಸುಲಭವಾಗಿ ಸಿಗುವ ಆಹಾರ ಮತ್ತು ಸಂತನಾಭಿವೃದ್ದಿಗೆ ಜೂನ್ ಜುಲೈ ತಿಂಗಳಿನ ವಾತಾವರಣ ಪೂರಕವಾಗಿರುವ ಹಿನ್ನಲೆಯಲ್ಲಿ ಪ್ರತೀ ವರ್ಷ ಕೊಡಗಿಗೆ ಆಗಮಿಸುತ್ತವೆ.

ಮುಖ್ಯವಾಗಿ, ನಾಪೋಕ್ಲು, ಬಲಮುರಿ, ಬೇತ್ರಿ, ಕರಡಿಗೋಡು ಮತ್ತು ದುಬಾರೆ ಸಮೀಪ ಇವುಗಳು ಕಾಣಸಿಗುತ್ತದೆ. ಅದರಲ್ಲೂ ನಾಪೋಕ್ಲು ಮತ್ತು ಮೂರ್ನಾಡುವಿನ ಪಟ್ಟಣದ ಎತ್ತರ ಮರಗಳೇ ಇವುಗಳಿಗೆ ಆಶ್ರಯ ತಾಣವಾಗಿರುವುದು ವಿಶೇಷ.ಈ ಬಾನಾಡಿಗಳಲ್ಲಿ ಎರಡು ಬಗೆಗಳಿದ್ದು ಒಂದು ಸಂಪೂರ್ಣ ಬಿಳಿ ಇದ್ದರೆ, ಇನ್ನು ಕೆಲವು ಕಂದು ಬಣ್ಣದಾಗಿರುತ್ತದೆ.

ಗಂಡು ಹೆಣ್ಣು ಬೇಧಭಾವವಿಲ್ಲದೆ ಗೂಡು ಕಟ್ಟುವುದು, ಮೂಟ್ಟೆ ಇಡುವುದು,ಕಾವು ನೀಡುವುದು,ಮರಿಗಳು ಹೊರಬಂದಮೇಲೆ ಅವುಳಿಗೆ ಆಹಾರ ನೀಡುವುದು ನೋಡುವುದೇ ಒಂದು ಚಂದ, ಇದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲ್ಲಿ ಪಕ್ಷಿ ಪ್ರೇಮಿಗಳೂ ಬರುವುದೂ ಇದೆ.

ಅಪಸ್ವರವೂ ಕೇಳಿ ಬರುತ್ತದೆ: ಇಷ್ಟು ಸುಂದರ ಹಕ್ಕಿಗಳಿಂದ ಪಟ್ಟಣ ಪ್ರದೇಶ ಮತ್ತು ಕಾಫಿ ತೋಟದ ಮಾಲೀಕರಿಂದ ಅಪಸ್ವರವೂ ಕೇಳಿ ಬರುತ್ತದೆ.ಇದಕ್ಕೆ ಮುಖ್ಯ ಕಾರಣ ಕಾಫಿ ತೋಟದ ಎತ್ತರದ ಮರಗಳ ಮೇಲೆ ಗೂಡುಕಟ್ಟುವುದು ಮತ್ತು ಹಿಂಡಿನಲ್ಲಿರುವ ಇವುಗಳು ಹಾಕುವ ಹಿಕ್ಕೆ ತೋಟದ ಗಿಡಗಳ ಮೇಲೆ ಬೀಳುವುದಲ್ಲದೆ ಕೆಟ್ಟ ವಾಸನೆ ಬೀರುತ್ತದೆ. ಇನ್ನು ಕೆಲವು ಸಂದರ್ಭ ಜೋರಾಗಿ ಗಾಳಿ ಬೀಸುವಾಗಲೂ ಇಲ್ಲಾ ರೆಕ್ಕೆ ಬಲಿತು ಹಾರುವಾಗಲೂ ಗೂಡಿನಿಂದ ಹೊರ ಬರುವ ಮರಿಗಳು ಕೆಳಗೆ ಬಿದ್ದು ಸಾಯುವುದರಿಂದ ಕೆಟ್ಟ ವಾಸನೆ ಬರುತ್ತದೆ ಎನ್ನುವುದು ಕೇಳಿ ಬರುವ ಅಸಮಧಾನ ಒಂದೆಡೆಯಾದರೆ ಪಟ್ಟಣ ಪ್ರದೇಶದವರಿಗೆ ಇವುಗಳಿಂದ ಶಬ್ದ ಮಾಲಿನ್ಯವಾಗುತ್ತದೆಯಂತೆ.

ಹಗಲಿಡಿ ಮರಿಗಳಿಗೆ ದೊಡ್ಡಹಕ್ಕಿಗಳು ಆಹಾರ ಅರೆಸಿ ತಂದು ಸಹಜವಾಗಿಯೇ ನಾವುಗಳು ಮಾಡುವ ರೀತಿಯಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡಿ ಮುದ್ದು ಮಾಡುವ ರೀತಿಯಲ್ಲೇ ಅವುಗಳು ಮರಿಗಳಿಗೆ ಗುಟುಕು ತಿನ್ನಿಸುವಾಗ ಗಲಾಟೆ ಸಹಜ, ಹಾಗೆ ಎಲ್ಲಾ ಹಕ್ಕಿಗಳು ಬೇರೆ ಬೇರೆ ಕಡೆ ಹೋಗಿ ಆಹಾರ ಅರೆಸಿ ಬಂದಿರುದರಿಂದ ಹಕ್ಕಿಗಳು ಮುಂದಿನ ದಿನದ ಬೇಟೆ ಜಾಗದ ಬಗ್ಗೆ ಸಭೆ ನಡೆಸಿ ಪ್ಲಾನ್ ಮಾಡುವಾಗ ಅವರದೇ ಶೈಲಿಯಲ್ಲಿ ಸಂವಹನ ಮಾಡುವ ಸಂದರ್ಭ ಕೇಳುವ ಶಬ್ದ ಕಿರಿಕಿರಿ ಉಂಟು ಮಾಡುತ್ತದೆ ಎನ್ನುತ್ತಾರೆ ಪಟ್ಟಣ ವಾಸಿಗಳು.

ಏನೇ ಆಗಲಿ ಪ್ರಾಣಿ ಪಕ್ಷಿಗಳು ಸಂಘಜೀವಿಗಳು, ಅವರಲ್ಲಿ ಹೊಂದಾಣಿಕೆ ಇದೆ, ಕಷ್ಟಪಟ್ಟು ಆಹಾರ ಅರೆಸಿ, ಸಂತಾನಾಭಿವೃದ್ದಿ ಮಾಡಿ ಹೋಗುತ್ತವೆ. ಇರುವ ಒಂದೆರೆಡು ತಿಂಗಳು ಇವುಗಳನ್ನು ಅತಿಥಿಗಳಂತೆ ನಾವು ನೀವುಗಳು ಪರಿಗಣಿಸಬೇಕು.ಒಂದು ಸತ್ಯ ಸಂಗತಿ ಅಂದರೆ ಕೊರೊನಾ ದಿಂದ ಸದ್ದುಗದ್ದಲ ಇಲ್ಲದಿರುವುದರಿಂದ ಸಂತಾನಾಭಿವೃದ್ದಿಗೆ ಪೂರಕವಾಗಿರ ಬಹುದು, ಬೆಳಕ್ಕಿಗಳೂ ಯೋಚಿಸುತ್ತಿರಬಹುದು ಇಷ್ಟು ವರ್ಷಗಳು ಇದ್ದ ಸದ್ದುಗದ್ದಲ ಈಗೇಕೆ ಇಲ್ಲಾ ಎಂದು ಅಲ್ಲವೇ…!!!

ಗಿರಿಧರ್ ಕೊಂಪುಳಿರ, ಪತ್ರಕರ್ತರು

error: Content is protected !!