‘ಕೈ’ ಪಡೆಯ ಟ್ರಬಲ್ ಶೂಟರ್ ಕಣ್ಮರೆ, ಭಾರತ ‘ರತ್ನ’ ಪ್ರಣಬ್ ಮುಖರ್ಜಿ ಎಂದಿಗೂ ಅಮರ…

ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು, ಹಲವಾರು ಮಹತ್ತರ ರಾಜಕೀಯ ಹುದ್ದೆಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದವರು. ಪಕ್ಷದಲ್ಲಿ ಎದುರಾಗುವ ಬಿಕ್ಕಟ್ಟುಗಳನ್ನು ನಿವಾರಿಸುವಲ್ಲಿ ಚಾಣಾಕ್ಷರಾಗಿದ್ದ ಅವರು, ‘ಕೈ’ ಪಡೆಯ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದರು. ಸುಮಾರು ಐದು ದಶಕಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡ ಪ್ರಣಬ್, ಸ್ವತಂತ್ರ ಭಾರತದ ರಾಜಕಾರಣದ ಬೆಳವಣೆಗೆಯನ್ನು ಕಂಡ ರಾಜಕಾರಣಿಗಳೊಬ್ಬರು…

ಆಡಂಬರದ ಜೀವನ, ಒಣ ಪ್ರತಿಷ್ಠೆಯನ್ನು ಇಷ್ಟಪಡದ ಅವರು, ಭಾರತದ ರಾಜಕಾರಣಿಗಳಲ್ಲಿ ಬಹಳ ವಿಶೇಷವಾಗಿ ನಿಲ್ಲುತ್ತಾರೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿತ್ತ ಖಾತೆ, ವಿದೇಶಾಂಗ ಖಾತೆ ಸೇರಿದಂತೆ ವಿವಿಧ ಹುದ್ದೆ ಅಲಂಕರಿಸಿದ್ದ ಪ್ರಣಬ್, 2012 ರಿಂದ 2017ರ ವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬೆಂಬಲದಿಂದ 1969 ರಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಬಳಿಕ 1973ರಲ್ಲಿ ಇಂದಿರಾ ಗಾಂಧಿ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಬಳಿಕ 1982-84ರಲ್ಲಿ ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿ, 1980 ರಿಂದ 1985 ರವರೆಗೆ ರಾಜ್ಯಸಭೆಯ ಸದನದ ನಾಯಕರಾಗಿದ್ದರು.

ಇನ್ನು 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದ ಅವರು, ಅಂದಿನಿಂದ 2012 ರ ವರೆಗೂ ಪುಟದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. 2004 ರಿಂದ 2006ರ ವರೆಗೆ ರಕ್ಷಣಾ ಸಚಿವರಾಗಿ, 2006 ರಿಂದ 2009ರ ವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ, 2009 ರಿಂದ 2012ರ ವರೆಗೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2012 ರಿಂದ 2017ರ ವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಇನ್ನು ಪ್ರಮುಖವಾಗಿ ತಾವು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ, ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 26 ಸುಗ್ರೀವಾಜ್ಞೆ ಅಥವಾ ಮರು ಸುಗ್ರೀವಾಜ್ಞೆಗಳಿಗೆ ಅನುಮೋದನೆ ನೀಡಿದರು. ಐದನೇ ವರ್ಷದಲ್ಲಿ 5 ಸುಗ್ರೀವಾಜ್ಞೆಗಳಿಗೆ ಅಂಕಿತ ಹಾಕಿದ್ದರು. ತಮ್ಮ ಬಳಿಗೆ ಬಂದ ಒಟ್ಟು ಕ್ಷಮಾಪಣಾ ಅರ್ಜಿಗಳ ಪೈಕಿ 4 ಅರ್ಜಿಗಳನ್ನು ಅಂಗೀಕಾರ ಮಾಡಿದ್ದರು ಹಾಗೂ ಇನ್ನುಳಿದ 30 ಅರ್ಜಿಗಳನ್ನು ತಿರಸ್ಕರಿಸಿದ್ದರು.

ಇನ್ನು ಬಹಳ ಹೆಮ್ಮೆಯ ವಿಚಾರವೆಂದರೆ ಅವರ ಅಧಿಕಾರದ ಕೊನೆಯ ಎರಡು ವರ್ಷ, ರಾಷ್ಟ್ರಪತಿ ಭವನದೊಳಗಡೆ ವಿದ್ಯಾರ್ಥಿಗಳಿಗೆ ಪ್ರಣಬ್ ಪಾಠ ಮಾಡುತ್ತಿದ್ದರು. ಇತಿಹಾಸ, ರಾಜ್ಯಶಾಸ್ತ್ರ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, ಪ್ರೆಸಿಡೆಂಟ್ ಎಸ್ಟೇಟ್ನಲ್ಲಿರುವ ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದ 11 ಮತ್ತು 12 ನೇ ತರಗತಿಯ ಸುಮಾರು 80 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಿಸಿದರು. ಈ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ದೇಶದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನು ಪ್ರಣಬ್ ದಾ ಹಲವಾರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ದಶಕಗಳ ಕಾಲ ದೇಶಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರ್ಕಾರ 2019ರ ಜನವರಿಯಲ್ಲಿ ಭಾರತದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು, ‘ಭಾರತ ರತ್ನ’ ಪ್ರಶಸ್ತಿ ಪ್ರಧಾನ ಮಾಡಿ ಪ್ರಣಬ್ ಅವರಿಗೆ ಗೌರವ ಸಲ್ಲಿಸಿದ್ದರು.

ಇಂತಹ ಮಹಾನ್ ಚೇತನ ಇಂದು ನಮ್ಮನ್ನು ಬಿಟ್ಟು ಅಗಲಿರುವುದು ನಿಜಕ್ಕೂ ತುಂಬಲಾರದ ನಷ್ಟ… ಪ್ರಣಬ್ ದಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ…. ನೀವು ಎಂದೆಂದಿಗೂ ಅಮರ
ಕೃಪೆ: ಶ್ರೀನಿವಾಸ್ ಕುರಿಹಾಳ ಅವರ ಫೇಸ್ ಬುಕ್ ವಾಲಿನಿಂದ ಪಡೆದಿರುವೆವು.