ಕೈಗಾರಿಕೆಗಳಲ್ಲಿ ಸೊಂಕು ಹರಡುವಿಕೆ ಹೆಚ್ಚಳ; ಹೆಚ್ಚುತ್ತಿರುವ ಆತಂಕ

ಕೊಡಗು:ಕೂಡುಮಂಗಳೂರಿನಲ್ಲಿರುವ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನಲೆಯಲ್ಲಿ,ಈ ಭಾಗದಲ್ಲಿ ಹೆಚ್ಚಿನ ಪಾಸಿಟಿವ್ ಕೇಸ್ ವರದಿಯಾಗುತ್ತಿದೆ ಎಂದು ಸ್ಥಳೀಯ ಪಂಚಾಯ್ತಿಯ ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ಬಂದಿದ್ದು ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳನ್ನು ಮುಚ್ಚಲು ನಿರ್ಣಯ ತೆಗೆದುಕೊಳ್ಳಲಾಗಿದೆ.
ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿ 121 ವಿವಿಧ ಕಾರ್ಖಾನೆಗಳಿದ್ದು,ಮುಂಜಾಗೃತವಾಗಿ ಶೇ.40ರಷ್ಟು ಕೈಗಾರಿಕೆಗಳು ಸ್ಥಗಿತಗೊಂಡಿದ್ದು, 78 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ.
ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದು, ಯಾರೂ ಸರಿಯಾಗಿ ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ 234 ಪ್ರಕರಣಗಳು ಪಾಸಿಟಿವ್ ಬಂದಿದ್ದು,124 ಪ್ರಕರಣಗಳು ಈ ಭಾಗದಿಂದಲೇ ದಾಖಲಾಗಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ಗಮನಕ್ಕೆ ಬಂದಿದ್ದು ಕೋವಿಡ್ ನಿಯಮದಂತೆ ಶೇ.50 ರಷ್ಟು ಕಾರ್ಮಿಕರನ್ನು ಬಳಸಿಕೊಳ್ಳುವ ಬದಲು, ನಿಯಮವನ್ನು ಗಾಳಿಗೆ ತೂರಲಾಗುತ್ತಿದ್ದು,ತಾಲ್ಲೂಕು ತಾಹಶೀಲ್ದಾರರಿಗೆ ಪಂಚಾಯ್ತಿ ನಿರ್ಣಯದ ಪ್ರತಿ ಕಳುಹಿಸಿ ತ್ವರಿತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.