ಕೇರಳ ಸರಕಾರದಿಂದ ಕೇಂದ್ರಕ್ಕೆ ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನವನ್ನು ನೀಡುವಂತೆ ಬೇಡಿಕೆ

ಕೃಷಿಕರಿಗೆ ಇತರ ಪ್ರಾಣಿ-ಪಕ್ಷಿಗಳಿಗಿಂತಲೂ ಹೆಚ್ಚಾಗಿ ಹಂದಿಗಳ ಉಪಟಳ ಹೆಚ್ಚು. ಅದರಲ್ಲಿಯೂ ಕೆಲವೊಂದು ಪ್ರದೇಶಗಳಲ್ಲಿ ಹಂದಿಗಳ ಹಿಂಸೆ ಸಹಿಸಲಾರದಷ್ಟು ತಲೆನೋವಾಗಿ ಪರಿಣಮಿಸುತ್ತಿದೆ. ಗದ್ದೆ-ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವಲ್ಲಿ ಇವುಗಳ ಪಾಲು ಬಲು ದೊಡ್ಡದು.

ಇದೇ ಕಾರಣಕ್ಕೆ ಹಂದಿಗಳ ವಿರುದ್ಧ ಕೇರಳ ಸರ್ಕಾರ ಗರಂ ಆಗಿದೆ. ಆದರೆ ನಿಯಮಗಳ ಪ್ರಕಾರ ಇವುಗಳನ್ನು ಕೊಲ್ಲುವಂತಿಲ್ಲ. ಆದ್ದರಿಂದ ಕಾಡು ಹಂದಿಗಳನ್ನು ಪೀಡಕ ಪ್ರಾಣಿಗಳ ಅಥವಾ ಜಂತುಗಳ ಸ್ಥಾನಕ್ಕೆ ಸೇರಿಸಿ, ಕೇರಳದ ರೈತರಿಗೆ ಅವುಗಳನ್ನು ಕೊಲ್ಲುವ ಮತ್ತು ತಿನ್ನುವ ಹಕ್ಕನ್ನು ನೀಡಬೇಕು ಎಂಬುದಾಗಿ ಕೇರಳ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿತ್ತು. ಈ ಹಿಂದೆ ಕೂಡ ಇದೇ ಬೇಡಿಕೆಯನ್ನು ಸರ್ಕಾರ ಇಡುತ್ತಲೇ ಬಂದಿದ್ದು, ಕೇಂದ್ರ ಸರ್ಕಾರ ತಿರಸ್ಕರಿಸುತ್ತಲೇ ಇದೆ. ಆದರೂ ಕೇರಳ ಸರ್ಕಾರ ತನ್ನ ಪ್ರಯತ್ನ ಬಿಟ್ಟಿಲ್ಲ. ಇದೀಗ ಪುನಃ ಇದೇ ಕೋರಿಕೆ ಇಟ್ಟು ಪತ್ರ ಬರೆದಿತ್ತು.

ಕಳೆದ ವಾರವಷ್ಟೇ ಕೇರಳದ ಉತ್ತರ ಭಾಗದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ಸಮೀಪದ ಭೀಮಾನದಿಯ ಅಣ್ಣಮ್ಮ ಅಚ್ಚಪ್ಪನ್ ಎಂಬುವವರ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ಇದಿಷ್ಟೇ ಅಲ್ಲದೇ ಒಂದೆರಡು ತಿಂಗಳುಗಳಲ್ಲಿ ಹಂದಿಗಳಿಂದ ಹಲ್ಲೆಗೊಳಗಾದವರ ವಿವರಗಳನ್ನೂ ಉಲ್ಲೇಖಿಸಿ ಸರ್ಕಾರ ಪತ್ರ ಬರೆದಿತ್ತು.

ಇದೀಗ ಕೇಂದ್ರ ಸರ್ಕಾರ ಇದಕ್ಕೆ ಉತ್ತರಿಸಿದ್ದು, ಪುನಃ ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಕಾಡು ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನವನ್ನು ನೀಡುವ ಬೇಡಿಕೆಯನ್ನು ಪುರಸ್ಕರಿಸಲು ಆಗುವುದಿಲ್ಲ. ಆದರೆ ಇದಾಗಲೇ ಚಾಲ್ತಿಯಲ್ಲಿ ಇರುವಂತೆ ತೀವ್ರ ನಿರ್ಬಂಧಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ ಅವುಗಳನ್ನು ಕೊಲ್ಲಬಹುದು. ಅದೇನೆಂದರೆ, ಕೃಷಿ ಭೂಮಿಗೆ ಪ್ರವೇಶಿಸುವ ಕಾಡು ಹಂದಿಗಳನ್ನು ಪರವಾನಿಗೆ ಪಡೆದ ಬಂದೂಕುಗಳಿಂದ ಮಾತ್ರ ಕೊಲ್ಲಬೇಕು, ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಉಪಸ್ಥಿತಿ ಇರಬೇಕು. ಅದರ ಮಾಂಸವನ್ನು ಸೀಮೆ ಎಣ್ಣೆಯಿಂದ ಸುಟ್ಟು ಹೂಳಬೇಕು ಎಂದು ಹೇಳಿದೆ.

error: Content is protected !!