ಕೇರಳ ಗಡಿ ಸಂಚಾರ ನಿರ್ಬಂಧ: ರಾಜ್ಯ ಸರಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ!

ಕೊರೋನಾ ಹೆಚ್ಚುತ್ತಿರುವ ಭೀತಿಯಲ್ಲಿ ಪದೇ ಪದೇ ಕೇರಳ ಗಡಿ ಭಾಗದಲ್ಲಿ ಸಂಚಾರ ನಿರ್ಬಂಧಿಸುವ ರಾಜ್ಯ ಸರಕಾರದ ಕ್ರಮಕ್ಕೆ ಹೈಕೋರ್ಟ್ನಿಂದ ಅಸಮಾಧಾನ ವ್ಯಕ್ತಪಡಿಸಿದೆ._
ಹೈಕೋರ್ಟ್ ಮುಂದೆ ರಾಜ್ಯ ಸರ್ಕಾರ ತನ್ನ ನಿಲುವು ಸಮರ್ಥಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿತ್ತು.ಆದರೆ ತನ್ನ ನಿರ್ಣಯಕ್ಕೆ ಸೂಕ್ತ ಕಾನೂನಿನ ಬೆಂಬಲ ಸಿಗದೆ ಕೊನೆಗೂ ಗಡಿ ನಿರ್ಬಂಧಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.
ಗಡಿ ನಿರ್ಬಂಧ ಕುರಿತು ಹೈಕೋರ್ಟ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲೆ ಮೂಲಕ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮತ್ತು ಸರಕು ವಾಹನಗಳ ಆಗಮನ-ನಿರ್ಗಮನದ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ.ಈ ವಿಚಾರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಗಳ ಪಾಲನೆಗೆ ಬದ್ಧವಿರುತ್ತೇವೆ ಎಂದು ತಿಳಿಸಿದೆ.
ಕೇರಳದ ಕಾಸರಗೋಡು ಭಾಗದ ಜನರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಹೋಗುವುದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿ ಆದೇಶಿಸಿತ್ತು. ಇದರಿಂದಾಗಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಕಾರ್ಮಿಕರು ಕೆಲಸಕ್ಕೆ ಬಂದು ಹೋಗುವುದಕ್ಕೆ ತೀವ್ರ ತೊಂದರೆಯಾಗಿತ್ತು.ಇದನ್ನು ಪ್ರಶ್ನಿಸಿ ಕಾಸರಗೋಡಿನ ವಕೀಲ ಬಿ.ಸುಬ್ಬಯ್ಯ ರೈ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಯಾವ ಕಾನೂನಿನ ಅಡಿಯಲ್ಲಿ ಗಡಿ ಸಂಚಾರ ನಿರ್ಬಂಧಿಸಿದ್ದೀರಿ? ಎಂದು ಸರ್ಕಾರಕ್ಕೆ ಪ್ರಶ್ನಿಸಿತ್ತು.
ಕೇಂದ್ರ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಪರಿಷ್ಕರಿಸಿ, ಅಂತಾರಾಜ್ಯ ಗಡಿ ಸಂಚಾರಕ್ಕೆ ಹೇರಿದ್ದ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವು ಮಾಡಿದ ನಂತರ ರಾಜ್ಯ ಸರ್ಕಾರ ಈ ಕ್ರಮ ಅನುಸರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಾಗಿದ್ದೂ ಆರಂಭದಲ್ಲಿ ಕೋರ್ಟ್ ಎದುರು ವಾದ ಮಂಡಿಸುವ ವೇಳೆ ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಗಡಿ ನಿರ್ಬಂಧಿಸಿದ್ದಾಗಿ ಹೇಳಿತ್ತು.
ಇದಕ್ಕೆ ಅಕ್ಷೇಪಿಸಿದ್ದ ಹೈಕೋರ್ಟ್, ಗಡಿಯಲ್ಲಿ ಸಂಚರಿಸುವ ವ್ಯಕ್ತಿಗಳಿಂದ ಕೊರೋನಾ ನೆಗೆಟಿವ್ ವರದಿ ಪಡೆದು ಅನುಮತಿಸಿ ಎಂದಿತ್ತು. ಆದರೆ, ಸರ್ಕಾರ ಇಲ್ಲಸಲ್ಲದ ನೆಪ ಹೇಳಿತ್ತೇ ವಿನಃ ಕಾನೂನು ಆಧಾರದಲ್ಲಿ ಸಮರ್ಥಿಸಿಕೊಳ್ಳಲು ವಿಫಲವಾಗಿತ್ತು.ಅಂತಿಮವಾಗಿ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಜಿಲ್ಲಾಡಳಿತಕ್ಕೆ ನಿರ್ಣಯ ಕೈಗೊಳ್ಳಲು ಅಧಿಕಾರ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿಗಳು ಗಡಿ ನಿರ್ಬಂಧಿಸಿದ್ದಾರೆ ಎಂದಿತ್ತು.
ವಾದ ಪುರಸ್ಕರಿಸದ ಪೀಠ, ಸೂಕ್ತ ಆಧಾರ ಒದಗಿಸಲು ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು. ಜತೆಗೆ ವಿಮಾನದ ಮೂಲಕ ಬೆಂಗಳೂರಿಗೆ ಬರುವ ಗಡಿ ಭಾಗದ ಜನರಿಗೆ ಇಲ್ಲದ ನಿರ್ಬಂಧ ರಸ್ತೆ ಮೂಲಕ ಸಂಚರಿಸುವ ಸಾಮಾನ್ಯ ಜನರಿಗೆ ಏಕೆ ಎಂದು ಕಟುವಾಗಿ ಪ್ರಶ್ನಿಸಿದ್ದ ಹೈಕೋರ್ಟ್,ನಿಮ್ಮ ನಿರ್ಬಂಧ ತೀರಾ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿತ್ತು. ಅಲ್ಲದೇ, ನಿಮ್ಮ ಕಾನೂನು ಬಾಹಿರ ಕ್ರಮಗಳಿಂದ ಜನರು ಸಂಕಷ್ಟಪಡಬೇಕಾಗಿದೆ. ಆದೇಶ ಹಿಂಪಡೆಯದಿದ್ದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ ಎಂದು ಎಚ್ಚರಿಕೆ ನೀಡಿತ್ತು.