ಕೆಕೆಆರ್ ಸೇರಿದ ಬಜ್ಜಿ!

ಮುಂಬೈ (ಪಿಟಿಐ): ಅನುಭವಿ ಕ್ರಿಕೆಟಿಗ ಹರಭಜನ್ ಸಿಂಗ್ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಶನಿವಾರ ಅವರು ಕೋಲ್ಕತ್ತ ನೈಟ್ ರೈಡರ್ಸ್‌ ಬಳಗವನ್ನು ಸೇರಿಕೊಂಡಿದ್ದಾರೆ. ಇಲ್ಲಿಯ ಡಿ.ವೈ. ಪಾಟೀಲ ಕ್ರೀಡಾಂಗಣದ ಸಮೀಪವಿರುವ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿರುವ ತಂಡವನ್ನು ಕೂಡಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಆಫ್‌ಸ್ಪಿನ್ನರ್ ಹರಭಜನ್, ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿ ಆಡಲಿದ್ದಾರೆ. ಈ ಮೊದಲು ಅವರು ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿದ್ದರು. ಐಪಿಎಲ್‌ನ ಆರಂಭದ ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

ಈಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹರಭಜನ್ ಅವರನ್ನು ಕೆಕೆಆರ್ ತಂಡವು ಎರಡು ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.

ತಂಡದಲ್ಲಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರಕೋಟಿ, ಸಂದೀಪ್ ವರಿಯರ್ ಮತ್ತು ಹೊಸ ಪ್ರತಿಭೆ ವೈಭವ್ ಅರೋರಾ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ಇದೇ ತಂಡದವರು. ಅವರು ಸೋಮವಾರ ತಂಡವನ್ನು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.

ಕೆಕೆಆರ್ ತಂಡವು ಈ ಸಲದ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 11ರಂದು ಹೈದರಾಬಾದ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡಲಿದೆ.

ಈ ಸಲದ ಟೂರ್ನಿಯಲ್ಲಿ ಯಾವುದೇ ತಂಡವೂ ತನ್ನ ತವರಿನಂಗಳದಲ್ಲಿ ಒಂದೂ ಪಂದ್ಯವನ್ನು ಆಡುವುದಿಲ್ಲ.

error: Content is protected !!