fbpx

ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆ: ಕ್ರಿಯಾಯೋಜನೆ ಬಗ್ಗೆ ಚರ್ಚೆ: ಸದಸ್ಯರ ನಡುವೆ ಮಾತಿನ ಚಕಮಕಿ

ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆಯು, ಗ್ರಾ.ಪಂ ಅಧ್ಯಕ್ಷರಾದ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಎಂದಿನಂತೆ ಕಳೆದ ತಿಂಗಳ ಗ್ರಾಮ ಪಂಚಾಯಿತಿಯ ಜಮಾ ಖರ್ಚಿನ ಬಗ್ಗೆ ಚರ್ಚೆ ನಡೆಸಲಾಯಿತು. ೨೦೨೨-೨೩ ನೇ ಸಾಲಿನ ವರ್ಗ ೧ ರ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಪಿಡಿಓ ಸಂತೋಷ್ ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ವರ್ಗ ೧ ರ ಕ್ರಿಯಾಯೋಜನೆ ತಯಾರಿಸುವ ವಿಷಯದಲ್ಲಿ ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಉಳಿದವರಿಗೆ ವಾರ್ಡ್ ಅಭಿವೃದ್ಧಿ ಪಡಿಸುವ ವಿಷಯದಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ತಮ್ಮ ತಮ್ಮ ವಾರ್ಡ್ ನ‌ ಕೆಲಸಗಳನ್ನು ನೀಡುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರಾದ ದಿನೇಶ್ ಅವರು, ಕೆಲಸಗಳನ್ನು ನೀಡುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದರು. ಈ ಸಂದರ್ಭ ದಿನೇಶ್ ಹಾಗೂ ಕೆ.ಬಿ.ಶಂಶುದ್ಧೀನ್ ಅವರ ನಡುವೆ ಮಾತಿನ‌ ಚಕಮಕಿ ನಡೆಯಿತು. ಪಂಚಾಯಿತಿ ಸದಸ್ಯರಾದವರಿಗೆ ತಮ್ಮ ವಾರ್ಡ್ ನ ಬಗ್ಗೆ ಕಾಳಜಿ ಇರಬೇಕು. ಕಳೆದ ಸಭೆಯಲ್ಲಿಯೇ ವಾರ್ಡ್ ನ ಅಭಿವೃದ್ಧಿ ಕೆಲಸಗಳನ್ನು ನೀಡುವ ಬಗ್ಗೆ ಪಿಡಿಓ‌ ತಿಳಿಸಿದ್ದರು. ಆದರೆ ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿ, ಕ್ರಿಯಾಯೋಜನೆ ತಯಾರಿಸಲು ಕಾಮಗಾರಿಗಳ ಮಾಹಿತಿ ನೀಡುವುದಿಲ್ಲ ಎಂದು ಬೇಜವಾಬ್ದಾರಿಯಿಂದ ಉತ್ತರಿಸುವುದು ಖಂಡನೀಯ. ಇಂತಹವರಿಂದ ಉಳಿದ ಸದಸ್ಯರಿಗೆ ಊರಿನ್ನು ಅಭಿವೃದ್ಧಿ ಪಡಿಸುವ ವಿಷಯದಲ್ಲಿ ತೊಂದರೆಯಾಗುತ್ತಿದೆ ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಆಕ್ರೋಶ್ ವ್ಯಕ್ತಪಡಿಸಿದರು.

೧೫ ನೇ ಹಣಕಾಸಿನ ಕ್ರಿಯಾಯೋಜನೆ ಪಟ್ಟಿ ತಯಾರಾಗಿದ್ದು, ಕೆಲಸಗಳನ್ನು ಪ್ರಾರಂಭಿಸುವಂತೆ ಪಿಡಿಓ ಸಭೆಗೆ ಮಾಹಿತಿ ನೀಡಿದರು. ನಂತರ ಸದಸ್ಯರಾದ ಫಿಲೋಮಿನಾರವರು, ಬಸವನತ್ತೂರಿನಲ್ಲಿ ವಾಟರ್ ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ವಾಟರ್ ಮ್ಯಾನ್ ಗೆ ಒಮ್ಮೆ ತಿಳಿಹೇಳುವಂತೆ ತಿಳಿಸಿದರು. ಇದಕ್ಕೆ ಸದಸ್ಯರಾದ ಗೌರಮ್ಮ, ಗಿರೀಶ್ ಹಾಗೂ ದಿನೇಶ್ ಇನ್ನಿತರರು ಸಾತ್ ನೀಡಿದರು. ಈಗಾಗಲೇ ಇದರ ಬಗ್ಗೆ ಸಾಕಷ್ಟು ದೂರು ಬಂದಿದ್ದು, ಕೂಡಲೇ ಸರಿಪಡಿಸುವುದಾಗಿ ಪಿಡಿಓ ಪ್ರತಿಕ್ರಿಯಿಸಿದರು.

ನಂತರ ಸಾರ್ವಜನಿಕರ ಅರ್ಜಿ ಮಂಡಿಸಲಾಯಿತು. ಕಂದಾಯ ನಿಗದಿ ಪಡಿಸುವ ಬಗ್ಗೆ, ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ ಬಗ್ಗೆ ಬಂದ ಅರ್ಜಿಗಳನ್ನು ಪಿಡಿಓ ಸಭೆಗೆ ಮಂಡಿಸಿದರು.

ಚಿಕ್ಕತ್ತೂರಿನ ಹೋಂ ಸ್ಟೇ ರದ್ದುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರಾದ ದಿನೇಶ್ ಹಾಗೂ ಭಾಗ್ಯರವರು ಒತ್ತಾಯಿಸಿದರು. ಈ ಸಂದರ್ಭ ದಿನೇಶ್ ಹಾಗೂ ಬೋಗಪ್ಪರವರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪಿಡಿಓ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಹೋಂ ಸ್ಟೇ ಗೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಸಂಬಂಧಪಟ್ಡವರಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಪಿಡಿಓ ಉತ್ತರಿಸಿದರು.

ಸುಂದರನಗರ, ವಿನಾಯಕ ಬಡಾವಣೆ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಓರ್ವ ವಿದ್ಯಾರ್ಥಿಗೆ ಬಸವೇಶ್ವರ ಬಡಾವಣೆಯಲ್ಲಿ ನಾಯಿ ಕಚ್ಚಿದೆ. ಸುಂದರನಗರದ ಮಹಿಳೆಯೋರ್ವರಿಗೆ ನಾಯಿ ಕಚ್ಚಿದ್ದು, ಕೂಡಲೇ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಮಣಿ ಧ್ವನಿಗೂಡಿಸಿದರು.
ನಂತರ ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ಚರ್ಚೆಗಳು ನಡೆದವು. ಪಿಡಿಓ ಸಂತೋಷ್ ಅವರು ಸಭೆಯಲ್ಲಿ ಹಾಜರಿದ್ದವರಿಗೆ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.

error: Content is protected !!