ಕುಕ್ಕುಟ ಮತ್ತು ಜಾನುವಾರು ಆಹಾರ ತಯಾರಿಕಾ ಘಟಕ ಮತ್ತು ಮಾರಾಟ ಕೇಂದ್ರ ಸ್ಥಾಪನೆಗೆ ಪರವಾನಿಗೆ ಕಡ್ಡಾಯ

ಮಡಿಕೇರಿ ಏ.04:-ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಕಾಯ್ದೆ 1987 ರ ಪ್ರಕಾರ ಕುಕ್ಕುಟ (ಕೋಳಿ) ಮತ್ತು ಜಾನುವಾರು(ಪಶು) ಆಹಾರ ತಯಾರಿಕಾ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಮತ್ತು ಸಂಘ ಮತ್ತು ಸಂಸ್ಥೆಗಳು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸರಿಯಾದ ಗುಣಮಟ್ಟದ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಿಸಲು ಮತ್ತು ಮಾರಾಟ ಮಾಡಲು ಪರವಾನಿಗೆ (ಲೈಸೆನ್ಸ್)ಪಡೆಯುವುದು ಕಡ್ಡಾಯವಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಪಾಲಿಕ್ಲಿನಿಕ್ ವಿಭಾಗದ ಉಪ ನಿರ್ದೇಶಕರಾದ ಡಾ.ಮಾದಪ್ಪ ಅವರು ತಿಳಿಸಿದ್ದಾರೆ.

ಸ್ಥಳೀಯವಾಗಿ ಈಗಾಗಲೇ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಕೈಗಾರಿಕಾ ಇಲಾಖೆಯಿಂದ ಪರವಾನಿಗೆ ಪಡೆದಿದ್ದರೂ ಕೂಡ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಿಗೆ ಪಡೆಯುವುದು ಮತ್ತು ಈ ರೀತಿ ಪಡೆದ ಪರವಾನಿಗೆಯು ಪ್ರತಿ ವರ್ಷ ಡಿಸೆಂಬರ್ ಮಾಹೆಗೆ ಮುಕ್ತಾಯವಾಗುತ್ತಿದ್ದು, ನವೀಕರಣವನ್ನು ಪ್ರತಿ ವರ್ಷದ ಜನವರಿ 1 ಕ್ಕೆ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
2022 ನೇ ಸಾಲಿಗೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ನೂತನ ಪರವಾನಿಗೆ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧುವಿನ ಜಾಲತಾಣದಲ್ಲಿ ಚಾಲನೆಗೊಂಡಿದೆ.

ಆದ್ದರಿಂದ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು sevasindhuservices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪರವಾನಿಗೆ ಪಡೆಯುವಂತೆ ಮತ್ತು ಪರವಾನಿಗೆ ಪಡೆಯದೇ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನೆ ಮತ್ತು ಮಾರಾಟ ಮಾಡಿದ್ದಲ್ಲಿ, ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ (ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ) ಆದೇಶದಂತೆ ಕ್ರಮ ವಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಸಹಾಯಕ ನಿರ್ದೇಶಕರು/ಸ್ಥಳೀಯ ಪಶುವೈದ್ಯಾಧಿಕಾರಿ ಇವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಪಾಲಿಕ್ಲಿನಿಕ್ ವಿಭಾಗದ ಉಪ ನಿರ್ದೇಶಕರಾದ ಡಾ. ಮಾದಪ್ಪ ಅವರು ತಿಳಿಸಿದ್ದಾರೆ.

error: Content is protected !!