ಕುಂಭ ಮೇಳದಲ್ಲಿದ್ದ ಮುಸ್ಲಿಂ ಯೋಗಿ!

ಹರಿದ್ವಾರ: ವೈಷ್ಣವರಂತೆ ಕಾಣುವ ವೇಷ, ಹಣೆಯಲ್ಲಿ ‘ಯು’ ಆಕಾರದ ಶ್ರೀಗಂಧದ ತಿಲಕ, ಮೈಮೇಲೆ ಕೇಸರಿ ಬಟ್ಟೆ, ಬಾಯಲ್ಲಿ ಮಂತ್ರ, ಭಜನೆ ಪಠಿಸುತ್ತ ಮಹಾಕುಂಭದ ಬೈರಾಗಿ ಕ್ಯಾಂಪ್ ನಲ್ಲಿ ಕಾಣಿಸಿಕೊಂಡಿದ್ದೇ ಮಮ್ತಾಜ್ ಅಲಿ ಖಾನ್..!

ಈ ಮುಸ್ಲಿಂ ವ್ಯಕ್ತಿಯ ಬಗ್ಗೆ ಕೇಳಿದ್ರೆ ನಿಮಗೂ ಆಶ್ಚರ್ಯವಾಗಬಹುದು. ಕೇರಳದ ತಿರುವನಂತಪುರದ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಶ್ರೀ ಎಂ (ಮಮ್ತಾಜ್ ಅಲಿ ಖಾನ್) ಅವರು, ಅಪ್ಪಟ ಹಿಂದೂ ಸಾಧುವಾಗಿ ಭಕ್ತಾದಿಗಳಿಗೆ ಭಗವದ್ಗೀತೆ ಪ್ರವಚನ ನೀಡುತ್ತಿದ್ದಾರೆ. ‘ದೇವರಿಗೆ ಕೃಷ್ಣ, ಅಲ್ಲಾ, ಕ್ರಿಸ್ತ ಮುಂತಾದ ನಾಮಗಳಿವೆ. ಈ ಹೆಸರುಗಳ ಹೊರತಾಗಿಯೂ ದೇವರೊಬ್ಬನೇ! ಒಮ್ಮೆ ಈ ಸತ್ಯವನ್ನು ನಾವು ಅರಿತರೆ, ಭಗವಂತನನ್ನು ಕಾಣುವುದು ಸುಲಭ’ ಎನ್ನುತ್ತಾರೆ ಶ್ರೀ ಎಂ.

ಆಂಧ್ರಪ್ರದೇಶದ ಮಾದನಪಲ್ಲಿಯಲ್ಲಿ ಸತ್ಸಂಗ ಫೌಂಡೇಶನ್‌ ನ ಶಾಲೆ ಮತ್ತು ಕ್ಲಿನಿಕ್‌ ಮುನ್ನಡೆಸುತ್ತಿರುವ ಇವರು, ಹಿಂದುಳಿದ ವರ್ಗದವರಿಗೆ ಅಧ್ಯಾತ್ಮಿಕ ಶಿಕ್ಷಣ ನೀಡುತ್ತಿದ್ದಾರೆ.

ಶ್ರೀ ಎಂ ಅವರ ಈ ಕಾರ್ಯಕ್ಕೆ ಕಳೆದವರ್ಷ ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಒಲಿದಿತ್ತು.

ಮಮ್ತಾಜ್‌ ಅಲಿ ಖಾನ್‌ ಬಾಲ್ಯದಿಂದಲೇ ಹಿಂದೂ ಧರ್ಮದ ಸೆಳೆತಕ್ಕೆ ಒಳಪಟ್ಟರು. 18ನೇ ವಯಸ್ಸಿನಲ್ಲಿ ಮನೆ ತೊರೆದು, ಹಿಮಾಲಯದಲ್ಲಿ ಗುರುವಿನ ಹುಡುಕಾಟ ನಡೆಸಿದರು.

ರಿಷಿಕೇಶದಿಂದ ಬದರಿನಾಥ ವರೆಗೆ ಗುರುವಿನ ಹುಡುಕಾಟದಲ್ಲಿ ಅಲೆದರು. ಕೊನೆಗೂ ಬದರಿನಾಥದ ಹಿಂದಿನ ಗುಹೆಯೊಂದರಲ್ಲಿ ಮಹಾನ್‌ ಯೋಗಿಯ ದರ್ಶನ ಭಾಗ್ಯ ಸಿಕ್ಕಿತು.

ಮಹಾನ್ ಯೋಗಿಯ ದರ್ಶನವಾದಬಳಿಕ ಇವರ ಬದುಕಿನ ದಿಕ್ಕೇ ಬದಲಾಯಿತು. ಈಗ ಕುಂಭಮೇಳದಲ್ಲಿ ಇವರ ವೇದೋಪನಿಷತ್‌, ಯೋಗ ಸೂತ್ರಗಳ ಕುರಿತಾದ ಪ್ರವಚನ ಕೇಳಲು ಭಕ್ತಾದಿಗಳು ಮುಗಿಬೀಳುತ್ತಿದ್ದಾರೆ.

error: Content is protected !!