ಕುಂದಾನಗರಿಯಲ್ಲಿ ಹಸಿದವರಿಗೆ ಪಾಲಿಗೆ ಆಸರೆಯಾದ ಯುವಕರ ತಂಡ…

ಸ್ವಂತ ಖರ್ಚಿನಲ್ಲಿ 2700 ಜನರಿಗೆ ಊಟ ನೀಡಿದ ಕೈಗಳು!

ಕಳೆದ ಹತ್ತು ದಿನಗಳಿಂದ ನಿರಂತರ ಉಚಿತ ಊಟ ಹಾಗು ಉಪಹಾರದ ಸೇವೆ

ಬೆಳಗಾವಿ : ಕೊರೋನಾ ಸೋಂಕಿನಿಂದ ಭಯಪಟ್ಟು ಮನೆ ಸೇರಿಕೊಳ್ಳಲು ಜನಸಾಮಾನ್ಯರು ಹರಸಾಹಸ ಆಡುತ್ತಿರುವ ಈ ಸಂದರ್ಭದಲ್ಲಿ, ಸ್ವಂತ ಖರ್ಚಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ ಕಂಗೆಟ್ಟಿರುವ ಜನರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ನಿರತವಾಗಿದೆ ಬೆಳಗಾವಿಯ ಈ ತಂಡ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಉಚಿತ ಊಟ ಹಾಗೂ ಉಪಹಾರ ನೀಡುತ್ತಿದ್ದರು.

ಹೌದು ಬೆಳಗಾವಿ ನಗರ ಪ್ರದೇಶಕ್ಕೆ ದೂರದ ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ನಾಗರಾಜ್ ಗಸ್ತಿ ಎಂಬ ಯುವಕ ಹಾಗೂ ಅವರ ಗೆಳೆಯರ ಬಳಗ ಸೇರಿಕೊಂಡು ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಹತ್ತು ದಿನಗಳಿಂದ ನಿರಂತರವಾಗ
ನಡೆಯುತ್ತಿರುವ ಈ ಸೇವಾ ಕಾರ್ಯದಲ್ಲಿ ತಾವೇ ಕೈಯಾರೆ ಆಹಾರ ತಯಾರಿಸಿ ಅವಶ್ಯಕತೆ ಇದ್ದವರಿಗೆ ತಲುಪಿಸುವ ಕೆಲಸವನ್ನ ಈ ಯುವಕರು ಮಾಡುತ್ತಿದ್ದಾರೆ.

ಪ್ರತಿನಿತ್ಯ ಬೆಳಿಗ್ಗೆ ಸುಮಾರು 100 ಬಾಕ್ಸ್ ಉಪಹಾರವನ್ನು ತಮ್ಮ ಮನೆಯಲ್ಲಿ ತಯಾರಿಸುವ ಯುವಕರು ನಗರದ ಜಿಲ್ಲಾಸ್ಪತ್ರೆ, ಬಸ್ ನಿಲ್ದಾಣ, ಖಾಸಗಿ ಆಸ್ಪತ್ರೆಗೆಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ಹಸಿವಿನಿಂದ ಬಳಲುವ ಜನರಿಗೆ ನೀಡುತ್ತಾರೆ. ಇನ್ನೂ ರಾತ್ರಿ ವೇಳೆಗೆ 100 ಬಾಕ್ಸ್ ಊಟವನ್ನು ತಾವೇ ತಯಾರಿಸಿ ಹಸಿದವರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಸಮಾನ ಮನಸ್ಕ ಯುವಕರ ತಂಡ ಸೇರಿಕೊಂಡು ಈ ಕೆಲಸ ಮಾಡುತ್ತಿದ್ದು ಸೇವೆಯಲ್ಲಿ ಕೃತಜ್ಞತಾ ಭಾವ ಪಡೆಯುತ್ತಿದ್ದಾರೆ.

ಸ್ವಂತ ಖರ್ಚಿನಲ್ಲಿ ಸೇವಾ ಕಾರ್ಯ : ಈ ಸೇವಾ ಕಾರ್ಯದಲ್ಲಿ ತೊಡಗಿರುವ ಯುವಕರು ಯಾರು ರಾಜಕೀಯ ಹಿನ್ನಲೆಯವರು. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ತಾವು ಸ್ವಂತ ದುಡಿಮೆಯ ಹಣದಲ್ಲಿ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಖಾಸಗಿ ಉದ್ಯೋಗಿಯಾಗಿರುವ ನಾಗರಾಜ ಗಸ್ತಿ ಹಾಗೂ ಅವರ ಸ್ನೇಹಿತರಾದ ಅಮಿತ ಟೊಳ್ಕೆ, ಗೌತಮ ಕೊಲ್ಕಾರ, ಗಜಾನನ ಕಾಂಬಳೆ, ಕಾರ್ತಿಕ ಕಾಂಬಳೆ, ಭರತ ಕಾಂಬಳೆ ಮತ್ತು ವಿನಯ ಟುಬಾಕಿ ಎಂಬುವವರು ಸೇರಿಕೊಂಡು ಪ್ರತಿನಿತ್ಯ ಸುಮಾರು 200 ಜನರಿಗೆ ಊಟ ನೀಡುತ್ತಿದ್ದಾರೆ.

ಹತ್ತುದಿನ 2700 ಜನರಿಗೆ ಊಟ : ಈ ಯುವಕರ ಸೇವಾ ಕಾರ್ಯ ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ‌. ಲಾಕ್ ಡೌನ್ ಘೋಷಣೆಯಾದ ನಂತರದಲ್ಲಿ ಕಳೆದ ಹತ್ತು ದಿನಗಳಿಂದ ಹಸಿದ ಹೊಟ್ಟೆಗಳಿಗೆ ಆಸರೆಯಾಗುವ ಕಾಯಕ ಮುಂದುವರೆಸಿದ್ದಾರೆ. ಇಲ್ಲಿಯವರೆಗೆ ಸುಮಾರು 2700 ಜನರಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಈ ಯುವಕರು ಮಾಡಿದ್ದಾರೆ. ತಮ್ಮ ಮನೆಯಲ್ಲಿ ತಯಾರಿಸಿದ ಊಟವನ್ನು ಬೈಕ್ ಮೇಲೆ ನಗರ ಪ್ರದೇಶದ ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದು ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


“ಕೊರೋನಾ ಸೋಂಕು ಹೆಚ್ಚಳವಾದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನ ಬೆಳಗಾವಿಯ ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದು ಲಾಕ್ ಡೌನ್ ಹಿನ್ನಲೆಯಲ್ಲಿ ಊಟದ ತೊಂದರೆಯಾಗುತ್ತಿದ್ದು, ಹಸಿದವರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯ ಮುಂದುವರೆದಿದೆ. ಸುಮಾರು ಹತ್ತು ದಿನಗಳಿಂದ ದಿನಕ್ಕೆ 200 ಜನಕ್ಕೆ ಉತ್ತಮ ಗುಣಮಟ್ಟದ ಉಚಿತ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಈ ಕಾರ್ಯ ಇನ್ನೂ ಮುಂದುವರಿಯಲಿದೆ. ಕೊರೋನಾ ಮಹಾಮಾರಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು ಇನ್ನಷ್ಟು ದಿನ ಎಲ್ಲರೂ ಜಾಗೃತೆಯಿಂದ ಇರಬೇಕು.”

ನಾಗರಾಜ ಗಸ್ತಿ
ಉಚಿತ ಊಟ ನೀಡುತ್ತಿರುವ ಯುವಕ.


“ನಮ್ಮ ತಾಯಿಗೆ ಕೊರೋನಾ ಆಗಿತ್ತ ರಿ. ದಿನಸ ಊಟದ ತ್ರಾಸ್ ಬಾಳ ಇಗಿತ್ತು. ಹೋಟೆಲಕ್ಕ ಹೋಗಿ ತಿನ್ನುವಷ್ಟು ರೊಕ್ಕ ನಮ್ಮ ಕಡೆ ಇಲ್ಲರಿ. ದಿನಾ ಮಧ್ಯಾಹ್ನ ಮತ್ತ ರಾತ್ರಿ ಈ ಅಣ್ಣಾಗೋಳ ಬಂದು ಊಟಾ ಕೊಡ್ತಾರಿ. ನಮ್ಮಂತ ಬಡವರ ಪಾಲಿಗಿ ಸಧ್ಯ ಇವರೆ ದೇವರ ಆಗ್ಯಾರಿ”

ಬಾಳಪ್ಪ ಹಲಗೇರಿ
ಸೋಂಕಿತ ವ್ಯಕ್ತಿಯ ಸಂಬಂಧಿ


error: Content is protected !!