fbpx

ಕಾವೇರಿ ಪಾಲಿಟೆಕ್ನಿನ ಕಾಲೇಜು ವಿದ್ಯಾರ್ಥಿಗಳಿಂದ ಬಾಹ್ಯಾಕಾಶ ವೀಕ್ಷಣಾಲಯ ಕೇಂದ್ರ ಸ್ಥಾಪನೆ

ಕೊಡಗು ಜಿಲ್ಲೆಯ ಭವಿಷ್ಯದ ಎಂಜಿನಿಯರ್ ಗಳು ಏನಾದರೊಂದು ಸಾಧನೆಗಳು, ಆವಿಷ್ಕಾರ ಗಳು ಮಾಡುತ್ತಲೇ ಇರುತ್ತಾರೆ. ಇಷ್ಟು ದಿನ ಕಾರು ಸ್ಕೂಟರ್ ಅಂತ ಇದ್ದವರು ಇದೀಗ ಭೂಮಿಯಿಂದ ಮತ್ತೊಂದು ಪ್ರಪಂಚವನ್ನು ಹತ್ತಿರದಿಂದ ನೋಡುವ ಯೋಜನೆಯೊಂದಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ಹೌದು,ಇಂತಹಾ ಸಾಧನೆ ಮಾಡಿರುವುದು ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಕಾವೇರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು. ಅಂದ ಹಾಗೆ ಇವರು ಆವಿಷ್ಕಾರ ಮಾಡಿರುವುದು “ಬಾಹ್ಯಾಕಾಶ ವೀಕ್ಷಣಾಲಯ ಕೇಂದ್ರ”.

ಪಾಲಿಟೆಕ್ನಿನ ಮೆಕ್ಯಾನಿಕಲ್ ವಿಭಾಗದ ಶಿಕ್ಷಕ ಉನ್ನಿಕೃಷ್ಣನ್, ಹೆಚ್.ಓ.ಡಿ ದೇವಯ್ಯ,ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ 27 ವಿದ್ಯಾರ್ಥಿಗಳು ಈ ವಿನೂತನ ಪ್ರಯೋಗ ಮಾಡಿದ್ದಾರೆ.

ಪುಣೆಯ ಜಿಎಸ್ಓ ಟೆಲಿಸ್ಕೋಪ್ ಕಂಪೆನಿಯಿಂದ 1500 ಫೋಕಲ್ ಲೆನ್ಸ್ ಉಳ್ಳ ಟೆಲೆಸ್ಕೋಪ್ ಅನ್ನು ಖರೀದಿಸಿ, ಇದಕ್ಕೆ ಅನುಕೂಲವಾಗುವಂತೆ ಚೇಂಬರ್,360॰ ತಿರುಗುವ ಸಾಮರ್ಥ್ಯ, ಅದರ ಸಂಪೂರ್ಣ ಹೊರಮೈ ಡಿಸೈನ್ ಅನ್ನು ಮಾಡಲಾಗಿದ್ದು ತಳಭಾಗ ಅಂದಾಜು 6 ಅಡಿ ಮತ್ತು 5 ಅಡಿಗಳಷ್ಟು ತಿರುಗುವ(ರೊಟೇಷನ್) ಚೇಂಬರ್ ಮಾಡಲಾಗಿದೆ. ಇದೀಗ ಈ ಸಾಧನವನ್ನು ಕಾಲೇಜಿನ ಆಡಳಿತ ಮಂಡಳಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ.

ಈಗಾಗಲೇ ಪುಣೆಯಿಂದ ತರಲಾದ ಟೆಲಿಸ್ಕೋಪ್ ಮತ್ತು ವಿದ್ಯಾರ್ಥಿಗಳ ಆವಿಷ್ಕಾರದ ಛೇಂಬರ್ ಸಹಾಯದಿಂದ ಕಳೆದ ಹತ್ತು ದಿನದಲ್ಲಿ ಚಂದ್ರನಿಂದ ಹಿಡಿದು ನೆಬುಲ್ಲಾ ಗ್ರಹದವರೆಗೂ ಸೆರೆ ಸಿಕ್ಕಿದೆ.

ಈ ಸಂಪೂರ್ಣ ಯೋಜನೆ ಮತ್ತು ನಿರ್ಮಾಣವನ್ನು ಶಿಕ್ಷಕ ಉನ್ನಿಕೃಷ್ಣನ್ ಮಾಡಿದ್ದು, ಇವರ ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿಗಳು ಈ ತಂತ್ರಜ್ಞಾನ ಆವಿಷ್ಕಾರ ಮಾಡಲು ಯಶಸ್ವಿಯಾಗಿದ್ದಾರೆ.

ಸಂಜೆ 6.30 ರ ನಂತರ ಇಲ್ಲಿಂದ ಬಾಹ್ಯಾಕಾಶದಲ್ಲಿನ ಚಲನವಲನ ವೀಕ್ಷಣೆ ಮಾಡಬಹುದಾಗಿದ್ದು, ಈ ಸಂಪೂರ್ಣ ಯೋಜನೆಗೆ 90 ಸಾವಿರ ರುಪಾಯಿ ಖರ್ಚಾಗಿದ್ದು ಮುಂದಿನ ದಿನದಲ್ಲಿ ನೆಹರು ಬಾಹ್ಯಾಕಾಶ ಕೇಂದ್ರದ ಮಾದರಿಯಲ್ಲಿ ಸುಸ್ಸಜ್ಜಿತ ಕೇಂದ್ರ ಕೊಡಗಿನಲ್ಲಿ ಮಾಡಿ,ಸಾರ್ವಜನಿಕ ಮುಕ್ತ ಮಾಡುವ ಉದ್ದೇಶವಿದೆ ಎಂದು ಶಿಕ್ಷಕ ಉನ್ನಿಕೃಷ್ಣನ್ ತಿಳಿಸಿದ್ದಾರೆ.

error: Content is protected !!