ಕಾಲಿಗೆ ಕಪ್ಪು ದಾರ ಕಟ್ಟೋದ್ಯಾಕೆ?!

ಸಾಮಾನ್ಯವಾಗಿ ಎಲ್ಲ ಪೋಷಕರು ತಮ್ಮ ಮಕ್ಕಳ ಕಾಲಿಗೆ ಕಪ್ಪು ದಾರ ಕಟ್ಟಿರುತ್ತಾರೆ. ಹುಡುಗಿಯರು, ಮಕ್ಕಳು, ಹುಡುಗರೆನ್ನದೆ ಸೂಕ್ಷ್ಮವಾಗಿ ಗಮನಿಸಿದರೆ ಬಹುತೇಕರ ಕಾಲಿನಲ್ಲಿ ಕಪ್ಪು ದಾರ ಕಾಣಿಸುತ್ತದೆ. ಇನ್ನೂ ಹುಡುಗಿಯರ ಎಡಗಾಲಿಗೆ ಮತ್ತು ಹುಡುಗರ ಬಲಗಾಲಿಗೆ ಈ ಕಪ್ಪು ದಾರವನ್ನು ಕಟ್ಟಲಾಗಿರುತ್ತೆ. ಹಾಗಾದ್ರೆ ಇದರಿಂದಾಗುವ ಉಪಯೋಗವಾದ್ರೂ ಏನು? ಅಥವಾ ಕೇವಲ ಫ್ಯಾಷನ್ಗೋಸ್ಕರ ಕಟ್ಟಿಕೊಂಡಿರುತ್ತಾರಾ? ಈ ಎಲ್ಲದರ ಕುರಿತು ಕುತೂಹಲ ಇದ್ರೆ ಮುಂದೆ ಓದಿ.
ಮೊದಲಿಗೆ ಪೋಷಕರು ತಮ್ಮ ಮಕ್ಕಳ ಕೈ ಮತ್ತು ಕಾಲುಗಳಿಗೆ ಕಪ್ಪು ದಾರ ಕಟ್ಟುವುದು ಕೆಟ್ಟ ಕಣ್ಣು ತಾಕದಿರಲಿ ಅಥವಾ ಕೆಟ್ಟ ದೃಷ್ಟಿಯಿಂದ ಈ ದಾರ ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಿಂದ. ಹೌದು, ಕಪ್ಪು ದಾರಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಶಕ್ತಿಯಿದೆ ಎಂಬ ನಂಬಿಕೆಯಿರುವುದರಿಂದ, ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕಾಲಿನಲ್ಲೂ ಕಪ್ಪು ದಾರ ಕಾಣ ಸಿಗುತ್ತೆ.
ಇನ್ನೂ ಮತ್ತೊಂದು ನಂಬಿಕೆಯೆಂದರೆ, ಕಪ್ಪು ಬಣ್ಣಕ್ಕೆ ಶಾಖ ಹೀರುವ ಶಕ್ತಿಯಿದ್ದು, ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂಬುದು. ಹಾಗಾಗಿ ಕೆಲವರು ಕೈ-ಕಾಲಿಗೆ ಕಪ್ಪುದಾರ ಕಟ್ಟಿಕೊಂಡಿರುತ್ತಾರೆ.
ಕೆಲವರಂತೂ ನಂಬಿಕೆಗಳನ್ನೆಲ್ಲಾ ಬದಿಗೊತ್ತಿ, ಕೇವಲ ಫ್ಯಾಷನ್ಗಾಗಿ ಕಟ್ಟಿಕೊಳ್ಳುತ್ತಾರೆ. ಅವರು ಕೇವಲ ಕಪ್ಪುದಾರವನ್ನಷ್ಟೇ ಕಟ್ಟಿಕೊಳ್ಳುವುದಿಲ್ಲ. ಅದರಲ್ಲೂ ಭಿನ್ನ-ವಿಭಿನ್ನವಾದ ವಿನ್ಯಾಸಗಳನ್ನು ಹುಡುಕಿ ಅದನ್ನು ಸ್ಟೈಲ್ಗಾಗಿ ಕಟ್ಟಿಕೊಳ್ಳುತ್ತಾರೆ.
ಮತ್ತಷ್ಟು ಮೂಲಗಳು ತಿಳಿಸುವಂತೆ, ಜೀವನದಲ್ಲಿ ಹಣಕಾಸು ಸಮಸ್ಯೆಗಳೇನಾದರೂ ಇದ್ರೆ, ಮಂಗಳವಾರದಂದು ಪೂಜೆ ಮಾಡಿ, ಕಪ್ಪುದಾರ ಕಟ್ಟಿಕೊಳ್ಳಬೇಕಂತೆ. ಹೀಗೆ ಮಾಡಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತೆ ಎನ್ನಲಾಗುತ್ತೆ.
ಇದೆಲ್ಲದರ ಜತೆಗೆ, ಕೆಲವರು ಕಾಲಿನಲ್ಲಿ ನೋವು ಕಾಣಿಸಿಕೊಂಡರೆ ಅಥವಾ ನೋವು ಕಾಣಿಸಿಕೊಳ್ಳಬಾರದು ಎಂದು ಕಪ್ಪುದಾರ ಕಟ್ಟಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.