ಕಾರ್ಮಿಕರ ವಲಸೆ, ಸ್ಥಳೀಯರಿಗೂ ಪರದಾಟ: ಲಾಕ್ಡೌನ್ ನಿಂದ ಸಾಗಾಟದ್ದೇ ಸಮಸ್ಯೆ

ಕೊಡಗು: ಮಳೆಗಾಲ ಆರಂಭವಾಗವ ಮುನ್ನ ಕಾಫಿ ತೋಟಗಳಲ್ಲಿ ಸಾಕಷ್ಟು ಕೆಲಸಗಳಿರುತ್ತವೆ. ಆದರೆ ಮಾಡುವುದಕ್ಕೆ ಕಾರ್ಮಿಕರಿಲ್ಲ. ಹೌದು ಹಲ್ಲಿದ್ದರೆ ಕಡಲೆಯಿಲ್ಲ, ಕಡಲೆ ಇದ್ದರೆ ಹಲ್ಲಿಲ್ಲ ಎನ್ನುವಂತಾಗಿದೆ ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆ. ಹೊರ ರಾಜ್ಯ ಜಿಲ್ಲೆಗಳಿಂದ ದಿನನಿತ್ಯ ಕಾಫಿ ತೋಟಗಳಿಗೆ ಆಗಮಿಸಿ ಕೆಲಸ ಮಾಡುತ್ತಿದ್ದರೆ ಕೋವಿಡ್ ಸಂದರ್ಭ ಕಾರ್ಮಿಕರನ್ನು ತೋಟಗಳಿಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರ ಪರಿಣಾಮ ಕಾರ್ಮಿಕರು ಯಾರಾದರೂ ಬಂದು ಕೆಲಸಕ್ಕೆ ಕರೆಯಲಿ ಎನ್ನುವಂತೆ ಬಸ್ ತಂಗುದಾಣ, ಪಟ್ಟಣ ಪ್ರದೇಶದಲ್ಲಿ ಪ್ರತಿನಿತ್ಯ ಬೆಳಗ್ಗೆ ಕಾಯುತ್ತಿರುವ ದೃಶ್ಯ ಸುಂಠಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಮಾದಾಪುರ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿದೆ.

ಕೆಲವೆಡೆ ಕಾಫಿ ತೋಟದ ಕೆಲಸವಾದರೆ, ಇತರೆಡೆ ಬಾಳೆ, ಶುಂಠಿ ಕೃಷಿಗೆ ಕಾರ್ಮಿಕರ ಅಗತ್ಯವಿದ್ದು ಅವರನ್ನು ಕರೆತರಲು ಸಾಧ್ಯವಾಗುತ್ತಿಲ್ಲ. ಇತ್ತ ಕೆಲವು ಎಸ್ಟೇಟ್ ಲೈನ್ ಮನೆಯಲ್ಲಿ ಅಸ್ಸಾಂ, ಬಾಂಗ್ಲ, ತಮಿಳುನಾಡಿನಿಂದ ವಲಸೆ ಬಂದು ಇದ್ದ ಕಾರ್ಮಿಕರು ಸಹ ತಮ್ಮ ಊರಿಗೆ ತೆರಳಿದ್ದು, ಮತ್ತೊಂದು ಹೊಡೆತ ಮಾಲೀಕರಿಗೆ ಬಿದ್ದರೆ, ಅಕ್ಕಪಕ್ಕದ ಸ್ಥಳೀಯ ಕಾರ್ಮಿಕರನ್ನು ವಾಹನದಲ್ಲಿ ಕರೆತರಲು ಲಾಕ್ಡೌನ್ ಹೊಡೆತದಿಂದ ಎಲ್ಲಾ ವರ್ಗದವರೂ ಹೈರಾಣಾಗಿದ್ದಾರೆ.

ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಹೋಲಿಸಿದರೆ, ತಮ್ಮದೇ ತೋಟವಿದ್ದರೂ ದಿನನಿತ್ಯ ಇತರರ ತೋಟದ ಕೆಲಸಕ್ಕೆ ತೆರಳಿ ಒಂದಿಷ್ಟು ಹಣ ಸಂಪಾದಿಸುತ್ತಿದ್ದರು. ಇದೀಗ ಅದಕ್ಕೂ ಬ್ರೇಕ್ ಬಿದ್ದಿರುವುದರಿಂದ ಗ್ರಾಮದಲ್ಲಿ ಸಂಬಂಧಿಕರು, ನೆಂಟರಿಷ್ಟರ ತೋಟದಲ್ಲಿ ಹೊಂದಾಣಿಕೆಯಲ್ಲಿ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

error: Content is protected !!