fbpx

ಕಾರ್ಗಿಲ್ ವಿಜಯ್ ದಿವಸ್ ವಿಶೇಷ

ಬಿ. ಎಂ. ಕಾರ್ಯಪ್ಪ ರವರ ಸಾಹಸ ಗಾಥೆ

ಕ್ಯಾಪ್ಟನ್ ಬಿ.ಎಂ ಕಾರ್ಯಪ್ಪನವರಿಗೆ ಜೂನ್ 20 ರಂದು ಪಾಯಿಂಟ್ 5203 ಅನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಯಿತು. ಕ್ಯಾಪ್ಟನ್ ಕಾರ್ಯಪ್ಪನವರು ಕಮಿಷನ್ ಆಗಿ ಆಗಷ್ಟೇ ಒಂದೂವರೆ ವರ್ಷಗಳಾಗಿದ್ದವು. ೫ನೇ ಪ್ಯಾರಾ ರೆಜಿಮೆಂಟಿನಲ್ಲಿದ್ದ ಕ್ಯಾಪ್ಟನ್ ಕಾರ್ಯಪ್ಪ ತಮ್ಮ ತುಕಡಿಯೊಂದಿಗೆ ಬೆಟ್ಟವನ್ನು ಏರತೊಡಗಿದರು. ಮೇ ತಿಂಗಳಿನಿಂದ ಬೆಟ್ಟ ಏರುತ್ತಲೇ ಇದ್ದ ಸೈನ್ಯ ಏನನ್ನು ಎದುರಿಸುತ್ತಿತ್ತೋ ಕಾರ್ಯಪ್ಪನವರ ತಂಡ ಕೂಡಾ ಅದನ್ನು ಅನುಭವಿಸಿತು. ಬೆಟ್ಟವೇರತೊಡಗಿದ ಅರ್ಧ ಗಂಟೆಯಲ್ಲೇ ಗುಂಡಿನ ದಾಳಿ ನಡೆಯಿತು. ಸ್ವತಃ ಕ್ಯಾ.ಕಾರ್ಯಪ್ಪನವರ ಕುತ್ತಿಗೆಗೆ ಎರಡು ಗುಂಡುಗಳು ಬಿದ್ದವು. ರಕ್ತ ಚಿಲ್ಲನೆ ಹಾರಿತು. ಆದರೂ ಪಾಯಿಂಟಿನ ತುದಿಗೆ ಏರಿದ ತಂಡ ಅದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕಾರ್ಯಪ್ಪನವರು ಗಾಯದ ನಡುವೆಯೂ ಇಬ್ಬರು ಪಾಕ್ ಸೈನಿಕರನ್ನು ಯಮಪುರಿಗೆ ಅಟ್ಟಿದ್ದರು. ಈ ಯಶಸ್ಸಿನ ನಂತರ ಇದೇ ತಂಡವನ್ನು ಲೈನ್ ಆಫ್ ಕಂಟ್ರೋಲ್ ಬಳಿಯ “ಏರಿಯಾ ಕೋನಿಕಲ್” ಅನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಯಿತು. ಆದರೆ ಗಾಯಗೊಂಡ ಕಾರ್ಯಪ್ಪನವರನ್ನು ವಿಶ್ರಾಂತಿಗೆ ಸೂಚಿಸಲಾಯಿತು. ಆದರೆ ಕಾರ್ಯಪ್ಪ ಟಾಸ್ಕ್ ಪೂರ್ಣಗೊಳ್ಳುವವರೆಗೂ ವಿಶ್ರಾಂತಿಯ ಮಾತೇ ಇಲ್ಲ ಎಂದು 22/23 ರ ಹಗಲು ರಾತ್ರಿಯ ಕದನಕ್ಕೆ ಹೊರಟುಹೋದರು. ಬ್ರಡ್ ಅನ್ನು ಜಗಿಯುತ್ತಿದ್ದಾಗ ಅವರ ಕುತ್ತಿಗೆಯಿಂದ ರಕ್ತ ಬ್ಯಾಂಡೇಜಿನಾಚೆಯಿಂದ ಹೊರಬರುತ್ತಿತ್ತು. ಅದನ್ನು ನೋಡಿ ಅಧಿಕಾರಿಗಳೇ ದಂಗಾಗಿಹೋದರು. ಅಂಥಾ ಸ್ಥಿತಿಯಲ್ಲೂ ಕಾರ್ಯಪ್ಪ “ಏರಿಯಾ ಕೋನಿಕಲ್” ನಲ್ಲಿ ಮತ್ತಿಬ್ಬರು ಸೈನಿಕರನ್ನು ಉರುಳಿಸಿ ಟಾಸ್ಕ್ ಪೂರ್ಣಗೊಳಿಸಿದರು.
ಅವರ ಈ ಪರಾಕ್ರಮಕ್ಕೆ ಸೈನ್ಯ “ವೀರ ಚಕ್ರ” ಮತ್ತು “ಸೇನಾ ಮುಖ್ಯಸ್ಥರ ಪ್ರಶಂಸಾ ಪದಕ” ನೀಡಿ ಗೌರವಿಸಿತು. ಇಂದು ಬಿ.ಎಂ ಕಾರ್ಯಪ್ಪನರು ಭಾರತೀಯ ಸೇನೆಯ ಒಂದು ಬ್ರಿಗೇಡ್ ಅನ್ನು ಮುನ್ನಡೆಸುವ ಅಧಿಕಾರಿಯಾಗಿದ್ದಾರೆ. ತಮ್ಮ ಸೇನಾ ಅವಧಿಯಲ್ಲಿ ಒಟ್ಟು ಮೂರು ಶೌರ್ಯ (ಒಂದು ಸೇನಾ ಮೆಡಲ್ )ಪದಕವನ್ನು ಹೊಂದಿರುವ ಬ್ರಿ. ಬಾಳೆಯಡ ಕಾರ್ಯಪ್ಪ ನನ್ನ ಪಾಲಿನ ಕಾರ್ಗಿಲ್ ಹೀರೋ. ಬಹುಶಃ ಇಡೀ ರಾಜ್ಯದಲ್ಲಿ ಮೂರು ಗೆಲೆಂಟರಿ ಪದಕಗಳನ್ನು ಪಡೆದ ಯೋಧ ಕಾರ್ಯಪ್ಪ ಒಬ್ಬರೇ. ಅವರು ನಮ್ಮ ದೇವಭೂಮಿ ನಾಪೋಕ್ಲಿನವರು ಎಂಬುದು ನಮ್ಮ ಹೆಮ್ಮೆ. ಇಂದು ಕಾರ್ಯಪ್ಪ ಸೇನೆಯಲ್ಲಿ ಬ್ರಿಗೇಡಿಯರ್ ಆದರೂ ನಮ್ಮ ಪಾಲಿಗೆ ಅವರು ಯಾವತ್ತೂ ಕಿರಣಣ್ಣಯ್ಯ.

ಬಿ. ಎಂ. ಕಾರ್ಯಪ್ಪ ರವರ ಸಾಹಸ ಗಾಥೆ

( ಸಂಗ್ರಹ)
ಅಜ್ಜಮಕ್ಕಡ ವಿನು ಕುಶಾಲಪ್ಪ

error: Content is protected !!