fbpx

ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ಕಲ್ಪಿಸಿ: ಸರಕಾರಕ್ಕೆ ಮನವಿ

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತು ಕೋವಿಡ್ ಲಾಕ್ ಡೌನ್ ನಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, 10ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕು ಮತ್ತು ಹಳೇ ಬಾಕಿ ಇರುವ ಬಿಲ್ ನ್ನು ಮನ್ನಾ ಮಾಡಬೇಕೆಂದು ಕೊಡಗಿನ ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಮನವಿ ಪತ್ರ ಸಲ್ಲಿಸಿದ ಕಾಫಿ ಬೆಳೆಗಾರರು, ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.

ಮಳೆಯಿಂದ ಕಾಫಿ ಫಸಲು ಹಾನಿಯಾಗಿದ್ದು, ಗಿಡಗಳು ರೋಗಗಳಿಗೆ ತುತ್ತಾಗಿವೆ. ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಬೆಳೆಗಾರರ 10 ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಐ.ಪಿ. ಸೆಟ್ ಪಂಪ್ ಬಳಕೆದಾರರಿಗೆ 10 ಹೆಚ್‌ಪಿ ಉಚಿತವಾಗಿ ಉಪಯೋಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಪ್ರತಿ ಬಿಲ್ಲನ್ನೂ ಪಾವತಿಮಾಡಬೇಕಾಗಿದೆ.

ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮಕ್ಕೆ ತಂದ ನಂತರ ಬೇರೆ ಜಿಲ್ಲೆಗೆ ಯಾವ ರೀತಿ ಉಚಿತವಾಗಿ ನೀಡಿದ್ದಾರೋ ಅದೇ ಮಾದರಿಯಲ್ಲಿ ಕೊಡಗಿಗೂ ಆದೇಶ ಮಾಡಿದ್ದಾರೆ. ಆದರೆ ಈವರೆಗೆ ಆದೇಶ ಕಾರ್ಯಗತವಾಗಿಲ್ಲ ಎಂದು ಪ್ರಮುಖರು ಗಮನಸೆಳೆದಿದ್ದಾರೆ.ಅಲ್ಲದೆ ಬಾಕಿ ಇರುವ ಹಳೇ ಬಿಲ್ಲನ್ನೂ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಈ ಸಂದರ್ಭ ಹಾಜರಿದ್ದರು.

ಕಾಫಿ ಬೆಳೆಗಾರ ಹಾಗೂ ಸೋಮವಾರಪೇಟೆ ಮಂಡಲ ಬಿಜೆಪಿ ಉಪಾಧ್ಯಕ್ಷ ದಾಸಂಡ ರಮೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಗೌತಮ್ ಕಲ್ಲೂರು, ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೇರೂರು ಹಾಗೂ ಪೂಣಚ್ಚ ಮನವಿ ಸಲ್ಲಿಸಿದರು.

error: Content is protected !!