ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಕೊಡಗು: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ವಾಲ್ನೂರುವಿನಲ್ಲಿ ನಡೆದಿದೆ.

ಅಲ್ಲಿನ ಪ್ರಭು ಗಣಪತಿ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದ ತಮಿಳುನಾಡು ತಿರುಚನಾಪಳ್ಳಿಯ ಕಾರ್ಮಿಕ ಏಳುಮಲೈ (50) ಎಂಬುವವರು ಮತ್ತಗದ ದಾಳಿಗೆ ಸಿಲುಕಿ ಉಸಿರು ಚೆಲ್ಲಿರುವ ನತದೃಷ್ಟನಾಗಿದ್ದಾರೆ‌. ಇಂದು ಬೆಳಗ್ಗೆ ಲೈನ್ ಮನೆಯ ಸಮೀಪದ ಹೊಳೆ ಬದಿಗೆ ತೆರಳಿದ್ದ ಏಳುಮಲೈ ಅವರ ಮೇಲೆ ಕಾಡಾನೆ ದಿಢೀರಾಗಿ ಎರಗಿ ತೀವ್ರವಾಗಿ ಘಾಸಿಗೊಳಿಸಿದೆ. ಇದರಿಂದ ಚಿಂತಾಜನಕರಾದ ಏಳುಮಲೈ ಅಸುನೀಗಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಏಳುಮಲೈ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

error: Content is protected !!