ಕಸಾಪ ಹೋಬಳಿ ಘಟಕದ ವತಿಯಿಂದ ನಡೆದ ಕಟ್ಟೆಮನೆ ಪುಟ್ಟಸ್ವಾಮಿ ದತ್ತಿ ನಿಧಿ ಕಾರ್ಯಕ್ರಮ

ಮಡಿಕೇರಿ ಸೆ. 17. ಕಟ್ಟೆಮನೆ ಪುಟ್ಟಸ್ವಾಮಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿ. ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟು ಗಾಂಧೀಜಿಯವರ ಕರೆ ಮೇರೆ ಶನಿವಾರಸಂತೆಯಲ್ಲಿ ಪಾದಯಾತ್ರೆ ಮಾಡಿ ಹಣ ಸಂಗ್ರಹ ಮಾಡಿದ್ದು ಇತಿಹಾಸ ಎಂದು ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಹೋಬಳಿ ಘಟಕದ ವತಿಯಿಂದ ನಡೆದ ಕಟ್ಟೆಮನೆ ಪುಟ್ಟಸ್ವಾಮಿ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ನುಡಿದರು. ಮುಂದುವರೆದ ಅವರು ಶನಿವಾರಸಂತೆ ಜಿಲ್ಲೆಯಲ್ಲಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದಂತಹ ಊರು.
ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಾತ್ರ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ಸಾಧ್ಯವಿದ್ದು ಕನ್ನಡ ಸಾಂಸ್ಕೃತಿಕ ಕೆಲಸ ಮಾಡಲು ಶಿಕ್ಷಕರು ಮುಂದಾದರೆ ಸಾಹಿತ್ಯ ಪರಿಷತ್ ಬೆಳೆಯುತ್ತದೆ.

ಕೊಡಗಿನ 289 ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶನಿವಾರಸಂತೆಯ ಕಟ್ಟೆಮನೆ ಪುಟ್ಟಸ್ವಾಮಿಯವರು ಒಬ್ಬರಾಗಿದ್ದು ಎತ್ತಿನ ಗಾಡಿಯಲ್ಲಿ ಮಡಿಕೇರಿಗೆ ಹೋಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಸ್ಮರಿಸಿದ ಅವರು, ಸ್ಮರಣೆಗಾಗಿ ಹಿರಿಯರ ಹೆಸರಿನಲ್ಲಿ ದತ್ತಿ ಸ್ಥಾಪಿಸಿ ಎಂದು ಕರೆ ನೀಡಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕಸಾಪ ಸದಸ್ಯತ್ವ ಆಂದೋಲನ ಹಮ್ಮಿಕೊಂಡಿದ್ದು ರಾಜ್ಯಧ್ಯಕ್ಷ ಮಹೇಶ್ ಜೋಶಿಯವರ ಸೂಚನೆಯಂತೆ ಸೈನಿಕರಿಗೆ, ಅಂಗವಿಕಲರಿಗೆ ಉಚಿತ ಸದಸ್ಯತ್ವ ನೀಡಲಾಗುವುದು.ಜಿಲ್ಲೆಯಲ್ಲಿ ಸೈನಿಕ ಸಮ್ಮೇಳನ ನಡೆಸುವ ಚಿಂತನೆ ನಡೆದಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ದೇಶಭಕ್ತಿಗೀತೆ ಮತ್ತು ಜಾನಪದ ಗೀತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ನಿವೃತ್ತ ಸೇನಾಧಿಕಾರಿ ಪ್ರೇಮಕುಮಾರ್ “ಬಾಳೊಂದು ನಂದಾದೀಪ’’ಸ್ವರಚಿತ ಕವನ ಸಂಕಲನ ವಿತರಿಸಿದರು.ಶಿಕ್ಷಕಿಯರು, ವಿದ್ಯಾರ್ಥಿಗಳು ಕನ್ನಡ ಭಾವಗೀತೆಗಳನ್ನು ಹಾಡಿ ರಂಜಿಸಿದರು.

ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ ರೂ.50 ಸಾವಿರ ದತ್ತಿನಿಧಿ ಸ್ಥಾಪಿಸುವುದಾಗಿ ಘೋಷಿಸಿದರು.ನಾಡಕಚೇರಿಯ ಖಾಲಿ ಇರುವ ಕಟ್ಟಡವನ್ನು ಕಸಾಪ ಹೋಬಳಿ ಘಟಕದ ಕಚೇರಿ ನಡೆಸಲು ತಾತ್ಕಾಲಿಕ ಅನುಮತಿ ದೊರೆತಿರುವ ಬಗ್ಗೆ ಅಧ್ಯಕ್ಷ ಬಿ.ಬಿ.ನಾಗರಾಜ್ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ
ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ರವರನ್ನು ಕಸಾಪದ ಆಪ್ ಮೂಲಕ ಪರಿಷತ್ತಿನ ಸದಸ್ಯರನ್ನಾಗಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ದಿನೇಶ್ ರವರು ಮನುಷ್ಯನ ಮರಣಾನಂತರ ಸ್ಮರಣೆಗಾಗಿ ದತ್ತಿನಿಧಿ ಕಾರ್ಯಕ್ರಮ ಪೂರಕವಾಗಿದೆ.ಸದಸ್ಯತ್ವ ಶಿಕ್ಷಕರಿಗೆ ಕಡ್ಡಾಯವಾಗಬೇಕು. ಮುಂದಿನ ಕಾರ್ಯಕ್ರಮಗಳಲ್ಲಿ 10 ದತ್ತಿನಿಧಿ ಸ್ಥಾಪನೆ ಮಾಡವ ಪ್ರಯತ್ನ ಮಾಡುವುದಾಗಿ ಎಂದು ಆಶಯ ವ್ಯಕ್ತಪಡಿಸಿದರು.

ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಕಿ ಕ್ರೀಡೆಯಲ್ಲಿ ತಾಲೂಕಿಗೆ ಪ್ರಥಮ ಬಂದ ಕಾರಣ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್ ಮಾತನಾಡಿ, ಕಸಾಪ ದತ್ತಿನಿಧಿ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.ಕನ್ನಡದ ಶಾಲೆಗಳಲ್ಲೆ ಕನ್ನಡ ಭಾಷೆ, ಸಾಹಿತ್ಯದ ಕಂಪು ಹರಡುವುದು ಪ್ರೇರಣಾಧಾಯಕ ಎಂದರು.

ಮುಖ್ಯಶಿಕ್ಷಕ ಬಿ.ಟಿ.ವಿಶ್ವನಾಥ್, ಎಸ್ ಡಿ ಎಂಸಿ ಅಧ್ಯಕ್ಷೆ ಶಾಲಿನಿ, ಕಸಾಪ ಜಿಲ್ಲಾ ಘಟಕದ ಸದಸ್ಯ ಮಂಜುನಾಥ್,,ತಾಲ್ಲೂಕು ಪದಾಧಿಕಾರಿಗಳಾದ ವೀರರಾಜು, ಕೆ.ಪಿ.ಜಯಕುಮಾರ್, ಶ.ಗ.ನಯನತಾರಾ, ಎಚ್.ಬಿ.ಜಯಮ್ಮ, ಶಾಂತಳ್ಳಿ ಘಟಕದ ಅಧ್ಯಕ್ಷ ಸಿ.ಎಸ್ ನಾಗರಾಜ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ.ನಾಗರಾಜ್, ಪದಾಧಿಕಾರಿಗಳಾದ ಎ.ಬಿ.ನಂಜಪ್ಪ, ಶಿವಪ್ಪ, ಶಶಿಕಲಾ, ಸಿ.ಎಂ.ಪುಟ್ಟಸ್ವಾಮಿ, ಎಸ್.ಎಂ.ಮಹೇಶ್, ಪ್ರಕಾಶ್ಚಂದ್ರ, ನರೇಶ್ಚಂದ್ರ, ಮುಖ್ಯಶಿಕ್ಷಕರಾದ ಪುಟ್ಟಸ್ವಾಮಿ, ಮಂಜುನಾಥ್, ಶಿಕ್ಷಕರಾದ ಜೆಸಿಂತಾ, ಮಲ್ಲಿಕಾರ್ಜುನ್, ರಜಿಯಾ, ಮಮತಾ, ಧನಲಕ್ಷ್ಮೀ, ಸೇವಂತಿ ಉಪಸ್ಥಿತರಿದ್ದರು.

error: Content is protected !!