ಕಳೆದ 6 ತಿಂಗಳ ಬಾಕಿ ವೇತನ ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟ ಮುಷ್ಕರ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರ ತವರು ಕ್ಷೇತ್ರವಾದ ಗೋರಖಪುರ ಸಹಿತ ರಾಜ್ಯದ ಪೂರ್ವ ಭಾಗದಲ್ಲಿ ಸೆಪ್ಟೆಂಬರ್‌ 15 ರಿಂದ ಆಶಾ ಕಾರ್ಯಕರ್ತೆಯರು ತಮ್ಮ ಕಳೆದ ಆರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ. ತಮಗೆ ಮಾಸಿಕ ರೂ 21,000 ವೇತನ ನೀಡಬೇಕು ಹಾಗೂ ತಮ್ಮನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನೂ ಆಶಾ ಕಾರ್ಯಕರ್ತೆಯರು ಮುಂದಿಟ್ಟಿದ್ದಾರೆ ಎಂದು newsclick.in ವರದಿ ಮಾಡಿದೆ.

ಕುಶಿನಗರ, ಮಹರಾಜಗಂಜ್‌, ದಿಯೋರಿಯಾ, ಗೋರಖಪುರ ಮತ್ತು ಬಸ್ತಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿಭಟಿಸುತ್ತಿರುವ ಆಶಾ ಕಾರ್ಯಕರ್ತೆಯರ ನಿಯೋಗವೊಂದು ತಮ್ಮ ಹತ್ತು ಅಂಶಗಳ ಬೇಡಿಕೆಗಳನ್ನೊಳಗೊಂಡ ಮನವಿಪತ್ರವನ್ನು ಆಯಾ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಿದೆ.

ಬಾಕಿ ವೇತನವನ್ನು ಸೆಪ್ಟೆಂಬರ್‌ 30ರೊಳಗೆ ಪಾವತಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಈ ಭರವಸೆ ಈಡೇರದೇ ಇದ್ದರೆ ರಾಜ್ಯವ್ಯಾಪಿ ಮುಷ್ಕರದ ಜೊತೆಗೆ ಕೆಲಸವನ್ನೂ ಬಹಿಷ್ಕರಿಸುತ್ತೇವೆ ಎಂದು ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಆರು ತಿಂಗಳುಗಳಿಂದ ತಮಗೆ ಯಾವುದೇ ವೇತನವಿಲ್ಲದೇ ಇರುವುದರಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹಲವು ಆಶಾ ಕಾರ್ಯಕರ್ತೆಯರು ದೂರಿದ್ದಾರೆ.

ಇದಕ್ಕೂ ಮುಂಚೆ ರಾಜ್ಯಾದ್ಯಂತದ ಆಶಾ ಕಾರ್ಯಕರ್ತೆಯರು ಲಕ್ನೋದಲ್ಲಿನ ವಿಧಾನಸಭೆಯ ಮುಂದೆ ಪ್ರತಿಭಟಿಸಿ ಕನಿಷ್ಠ ವೇತನ ಮತ್ತು ಇತರ ಸವಲತ್ತುಗಳಿಗೆ ಆಗ್ರಹಿಸಿದರಲ್ಲದೆ ನಿಯೋಗವೊಂದು ಮುಖ್ಯಮಂತ್ರಿ ಆದಿತ್ಯನಾಥ್‌ ಅವರ ಕಚೇರಿಗೆ ಮನವಿಯನ್ನೂ ಅರ್ಪಿಸಿದೆ.

error: Content is protected !!