fbpx

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗಕ್ಕೆ ಮನವಿ

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಮತ್ತು ತಂಡ 2 ಎ ಮೀಸಲಾತಿ ಕುರಿತಂತೆ ಕೊಡಗು ಜಿಲ್ಲೆಯ ವಿವಿಧೆಡೆ ವಿವಿಧ ಜಾತಿ ಜನಾಂಗದಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದು ಕೊಡಗು ಕಾಯಕ ಸಮಾಜಗಳ ಒಕ್ಕೂಟ ಹಾಗೂ ಕೊಡಗು ಬಲಿಜ ಸಮಾಜ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತಾಯಿಸಿ ತಾ.7(ಇಂದು) ರಂದು ಆಯೋಗದ ತಂಡವನ್ನು ಭೇಟಿ ಮಾಡಿ ಮನವಿ ಪತ್ರ ನೀಡಲಾಗುವದು ಎಂದು ಅಧ್ಯಕ್ಷರಾದ ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.
2 ಎ ನಲ್ಲಿ ಸವಿತಾ ಸಮಾಜ, ಮಡಿವಾಳ,ವಿಶ್ವಕರ್ಮ,ಲಂಬಾಣಿ,ಅಕ್ಕಿ ಪಿಕ್ಕೆ, ಬಲಿಜ,ಕುಂಬಾರ ಇತ್ಯಾದಿ 102 ಜಾತಿ ಸಮುದಾಯಗಳು ಇದ್ದು ಶೇ.15 ಮೀಸಲಾತಿ ಇದೆ.ಕುರುಬ ಜನಾಂಗವೂ 2 ಎ ಮೀಸಲಾತಿಯಲ್ಲಿದ್ದು ಇದೀಗ ಬುಡಕಟ್ಟು ಸ್ಥಾನಮಾನಕ್ಕೆ ಹೋರಾಟ ನಡೆಸಿದೆ.
2 ಎ ಗೆ ಇದೀಗ ಪಂಚಮಶಾಲಿಗಳೂ ಒಳಗೊಂಡಂತೆ ಪ್ರಬಲ ಸಮುದಾಯಗಳು ಮೀಸಲಾತಿ ಕೊಡಿಸುವಂತೆ ಒತ್ತಡ ಹಾಕುತ್ತಿದ್ದು ಶೋಷಿತ 102 ಕ್ಕೂ ಅಧಿಕ ಜಾತಿಗೆ ಅನ್ಯಾಯವಾಗಲಿದೆ.

ಈ ನಿಟ್ಟಿನಲ್ಲಿ 2ಎ ಗೆ ಇನ್ನು ಮುಂದೆ ಯಾವದೇ ಪ್ರಬಲ ಜಾತಿಯನ್ನು ಸೇರಿಸದಂತೆ ಕೊಡಗು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ.ತಾ.4 ರಂದು ಮೈಸೂರು ಜಲದರ್ಶಿನಿಯಲ್ಲಿ ರಾಜ್ಯಾಧ್ಯಕ್ಷ ,ಮಾಜಿ ಎಂ.ಎಲ್.ಸಿ.ಪುಟ್ಟಸಿದ್ಧ ಶೆಟ್ಟಿ ನೇತ್ರತ್ವದಲ್ಲಿ ದುಂಡು ಮೇಜಿನ ಪರಿಷತ್ ಸಭೆಯಲ್ಲಿ ಭಾಗವಹಿಸಿದ್ದು ತಾ.14ಕ್ಕೂ ಮುನ್ನ ಬೆಂಗಳೂರಿನ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಾಗೂ ಶಾಸಕರ ಭವನದ ಸಭಾಂಗಣದಲ್ಲಿ 2ಎ ಮೀಸಲಾತಿ ದ್ವಂದ್ವ ನೀತಿ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾ.7 ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಕದನೂರು ಗ್ರಾ.ಪಂ.ವ್ಯಾಪ್ತಿಯ ಅರಮೇರಿ ಕಳಂಚೇರಿ ಮಠಕ್ಕೆ ಆಗಮಿಸಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.ಈಗಾಗಲೇ ಸೋಮವಾರಪೇಟೆ ತಾಲ್ಲೂಕು ವೀರಶೈವ ಲಿಂಗಾಯಿತ ಮುಖಂಡರು ಪಂಚಮಶಾಲಿಗಳು ಕೊಡಗಿನಲ್ಲಿಲ್ಲ.ಅವರು ಯಾರೇಂಬುದೇ ತಿಳಿದಿಲ್ಲ.ರಾಜಕೀಯ ಲಾಭಕ್ಕಾಗಿ ಮಠಾಧೀಶರೊಬ್ಬರು 2 ಎ ಹೋರಾಟ ನಡೆಸುತ್ತಿದ್ದಾರೆ.ಇದಕ್ಕೆ ತಮ್ಮ ವಿರೋಧವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನು ಕೊಡಗು ಕಾಯಕ ಸಮಾಜಗಳ ಒಕ್ಕೂಟ ಸ್ವಾಗತಿಸಿದೆ.
ಕೊಡಗಿನಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಬಲಿಜ ಸಮುದಾಯದವರಿದ್ದು ವೀರಪ್ಪಮೊಯಿಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ 2 ಎ ಮೀಸಲಾತಿಯನ್ನು ಕಸಿದುಕೊಳ್ಳಲಾಗಿತ್ತು.ನಂತರ ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದಾಗ ಬಲಿಜರಿಗೆ ಶಿಕ್ಷಣಕ್ಕಾಗಿ 2ಎ ಕಲ್ಪಿಸಲಾಗಿತ್ತು.ಆದರೆ,ಉದ್ಯೋಗ ಹಾಗೂ ರಾಜಕೀಯಕ್ಕೆ 2 ಎ ಮೀಸಲಾತಿ ನೀಡಿರಲಿಲ್ಲ.

ಈ ಬಗ್ಗೆ ರಾಜ್ಯಮಟ್ಟದಲ್ಲಿ ಸಂಸದ ಪಿ.ಸಿ.ಮೋಹನ್,ಎಂ.ಆರ್.ಸೀತಾರಾಮ್ ಮತ್ತು ಹಲವು ಮುಖಂಡರು ಹೋರಾಟ ಮಾಡುತ್ತಿದ್ದು ಬಲಿಜರಿಂದ ಕಸಿದುಕೊಂಡ 2ಎ ವಾಪಾಸ್ಸು ಕೊಡಿ ಎಂದು ಕೇಳುತ್ತಿದ್ದಾರೆ.ಕೊಡಗು ಗುಡ್ಡಗಾಡು ಪ್ರದೇಶದಲ್ಲಿ ಶೇ.99 ಕೂಲಿಕಾರ್ಮಿಕ ವರ್ಗದ ಬಲಿಜ ಕುಟುಂಬಗಳಿದ್ದು ಉದ್ಯೋಗ ಹಾಗೂ ರಾಜಕೀಯ ಕ್ಕೂ 2 ಎ ಮೀಸಲಾತಿ ಮರಳಿ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ನಾಳೆ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರು ಮತ್ತು ತಂಡದೊಂದಿಗೆ ಕಾಯಕ ಸಮಾಜಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತೂಕತೆ ನಡೆಸುವದಾಗಿ ತಿಳಿಸಿದ್ದಾರೆ.

error: Content is protected !!