fbpx

ಕರ್ನಾಟಕ ಬಂದ್ ಸಾಧ್ಯತೆ…

ಬೆಂಗಳೂರು, ಸೆ- ದೇಶಾದ್ಯಾಂತ ಭಾರೀ ವಿವಾದ ಸೃಷ್ಟಿಸಿರುವ ಹಾಗೂ ರೈತರ ಪಾಲಿನ ಮರಣ ಶಾಸನ ಎಂದೇ ಆರೋಪಿಸಲಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಸೂದೆ ವಿರೋಧಿಸಿ ಶುಕ್ರವಾರ ರೈತ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಲು ಮುಂದಾಗಿವೆ.

ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‍ಗೆ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿವೆ. ರೈತ ಸಂಘಟನೆಗಳು ಮಾತ್ರವಲ್ಲದೆ ನಾರಾಯಣಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಸೇರಿದಂತೆ 32ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಲಿವೆ.

ಬಂದ್ ಸಂದರ್ಭದಲ್ಲಿ ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ರೈತರು ಬಂದ್ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಲಿದೆ.

ಎಪಿಎಂಸಿ, ವಿದ್ಯುತ್, ಭೂ ಸುಧಾರಣಾ ಕಾಯ್ದೆ ಸುಗ್ರಿವಾಜ್ಞಾ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ.

ಮಳೆ-ಗಾಳಿ ಎನ್ನದೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ನಿರ್ಧರಿಸಿರುವ ಅನ್ನದಾತರು ನಗರದ ಫ್ರೀಡಂ ಪಾರ್ಕ್‍ನಲ್ಲಿ ಕೊರೆಯುವ ಚಳಿಯಲ್ಲೂ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಮಣಿಯುವ ಸಾಧ್ಯತೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ರೈತ ಮುಖಂಡರು ಇಂದು ಸಭೆ ಸೇರಿ ಶುಕ್ರವಾರ ರಾಜ್ಯ ಬಂದ್‍ಗೆ ಕರೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ಮತ್ತೊಮ್ಮೆ ಸಭೆ ನಡೆಸಿ ಬಂದ್ ರೂಪುರೇಷೆ ಬಗ್ಗೆ ರೈತ ಮುಖಂಡರು ಮಾತುಕತೆ ನಡೆಸಲಿದ್ದಾರೆ.

ಬಂದ್ ಜತೆಗೆ ತಿಂಗಳಾಂತ್ಯದವರೆಗೂ ಪ್ರತಿಭಟನೆ ಮುಂದುವರಿಸುವುದರ ಜತೆಗೆ ಜನತಾ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಚಳಿ-ಮಳೆಗೂ ಬಗ್ಗದ ಪ್ರತಿಭಟನಾಕಾರರು: ರೈತರು ಪ್ರತಿಭಟನೆ ನಡೆಸುತ್ತಿರುವ ಫ್ರೀಡಂ ಪಾರ್ಕ್‍ನಲ್ಲಿ ನಿನ್ನೆ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಡೀ ರಾತ್ರಿ ಕತ್ತಲಲ್ಲಿ ಕಾಲ ಕಳೆದ ರೈತರು ಚಳಿ-ಮಳೆಯನ್ನು ಲೆಕ್ಕಿಸದೆ ಹೋರಾಟ ಮುಂದುವರಿಸಿದರು.

ಕಳೆದ ಎರಡು ದಿನಗಳಿಂದ ಆಹೋರಾತ್ರಿ ರೈತರು ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರದ ಪರವಾಗಿ ಕನಿಷ್ಠ ಒಬ್ಬ ಪ್ರತಿನಿಧಿಯೂ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿಲ್ಲದಿರುವುದು ಪ್ರತಿಭಟನಾಕಾರರ ಕಿಚ್ಚು ಹೆಚ್ಚಾಗಿಸಿದೆ. ಭೂಮಿ ತಾಯಿ ಮಾರಾಟಕ್ಕೆ ಮುಂದಾದ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತೇವೆ. ದೇಶಾದ್ಯಂತ ರೈತರು ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.

ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿದ್ದು, ಲಕ್ಷಾಂತರ ರೈತರ ಬದುಕು ಅತಂತ್ರವಾಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರಿರುವಾಗ ಮಾರಕ ಕಾಯ್ದೆಗಳನ್ನು ಜಾರಿಗೊಳಿಸಿ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

error: Content is protected !!