ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವ: ಕುಟ್ಟದಲ್ಲಿ ವಿಜೃಂಭಿಸಿದ ಗಿರಿಜನ ಸಾಂಸ್ಕೃತಿಕೋತ್ಸವ


ಗೋಣಿಕೊಪ್ಪಲು ಸೆ 14. : ಗಿರಿಜನರ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಪುರಾತನ ಕಾಲದಿಂದಲೂ ನಮ್ಮ ಪರಿಸರದ ರಕ್ಷಕರಾಗಿ ಕಾಡಿನ ನಡುವೆ ಬದುಕುತಿರುವ ಇವರಿಂದ ನಮ್ಮ ಬದುಕು ಹಸನಾಗಿದೆ ಎಂದು ಸಾಹಿತಿ ಡಾ.ಜೆ.ಸೋಮಣ್ಣ ನುಡಿದರು ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ನಾಣಚ್ಚಿ ಗದ್ದೆಹಾಡಿ ನಾಗರಹೊಳೆ ಯವರ ಸಂಯುಕ್ತ ಆಶ್ರಯದಲ್ಲಿ ಕುಟ್ಟ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸಾಂಸ್ಕೃತಿಕ ಗಡಿ ಉತ್ಸವ ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.ಬೆಳಿಗ್ಗೆ ೧೦ ಗಂಟೆಗೆ ಕುಟ್ಟ ಬಸ್ ನಿಲ್ದಾಣದಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಾಗರಹೊಳೆ ಗಿರಿಜನ ಆಶ್ರಮ ಶಾಲೆ ವಿದ್ಯಾರ್ಥಿಗಳ ಹಾಗೂ ಕಲಾ ತಂಡಗಳ ಮೆರವಣಿಗೆ ಅರಂಭಗೊಂಡಿತು. ವಿವಿಧ ಗಿರಿಜನ ಹಾಡಿಯ ಕಲಾ ತಂಡಗಳು ಮೆರವಣಿಗೆಯಲ್ಲಿ ಹಾಡಿ ಕುಣಿದು ಕುಪ್ಪಳಿಸುತ್ತಾ ಕಾರ‍್ಯಕ್ರಮ ಆಯೋಜನೆಗೊಂಡಿದ್ದ ಶಾಲಾ ಅವರಣಕ್ಕೆ ಸಾಗಿ ಬಂದವು. ಬಳಿಕ ಆರಂಭ ಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಣಚಿ ಗದ್ದೆಹಾಡಿಯ ರಮೇಶ್ ತಂಡದವರು ಹಾಡು, ನೃತ್ಯದ ಮೂಲಕ ಕುಣಿದು ಕುಪ್ಪಳಿಸುವಂತೆ ಮಾಡಿದರು.

‘ನಂಗ ಇರೋದು ಹುಲ್ಲು ಮನೇಲೆ, ಅಜ್ಜಯ್ಯ ಇದದ್ದು ಕಟ್ಟೆ ಬುಡದಲೇ, ಅಜ್ಜಮ್ಮ ಇದದ್ದುಕಲ್ಲು ಬುಡದಲೆ ಹಾಡು, ನಂಗ ಜೇನು ಕೊಯ್ಯಕೆ ಬಂದವರು ದೂರಿ ದೂರಿ’ ಹಾಡು ಮತ್ತು ನೃತ್ಯ ಸಭಿಕರನ್ನು ಅಕ್ಷರಶಃ ಹುಚ್ಚೆದ್ದು ಕುಣಿಯುವಂತೆ ಮಾಡಿತು.

ನಾಗರಹೊಳೆ ಗಿರಿಜನ ಆಶ್ರಮ ಶಾಲೆ,ಕುಟ್ಟ ಸರಕಾರಿರ‍ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಗಿಜುಗನ ಹಾಡು, ಕೋಲಾಟ ಮೊದಲಾದ ನೃತ್ಯಗಳು ಮನಸೂರೆ ಗೊಂಡವು.

ಬಳಿಕ ಮೈಸೂರಿನ ರಂಗಯಾನದ ಟ್ರಸ್ಟ್ ಕಲಾವಿದರ ಬಿಳಿಗಿರಿ ರಂಗನಾಥನ ಕುರಿತ ಜಾನಪದ ಕಥನ ರೂಪ ಸಭಿಕರನ್ನು ತಲೆ ದೂಗುವಂತೆ ಮಾಡಿತು. ರಂಗನಾಥನ ಕಥೆಯನ್ನು ಹಾಡು ಮತ್ತು ಮಾತಿನ ಮೂಲಕ ಮನಮುಟ್ಟುವಂತೆ ಬಿಂಬಿಸಿದರು.೪೫ ನಿಮಿಷಗಳ ಕಾಲ ನಡೆದ ಈ ಕಥನ ರೂಪ ಸಭಿಕರನ್ನು ಸೂಜಿ ಮೊನೆಯಂತೆ ಹಿಡಿದಿಟ್ಟಿತ್ತು.

ಸಭಾ ಕರ‍್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೊನ್ನೇಗೌಡ ಮಾತನಾಡಿ ಆಳಿಯುತ್ತಿರುವ ಸಂಸ್ಕೃತಿಯನ್ನು ಉಳಿಸಲು ಸಾಂಸ್ಕೃತಿಕ ಉತ್ಸವಗಳು ಸಹಕಾರಿಯಾಗಲಿವೆ ಎಂದರು.
ಮೆರವಣಿಗೆ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶರಿನ್ ಸುಬ್ಬಯ್ಯ ಮಾತನಾಡಿ ಗಿರಿಜನರ ನೈಜ ಕಲೆ ಉಳಿಯಬೇಕು. ಪ್ರಕೃತಿಯ ಕಂದಮ್ಮಗಳಾದ ಗಿರಿಜನರು ತಮ್ಮ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಚಂದನ್ ಕಾಮತ್ ಅಧ್ಯಕ್ಷತೆಯಲ್ಲಿ ನೆಡದ ಕವಿಗೋಷ್ಠಿಯಲ್ಲಿ ಪೊನ್ನಂಪೇಟೆ ವಿನೋದ್ ಇಬ್ಬನಿ ಮೊದಲಾದವರು ಕವಿತೆ ವಾಚನ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯಕ್ರಮ ಕುರಿತು ಸಂವಾದ ಮತ್ತು ವಿಚಾರಗೋಷ್ಠಿ ನಡೆಯಿತು. ಶಿಕ್ಷಕರಾದ ಶಶಿಧರ್, ಬಸವರಾಜು,ಜೆ.ಕೆ.ರಾಜು ಪಾಲ್ಗೊಂಡಿದ್ದರು.
ಜಿಲ್ಲೆಯ ಗಡಿಭಾಗ ಕುಟ್ಟದಲ್ಲಿ ಗಿರಿಜನರ ಸಾಂಸ್ಕೃತಿಕ ಉತ್ಸವ ಮಂಗಳವಾರ ವಿಜೃಂಭಿಸಿತು.
ಸಾಂಸ್ಕೃತಿಕ ಗಡಿ ಉತ್ಸವದಲ್ಲಿ ಗಿರಿಜನ ಕಲಾವಿದರು ಕುಣಿದು ಕುಪ್ಪಳಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತಿ,ಮೈಸೂರು ರಂಗಯಾನ ಟ್ರಸ್ಟ್ ನ ಅಧ್ಯಕ್ಷ ವಿಕಾಸ್ ಚಂದ್ರ,ಶಾಂತಮ್ಮ ಹಾಜರಿದ್ದರು .ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಅಧ್ಯಕ್ಷ ಜೆ.ಬಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸೋಮಯ್ಯ, ಬಸಪ್ಪ ಹಾಜರಿದ್ದರು.

error: Content is protected !!