fbpx

ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು: ಶಾಸಕ ಅಪ್ಪಚ್ಚು ರಂಜನ್ ನುಡಿ

ಕುಶಾಲನಗರ: ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು. ಆದರೆ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರವಹಿಸುವ ಪತ್ರಕರ್ತರು ಕೂಡಾ ಇಂದು ಬೆದರಿಕೆಗಳನ್ನು ಎದುರಿಸುವಂತಾಗಿದ್ದು, ಸರಕಾರ ಪತ್ರಕರ್ತರಿಗೂ ಜೀವನ ಭದ್ರತೆ ಒದಗಿಸಬೇಕು ಎಂದು ಮಡಿಕೇರಿ ಕ್ಷೇತದರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

ಕುಶಾಲನಗರದಲ್ಲಿ ಶನಿವಾರ ನಡೆದ ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳ ವಿಮರ್ಶೆ ಆಗಬೇಕಿದೆ. ಜನಪ್ರತಿನಿಧಿಗಳಿಗೂ ಕೆಲವು ಇತಿಮಿತಿಗಳಿದ್ದು, ಇಂತಹ ಸಂದರ್ಭ ಸಲಹೆ ಸೂಚನೆಗಳ ಅಗತ್ಯತೆ ಇರುತ್ತದೆ. ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ಪತ್ರಕರ್ತರು ಯಾವುದೇ ವಿಷಯಗಳ ಸಾಧಕ ಬಾಧಕಗಳ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಪತ್ರಿಕೆ ಮತ್ತು ಮಾಧ್ಯಮಗಳು ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ನಿರಂತರವಾಗಿ ನಡೆಸಬೇಕು. ಆದರೆ ಯಾವುದೇ ಸಂದರ್ಭ ವ್ಯಕ್ತಿಗತ ಮಾನಹಾನಿ ಆಗದಂತೆ ವಿವೇಚನೆ ವಹಿಸುವುದು ಅಗತ್ಯ ಎಂದು ತಿಳಿಸಿದ ಅವರು, ಕೆಲವು ನಿದರ್ಶನಗಳನ್ನು ಈ ಸಂದರ್ಭ ನೀಡಿದರು. ದಿಕ್ಸೂಚಿ ಭಾಷಣ ಮಾಡಿದ ಸಂಘದ ಗೌರವ ಸಲಹೆಗಾರ ಬಿ.ಜಿ ಅನಂತಶಯನ ಮಾತನಾಡಿ, ಸುದ್ದಿಗಳು ಓದುಗರಲ್ಲಿ ಗೊಂದಲ ಉಂಟು ಮಾಡಬಾರದು. ಸುದ್ದಿಯಲ್ಲಿ ಆತುರ ಸಲ್ಲದು, ಕಟುಸತ್ಯ ಸುದ್ದಿಯಾದರೂ ಯಾವುದೇ ಅನಾಹುತಕ್ಕೆ ಕಾರಣವಾಗಬಾರದು ಎಂದರು.
ಪ್ರಸಕ್ತ ಪರಿಸ್ಥಿತಿಯಲ್ಲಿ ಪತ್ರಕರ್ತರು ರಕ್ಷಣೆ, ಭದ್ರತೆಯ ಕೊರತೆ ಎದುರಿಸುತ್ತಿದ್ದು, ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ‍್ಯ ಹತ್ತಿಕ್ಕುವ ಯತ್ನ, ದೈಹಿಕ ಹಲ್ಲೆ ಪ್ರಕರಣಗಳು ಅಧಿಕಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.

ಕೆಲವರಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗ ಆಗುತ್ತಿದ್ದು, ಇದರಿಂದ ಅನಾಹುತಗಳು ಸೃಷ್ಟಿ ಆಗುತ್ತಿರುವುದು ಕಂಡುಬರುತ್ತಿವೆ. ಇದಕ್ಕೆ ಕಡಿವಾಣದ ಅಗತ್ಯವಿದೆ ಎಂದು ಅನಂತಶಯನ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು ನೇತೃತ್ವದ ನಿಯೋಜಿತ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಂಘದ ಸದಸ್ಯರ ಮಕ್ಕಳಾದ ಬಿ.ಡಿ ಮಧುರಾ, ಅಹನ್ ಪೂಜಾರಿ, ಆರ್ಯ, ದೀಪಿಕಾ, ಯದುನಂದ್, ಭುವಿತ್, ಬೆನಕ, ಸೋವಿತಾ, ಹರ್ಷಿತ್ ಅವರಿಗೆ ಕೃತಗ್ಯತಾ ಟ್ರಸ್ಟ್ನ ಮುಖ್ಯಸ್ಥ ಮುರಳೀಧರ್ ಮತ್ತು ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಮಡಿಕೇರಿಯ ಉದ್ಯಮಿ ಹೆನ್ರಿಕ್ ಮಾರ್ಟಿನ್ ಅವರು ತಾಲೂಕು ಸಂಘದ ಸದಸ್ಯರಿಗೆ ಪವರ್ ಬ್ಯಾಂಕ್ ವಿತರಿಸಿದರು.

ಕೊಡಗು ಪತ್ರಕರ್ತರ ಸಂಘದ ಎಸ್.ಎ ಮುರಳೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ನಾಗಪ್ಪ ಹಾಜರಿದ್ದು ಶುಭ ಕೋರಿದರು.
ಸಂಘದ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾದರು. ಮಧುರಾ ದಿನೇಶ್ ಪ್ರಾರ್ಥಿಸಿದರೆ, ಗೌರವಾಧ್ಯಕ್ಷ ಕೆ.ತಿಮ್ಮಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎಸ್. ಸುನಿಲ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ತಾಲೂಕು ಉಪಾಧ್ಯಕ್ಷ ಬಿ.ಸಿ ದಿನೇಶ್, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ವಿನೋದ್, ಖಚಾಂಚಿ ಎನ್.ಎ ಅಶ್ವಥ್ ಕುಮಾರ್, ನಿರ್ದೇಶಕರಾದ ಬಿ.ಎಸ್ ಲೋಕೇಶ್ ಸಾಗರ್, ಜಿ.ಕೆ ಬಾಲಕೃಷ್ಣ, ಅಲ್ಫ್ರೆಡ್ ಡಿಸೋಜಾ, ಕೆ.ಎಸ್ ಮೂರ್ತಿ, ವಿಶ್ವ ಕುಮಾರ್, ಶಿವಣ್ಣ, ಜೆ.ಎಲ್ ಸೋನ್ಸ್, ಜಿಲ್ಲಾ ಸಂಘದ ಪ್ರಮುಖರು ಇದ್ದರು.

error: Content is protected !!