ಕಡವೆ ಬೇಟೆ ಮಾಲು ಸಹಿತ ಇಬ್ಬರು ಆರೋಪಿಗಳು ಪೊಲೀಸರ ವಶ

ಗುಂಡು ಹೊಡೆದು ಕಡವೆಯನ್ನು ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಮೂರ್ನಾಡು ಐಕೊಳ ನಿವಾಸಿಗಳಾದ ಅಬ್ದುಲ್ ಅಜೀಜ್ (48) ಮತ್ತು ಹಮೀದ್ (35) ಎಂಬುವವರೇ ಬಂದಿದ್ದ ಆರೋಪಿಗಳಾಗಿದ್ದಾರೆ.
ಮೂರ್ನಾಡು ಗ್ರಾಮದಲ್ಲಿ ಕಡವೆಯನ್ನು ಕೊಂದು ಅದನ್ನು ಮಾಂಸ ಮಾಡುತ್ತಿರುವ ಬಗ್ಗೆ ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಐಕೊಳ ಗ್ರಾಮದ ಕಾಫಿ ತೋಟದ ಒಳಗೆ ಕಡವೆ ಮಾಂಸ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಈ ಸಂದರ್ಭ ಸ್ಥಳದಲ್ಲಿ 120 ಕೆಜಿ ಕಡವೆ ಮಾಂಸ ಕೃತ್ಯಕ್ಕೆ ಬಳಸಿದ ಬಂದೂಕು, ಕತ್ತಿಗಳು, ಚಾಕು, ಪ್ಲಾಸ್ಟಿಕ್ ಹೊದಿಕೆ ಮಾಂಸ ತುಂಬಲು ಬಳಸಿದ್ದ ಬಕೆಟ್ಟನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಡಿಕೇರಿ ವಲಯ ವನ್ಯ ಜೀವಿ ಸಂರಕ್ಷಣಾಧಿಕಾರಿ ಮಧುಸೂದನ್ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವು ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮಡಿಕೇರಿ ವ್ಯಾಪ್ತಿಯಲ್ಲಿ ವನ್ಯಜೀವಿ ಹತ್ಯೆ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ವನ್ಯಜೀವಿ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕೃತ್ಯಗಳನ್ನು ಮಟ್ಟ ಹಾಕಲಾಗುತ್ತದೆ ಎಂದು ಅರಣ್ಯ ಅಧಿಕಾರಿ ಮಧುಸೂದನ್ ಹೇಳಿದರು.