fbpx

ಕಟ್ಟಪಳ್ಳಿ ಮತ್ತು ಉಂಬಾಳೆಯಲ್ಲಿ ಕೊಡಗು ರಕ್ಷಣಾ ವೇದಿಕೆ ಗ್ರಾಮ ವಾಸ್ತವ್ಯ

ಇಲ್ಲಿ ರಸ್ತೆಯೇ ಇಲ್ಲ ಬರೀ ಕಾಡು ಮತ್ತು ಕಡಿದಾದ ಶಿಖರಗಳು, ಹಿಂದೆ ರೋಗಿಗಳು ವೃದ್ಧರು ಮತ್ತು ಅಶಕ್ತರನ್ನು ಬೆನ್ನಿಗೆ ಜೋಳಿಗೆ ಕಟ್ಟಿಕೊಂಡು ಕಲ್ಲು ಮಣ್ಣಿನ ರಸ್ತೆಗಳಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಬೆಟ್ಟ ಇಳಿಯಬೇಕಿತ್ತು, ಈಗ ಜೀಪುಗಳು ಬಂದಿವೆ ಆದರೂ ರಸ್ತೆಯೇ ಇಲ್ಲ, ಆಸ್ಪತ್ರೆಗಳು ಬಿಡಿ ಇಲ್ಲಿ ದಾರಿಮಧ್ಯೆ ಜೀಪಿನಲ್ಲೇ ಹೆರಿಗೆಯಾಗುತ್ತದೆ. ಇಂಟರ್ನೆಟ್ ಇವರ ಕೈಗೆಟಕದ ಕುಸುಮ ಸದ್ಯಕ್ಕೆ 2g ನೆಟ್ವರ್ಕ್ ಆದರೂ ಕೊಡಿ ಎನ್ನುವುದು ಇವರ ಅರಣ್ಯರೋದನ. ತೋಡು ಮತ್ತು ಹೊಳೆಗಳಿಗೆ ಮೋರಿ ಸೇತುವೆಗಳು ಇಲ್ಲ ಅರ್ಜೆಂಟಿಗೆ ಇವರು ಅಪಾಯಕಾರಿ ಬಿದಿರು ಸೇತುವೆಯನ್ನು ಬಳಸುತ್ತಿದ್ದಾರೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಚೆಂಬು ಗ್ರಾಮ ಪಂಚಾಯತಿಗೆ ಸೇರಿದ ಕಡಿದಾದ ಶಿಖರದ ಮೇಲೆ ನೆಲೆಗೊಂಡಿರುವ ಕಟ್ಟ ಪಳ್ಳಿಯಲ್ಲಿ ಮೊನ್ನೆ ಶನಿವಾರ ರಾತ್ರಿ ಕೊಡಗು ರಕ್ಷಣಾ ವೇದಿಕೆ ತನ್ನ ಎರಡನೆಯ ಗ್ರಾಮ ವಾಸ್ತವ್ಯವನ್ನು ಯಶಸ್ವಿ ಮತ್ತು ಅರ್ಥಪೂರ್ಣವಾಗಿ ನಡೆಸಿತು. ಚೆಂಬು ಗ್ರಾಮ ಪಂಚಾಯಿತಿಗೆ ಅರ್ಧಭಾಗ ಮತ್ತು ಭಾಗಮಂಡಲ ಬಳಿಯ ತಾವೂರು ಗ್ರಾಮ ಪಂಚಾಯಿತಿಗೆ ಇನ್ನರ್ಧ ಭಾಗ ಹಂಚಿಹೋಗಿರುವ ಕಟ್ಟ ಪಳ್ಳಿಯಲ್ಲಿ ಮೊನ್ನೆ ರಾತ್ರಿ ವಾಸ್ತವ್ಯ ಹೂಡಿದ ಕೊಡಗು ರಕ್ಷಣಾ ವೇದಿಕೆಯ ಕಾರ್ಯಕರ್ತರ ಬಳಿ ಕಟ್ಟಪಳ್ಳಿ ಮತ್ತು ಉಂಬಾಳೆ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ದಶಕಗಳಿಂದ ತಾವು ಅನುಭವಿಸುತ್ತಿರುವ ನೋವನ್ನು ಪರಿಪರಿಯಾಗಿ ಹೇಳಿಕೊಂಡರು. ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ ಎನ್ನುವ ವಚನಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ಈ ಮೇಲಿನ ಎರಡೂ ಗ್ರಾಮದ ಜನರ ಬದುಕು. ಎರಡೂ ಗ್ರಾಮಗಳು ಸಂಪೂರ್ಣವಾಗಿ ರಕ್ಷಿತಾರಣ್ಯ ದಿಂದ ಸುತ್ತುವರೆಯಲ್ಪಟ್ಟಿದ್ದು ಇಲ್ಲಿನ ನೂರಾರು ಕುಟುಂಬಗಳ ಬದುಕಿನ ದಿಕ್ಕು ದೆಸೆಯನ್ನು ನಿಯಂತ್ರಿಸುತ್ತಿರುವುದು ಅರಣ್ಯ ಇಲಾಖೆ. ಒತ್ತಡ ತಾಳಲಾರದೆ ಗ್ರಾಮಸ್ಥರು ಸ್ವಲ್ಪ ರೆಬೆಲ್ ಆದರೂ ಅರಣ್ಯ ಇಲಾಖೆ ಇವರ ಮೇಲೆ ಕೇಸು ಜಡಿಯುವುದು ಅತ್ಯಂತ ಖಚಿತ. ಗ್ರಾಮಕ್ಕೆ ಹೋಗಬೇಕಾದರೆ ರಕ್ಷಿತಾರಣ್ಯದ ಒಳಗಿರುವ ಕಲ್ಲು-ಮಣ್ಣಿನ ಕೆಸರಿನ ರಸ್ತೆಯೊಳಗೆ ಸಾಗಿಯೇ ಹೋಗಬೇಕು ಹಾಗಾಗಿ ಅರಣ್ಯಾಧಿಕಾರಿಗಳ ಮರ್ಜಿ ಕಾಯಲೇ ಬೇಕು , ವಾಹನ ವೆಂದರೆ ಅದು ಬೇರೆ ಯಾವುದೇ ವಾಹನಗಳಲ್ಲ ಬರೀ ಫೋರ್ ವೀಲ್ ಜೀಪಿಗೆ ಮಾತ್ರ ಸಾಧ್ಯ.. ಇಲ್ಲಿ ಕೆಲವೇ ಕೆಲವು ಕಡೆ ಕಾಂಕ್ರೀಟ್ ರಸ್ತೆಗಳನ್ನು ಮಾಡಿದ್ದಾರೆ ಹೊರತುಪಡಿಸಿದರೆ ಬಾಕಿ ಇರುವ ರಸ್ತೆಗಳೆಲ್ಲ ಹಿಂದೆ ಯಾವುದೋ ಮರ ವ್ಯಾಪಾರಿ ಗ್ರಾಮದ ತಲೆಯ ಮೇಲಿರುವ ಬೃಹತ್ ಎಸ್ಟೇಟ್ ಒಂದರಿಂದ ಟಿಂಬರ್ ಸಾಗಿಸಲು ಮಾಡಿದ ರಸ್ತೆಗಳು. ಈ ರಸ್ತೆಗಳು ಎಷ್ಟು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದರೆ ಇಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಜೀಪು ಕಡ್ಡಾಯವಾಗಿ ಇರಲೇಬೇಕು ಅಂತಹ ಜೀಪೊಂದರಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಗೆ ಜೀಪಿನಲ್ಲಿಯೆ ಪ್ರಸವವಾಗಿದೆ. ಬಹಳಷ್ಟು ಜೀಪುಗಳು ಈ ಗ್ರಾಮದ ಕಡಿದಾದ ಶಿಖರಗಳ ನಡುವೆ ಸಂಚರಿಸುವಾಗ ಅಪಘಾತಕ್ಕೆ ಈಡಾಗಿವೆ. ಇಲ್ಲಿ ಗರ್ಭಿಣಿಯರು ಹೆದರಿಕೆಯಿಂದ ತಮ್ಮ ದಿನ ತುಂಬುವ ಹಲವು ದಿನಗಳ ಮೊದಲೇ ಪಕ್ಕದ ಆಸ್ಪತ್ರೆಗಳಿಗೆ ಹೋಗಿ ಹೆರಿಗೆಗೆ ದಾಖಲಾಗಿ ಬಿಡುತ್ತಾರೆ. ಈ ರಸ್ತೆಯಲ್ಲಿ ಜೀಪು ಓಡಿಸುವ ಚಾಲಕರಿಗೆ ಅವರ ಸಾಹಸಕ್ಕಾಗಿ ನಮ್ಮ ಸರ್ಕಾರವು ಗಣರಾಜ್ಯೋತ್ಸವದ ದಿನದಂದು ಶೌರ್ಯ ಪ್ರಶಸ್ತಿ ಖಂಡಿತ ನೀಡಬೇಕಿದೆ. ಈ ಗ್ರಾಮದ ಮತ್ತೊಂದು ಅತಿ ಮುಖ್ಯ ಸಮಸ್ಯೆ ಇಲ್ಲಿ ಇಷ್ಣು ಎತ್ತರದಲ್ಲಿದ್ದರೂ ಮೊಬೈಲ್ ನೆಟ್ವರ್ಕ್ ಇಲ್ಲವೇ ಇಲ್ಲ. ನಮಗೆ ಫೋರ್ ಜಿ ಫೈವ್ ಜಿ ನೆಟ್ವರ್ಕ್ ಸಾಯಲಿ ಕನಿಷ್ಠ 2g ಮೊಬೈಲ್ ಫೋನಿನಲ್ಲಿ ಮಾತನಾಡುವಷ್ಟು ಅದರೂ ನೆಟ್ವರ್ಕ್ ದೊರಕಿಸಿಕೊಡಿ ಎನ್ನುವುದು ಇಲ್ಲಿಯ ಗ್ರಾಮಸ್ಥರ ಒಂದೇ ಅಳಲು. ಶಾಲಾ ಮಕ್ಕಳಿಗೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಲು ಅವರು ಅಪ್ಪ-ಅಮ್ಮಂದಿರು ತಮ್ಮ ತಮ್ಮ ಜೀಪಿನಲ್ಲಿ ಕೊಡಗಿನಿಂದ ಬೆಟ್ಟವಿಳಿದು ಕೆಳಗೆ ದಕ್ಷಿಣಕನ್ನಡದ ಕಲ್ಲುಗುಂಡಿ ಗ್ರಾಮಕ್ಕೆ ಬರಬೇಕು. ಹಲವಾರು ಅಭಿವೃದ್ಧಿಯ ವಿಚಾರಗಳಲ್ಲಿ ಇಲ್ಲಿಯ ಗ್ರಾಮಸ್ಥರನ್ನು ಚೆಂಬು ಗ್ರಾಮ ಪಂಚಾಯಿತಿ ಮತ್ತು ತಾವೂರು ಗ್ರಾಮ ಪಂಚಾಯಿತಿ ಫುಟ್ಬಾಲ್ ನಂತೆ ಇಲ್ಲಿಂದ ಅತ್ತ ಅಲ್ಲಿಂದ ಇತ್ತ ಒದೆಯುತ್ತದೆ. ಇಲ್ಲಿಯ ಗ್ರಾಮಸ್ಥರು ಯಾವುದಾದರೂ ಸರಕಾರಿ ಕೆಲಸಕ್ಕೆ ತಾವೂರಿಗೆ ಹೋಗಬೇಕೆಂದರೆ ಅತ್ಯಂತ ದುರ್ಗಮ ಮತ್ತು ಕಡಿದಾದ ಕಣಿವೆಯನ್ನು ಕಿಲೋಮೀಟರ್ ಗಟ್ಟಲೆ ಹತ್ತಿ ಎದೆ ಉಸಿರು ಬಿಡುತ್ತಾ ಅಲ್ಲಿಗೆ ತಲುಪುವಷ್ಟರಲ್ಲಿ ಸಮಯ ಸಂಜೆಯಾಗಿರುತ್ತದೆ. ಇಲ್ಲಿ ಹಲವು ಜನರು ಜಮ್ಮ ಹಿಡುವಳಿದಾರರಾಗಿದ್ದು ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ತಪ್ಪಿಗೆ ಇವರ ಬಹುತೇಕ ಕಂದಾಯ ಮತ್ತು ಪೈಸಾರಿ ಜಮೀನು ಈಗ ಹಾಲಿ ಅರಣ್ಯ ಇಲಾಖೆಗೆ ವರ್ಗಾಯಿಸಲ್ಪಟ್ಟಿದೆ. ಜಮಾ ಬಂದಿ ದಾಖಲೆಗಳಲ್ಲಿ ಪೈಸಾರಿ ಅಥವಾ ಜಮ್ಮಾ ಎಂದು ಇದ್ದದ್ದು ಅದು ಹೇಗೆ ಅರಣ್ಯ ಇಲಾಖೆಯ ಜಾಗ ಎಂದು ಮಾರ್ಪಾಡಾಯಿತು ಮತ್ತು ಈ ಮ್ಯಾಜಿಕ್ ಹೇಗೆ ಸಾಧ್ಯ ಎಂದು ಇಲ್ಲಿಯ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಇಂದಿನವರೆಗೆ ಉತ್ತರವೇ ದೊರೆತಿಲ್ಲ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುಡಿಯ ಜನಾಂಗದ ಅರಣ್ಯವಾಸಿಗಳು ಇದ್ದು ಅವರ ಸಂಕಷ್ಟಗಳು ನೂರಾರು, ಅರಣ್ಯ ಹಕ್ಕು ಕಾಯ್ದೆ ಅವರ ಪಾಲಿಗೆ ಹೆಸರಿಗಷ್ಟೇ ಏನಾದರೂ ಅರಣ್ಯ ಉತ್ಪತ್ತಿ ಗಳನ್ನು ಮುಟ್ಟಿದರೆ ಅರಣ್ಯ ಇಲಾಖೆ ಕೇಸು ಉಚಿತ. ಎರಡು ಗ್ರಾಮಗಳಲ್ಲಿ 150ರಿಂದ 200 ಮನೆಗಳಿದ್ದು ಇಂದಿಗೂ ಇಲ್ಲಿಯ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಉಳ್ಳವರ ಮಕ್ಕಳು ಓದಲು ಸೋಲಾರ್ ದೀಪ ಬಳಸಿದರೆ ಬಡವರ ಮಕ್ಕಳು ಇವತ್ತಿಗೂ ಸೀಮೆಎಣ್ಣೆ ಬುಡ್ಡಿ ದೀಪದ ಬೆಳಕಿನಲ್ಲಿ ಓದು ಬರಹ ಕಲಿಯಬೇಕಿದೆ. ಎಲ್ಲಾ ಸಮಸ್ಯೆಗಳಿಗೆ ಧ್ವನಿಯಾಗಲು ಹೊರಟಿರುವ ಕೊಡಗು ರಕ್ಷಣಾ ವೇದಿಕೆ ಇವರ ಪರವಾಗಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಿದೆ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಮತ್ತು ಉನ್ನತ ಅಧಿಕಾರಿಗಳ ಗಮನಕ್ಕೆ ಇವರ ಸಮಸ್ಯೆಗಳನ್ನು ತರುವ ಪ್ರಯತ್ನ ಇಂದಿನಿಂದಲೇ ಮಾಡಲಿದೆ. ಕೊಡಗು ರಕ್ಷಣಾ ವೇದಿಕೆಯ ಮುಂದಿನ ಗ್ರಾಮ ವಾಸ್ತವ್ಯ ಅತಿ ಶೀಘ್ರದಲ್ಲಿ ಕೊಡಗಿನ ಮತ್ತೊಂದು ಕುಗ್ರಾಮದಲ್ಲಿ ನಡೆಯಲಿದೆ. ಆದರೂ ಕೊಡಗು ಇಷ್ಟೊಂದು ಸಂಪದ್ಭರಿತವಾಗಿದ್ದರೂ, ಕೊಡಗಿನ ಜನರು ಎಲ್ಲಾ ವಿಚಾರಗಳಲ್ಲಿ ಎಷ್ಟೊಂದು ಮುಂದೆ ಇದ್ದರು ಅಭಿವೃದ್ಧಿಯ ವಿಚಾರದಲ್ಲಿ ಕೊಡಗು ಯಾಕೆ ಹಿಂದುಳಿಯುತ್ತಿದೆ ?

ಕಾರ್ಯಕ್ರಮದಲ್ಲಿ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಅಚ್ಚಾಂಡಿರ ಪವನ್ ಪೆಮ್ಮಯ್ಯ , ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಉಪಾಧ್ಯಕ್ಷರಾದ ತಂಬಾoಡ ಡ್ಯಾನಿ ನಾಣಯ್ಯ , ಪೋನ್ನಂಪೇಟೆ ತಾಲೂಕು ಅಧ್ಯಕ್ಷರಾದ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷ ಚೆರoಡ ರೋಷನ್ , ಸಂಪಾಜೆ ಹೋಬಳಿ ಉಸ್ತುವಾರಿ ನಾರಾಯಣ, ಸಂಪಾಜೆ ಹೋಬಳಿ ಅಧ್ಯಕ್ಷರಾದ ಜ್ಞಾನೇಶ್, ಸಂಪಾಜೆ ವಲಯ ಅಧ್ಯಕ್ಷರಾದ ಹೊಸೂರು ಅಣ್ಣಿ, ದಬ್ಬಡ್ಕ ಗ್ರಾಮದ ಅಧ್ಯಕ್ಷರಾದ ಯತೀಶ್ ಕೆದಂಬಾಡಿ, ಹರಿ, ಸಂಪಾಜೆ ಗೌತಮ್ , ಕಟ್ಟಪಳ್ಳಿ ಘಟಕದ ಅಧ್ಯಕ್ಷರಾದ ಪ್ರಕಾಶ್, ಉoಬಾಳೆ ಘಟಕದ ಅಧ್ಯಕ್ಷರಾದ ದಿನೇಶ್ ಕುಮಾರ್, ಗ್ರಾಮದ ಹಿರಿಯರಾದ ದೇವoಗೋಡಿ ಅಚ್ಚಪ್ಪ, ಕುಮಾರ್,ಸುನಿಲ್ ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!