ಕಟ್ಟಡ ನಿರ್ಮಾಣ ಕಾಮಗಾರಿಗಳಿಗಿಲ್ಲ ಸಾಮಾಗ್ರಿ ಕೊರತೆ: ಸಚಿವ ಹಾಲಪ್ಪ ಬಿ.ಎ

ಇಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಕೊಡಗು ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಮರಳು ಹಾಗು ಎಂ.ಸ್ಯಾಂಡ್ ಸಾಮಾಗ್ರಿಗಳ ಕೊರತೆ ಉಂಟಾಗಲಿದೆಯೇ ಎಂಬ ಸದಸ್ಯರಾದ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಹಾಲಪ್ಪ ಬಿ.ಎ ಅವರು, ‘ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಗಳು ಅತೀ ವಿರಳವಾಗಿರುವುದರಿಂದ ಮರಳಿನ ಬೇಡಿಕೆ ಕಡಿಮೆ ಇರುತ್ತದೆ. ಒಂದು ವೇಳೆ ಮರಳಿನ ಬೇಡಿಕೆ ಬಂದರೂ ಸಹ ಜಿಲ್ಲಾ ವ್ಯಾಪ್ತಿಯ ನದಿ ಪಾತ್ರಗಳ 17 ಮರಳು ಬ್ಲಾಕ್ ಗಳಲ್ಲಿ ಪರಿಸರ ಅನುಮತಿ ಪತ್ರದಂತೆ 68,650 ಮೆಟ್ರಿಕ್ ಟನ್ ಮರಳನ್ನು ತೆಗೆಯಲು ಅವಕಾಶವಿರುತ್ತದೆ. ಮುಂದೆಯೂ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಯಾಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದರು.
2021-22ನೇ ಸಾಲಿನಿಂದ ಇಲ್ಲಿಯವರೆಗೆ ಪಕ್ಕದ ಹಾಸನ, ಮೈಸೂರು, ಮಂಡ್ಯ ಮತ್ತು ಇತರೆ ಜಿಲ್ಲೆಗಳಿಂದ ಸುಮಾರು 2,20,000 ಮೆಟ್ರಿಕ್ ಟನ್ ಎಂ ಸ್ಯಾಂಡ್ ಪೂರೈಕೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 5 ಸ್ಟೋನ್ ಕ್ರಷರ್ ಘಟಕಗಳಿಂದ ಪ್ರತಿ ದಿನ ಅಂದಾಜು 255 ಮೆಟ್ರಿಕ್ ಟನ್ ನಷ್ಟು ಎಂಸ್ಯಾಂಡ್ ಪೂರೈಕೆಯಾಗಿರುತ್ತದೆ. ಈವರೆಗೆ ಜಿಲ್ಲೆಯಲ್ಲಿ ಬೇಡಿಕೆಗೆ ಸರಿಯಾಗಿ ಎಂಸ್ಯಾಂಡ್ ಪೂರೈಕೆಯಾಗಿರುವುದರಿಂದ ಯಾವುದೇ ಕೊರತೆಯ ಪ್ರಶ್ನೆ ಉತ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.