ಕಂಡಕ್ಟರ್ ಟಿಕೇಟ್ ನಲ್ಲಿ ಮಹಿಳೆಗೆ ಮೊಬೈಲ್ ನಂಬರ್ ಬರೆದುಕೊಟ್ಟ!

ಟ್ವೀಟರ್ ನಲ್ಲಿ KSRTCಗೆ ಹೋಯಿತು ಕಂಪ್ಲೇಂಟ್

ಈತ ಟಿಕೇಟ್…. ಟಿಕೇಟ್…. ಎನ್ನುತ್ತಾ ಪ್ರಯಾಣಿಕರಿಗೆ ಟಿಕೇಟ್ ಕೊಡಬೇಕಾಗಿದ್ದ KSRTC ಕಂಡಕ್ಟರ್. ಆದರೆ ಕರ್ತವ್ಯದ ವೇಳೆ ಮಹಿಳಾ ಪ್ರಾಯಾಣಿಕರೊಬ್ಬರಿಗೆ ಟಿಕೇಟಿನ ಹಿಂಬದಿಯಲ್ಲಿ ತನ್ನ ಮೊಬೈಲ್ ನಂಬರ್ ಅನ್ನು ಬರೆದುಕೊಟ್ಟು ತಗಲಾಕೊಂಡ. ಇದಕ್ಕಾಗಿ ಸಸ್ಪೆಂಡ್ ಕೂಡ ಆದ. ಆದರೆ…

ನಡೆದಿದ್ದು ಏನು?
ಮೊನ್ನೆ ದಿನ KSRTC ಬಸ್ಸಿನಲ್ಲಿ ಮಹಿಳೆಯೊಬ್ಬರು ಪಿರಿಯಾಪಟ್ಟಣದಿಂದ ಹುಣಸೂರಿಗೆ ಪ್ರಯಾಣಿಸುತ್ತಿದ್ದರು. ಕರ್ತವ್ಯದಲ್ಲಿದ್ದ ಮೈಸೂರಿನವರೆನ್ನಲಾದ ಕಂಡಕ್ಟರ್ ಟಿಕೇಟಿನ ಹಿಂಬದಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದುಕೊಟ್ಟು ಕಾಲ್ ಮಾಡುವಂತೆ ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಮುಜುಗರಕ್ಕೊಳಗಾದ ಆಕೆ ಸುಂಟಿಕೊಪ್ಪದಲ್ಲಿರುವ ತನ್ನ ಸಂಬಂಧಿ ಯುವಕನಿಗೆ ವಿಷಯ ತಿಳಿಸಿದ್ದಾರೆ. ಯುವಕ ಘಟನೆಯನ್ನು ಉಲ್ಲೇಖಿಸಿ KSRTC ಯ ಟ್ವೀಟರ್ ಖಾತೆಗೆ ಟ್ವೀಟ್ ಮಾಡಿ ಪುಕಾರು ನೀಡಿದ್ದಾರೆ. ಟ್ವೀಟ್ ನೋಡಿದ KSRTC ಯ ಉನ್ನತಾಧಿಕಾರಿಗಳು ಈ ಕಂಡಕ್ಟರ್ ನನ್ನು ಸಸ್ಪೆಂಡ್ ಮಾಡಿದ್ದಾರೆ. ಇದರಿಂದ ಕಂಗಾಲಾದ ಕಂಡೆಕ್ಟರ್ ಮತ್ತು ಆತನ ಮನೆಯವರು ಟ್ವೀಟ್ ಮಾಡಿದ ಯುವಕನ ಬಳಿ ಕ್ಷಮಿಸುವಂತೆ ಕಾಡಿಬೇಡಿದ್ದಾರೆ. ಅಧಿಕಾರಿಗಳ ಬಳಿಯೂ ಅಂಗಲಾಚಿದ್ದಾರೆ. ಹೀಗಾಗಿ ಯುವಕ ಆದ ಪ್ರಮಾದವನ್ನು ಮಾನವೀಯ ನೆಲೆಗಟ್ಟಿನಲ್ಲಿ ಮನ್ನಿಸಿರುವುದಾಗಿಯೂ ಮತ್ತು ಕಂಪ್ಲೇಂಟ್ ಅನ್ನು ಹಿಂತೆಗೆದು ಕೊಂಡಿರುವುದಾಗಿ KSRTC ಅಧಿಕಾರಿಗಳಿಗೆ ತಿಳಿಸಿದ್ದರಲ್ಲದೆ ತಾನು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಹೀಗಾಗಿ ಕಂಡೆಕ್ಟರ್ ನ ಸಸ್ಪೆಂಡ್ ರದ್ದುಗೊಂಡು ಮೇಲಾಧಿಕಾರಿಗಳ “ವಾರ್ನಿಂಗ್” ನೊಂದಿಗೆ ನಾಳೆಯಿಂದ ಪುನಃ ರೈಟ್…. ರೈಟ್… ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.

“ಟಿಕೇಟ್ ನಲ್ಲಿ ಕಂಡಕ್ಟರ್ ನ ಮೊಬೈಲ್ ನಂಬರ್” ಅವಾಂತಾರದ ಸಮಸ್ಯೆ ಇತ್ಯಾರ್ಥಗೊಂಡಿದ್ದರೂ ಇಂತಹ ಪ್ರಮೇಯ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ KSRTC ಗೆ ಟ್ವೀಟರ್ ನಲ್ಲಿ ಕಂಪ್ಲೇಂಟ್ ಮಾಡಿದ್ದ ಯುವಕ ಮನವಿ ಮಾಡಿಕೊಂಡಿದ್ದಾರೆ.

error: Content is protected !!