ಎಸ್.ಡಿ.ಪಿ.ಐ ಸಂಘಟನೆಯನ್ನು ನಿಷೇಧಿಸಿ: ಸಂಸದ ಪ್ರತಾಪ್ ಸಿಂಹ ಆಕ್ರೋಶ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆ ಪ್ರರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಈ ಕಗ್ಗೊಲೆ ನೋಡಿ ಮನಸ್ಸಿಗೆ ವೇದನೆಯಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಇಂತಹ ಘಟನೆ ಆಗುತ್ತಿರೋದಕ್ಕೆ ನಾಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಹಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಕಾರ್ಯಕರ್ತನ ಹತ್ಯೆ ನಡೆದಿರುವುದು ವೇದನೆ ತಂದಿದೆ. ಅಂದು ಮಂಗಳೂರಿನಲ್ಲಿ ಪೊಲೀಸರ ಮೇಲೆ ಆಕ್ರಮಣ ನಡೆಯಿತು. ಡಿ.ಜೆ.ಹಳ್ಳಿ, ಕೆಜಿ ಹಳ್ಳಿಯಲ್ಲಿ ಗಲಭೆ ನಡೆಯಿತು ಹೀಗೆ ರಾಜ್ಯದಲ್ಲಿ ಹಿಂದುಗಳ ಕಗ್ಗೊಲೆಯಾಗುತ್ತಲೇ ಇದೆ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಘಟನೆಗಳೆಲ್ಲ ನಡೆಯುತ್ತಿರುವುದು ಬೇಸರ ತಂದಿದೆ. ಈ ಮೊದಲೇ ಸರ್ಕಾರ, ಎಸ್ ಡಿಪಿಐ ಸಂಘಟನೆಯನ್ನು ನಿಷೇಧ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿತ್ತೇ? ಎಂದು ಸರ್ಕಾರಕ್ಕೆ ಅವರು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಸಿಎಂ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಡಿ.ಜೆ.ಹಳ್ಳಿ ಕೆ.ಜಿ.ಹಳ್ಳಿ ಗಲಾಟೆ ನಡೆದಿತ್ತು. ಈಗ ಶಿವಮೊಗ್ಗದಲ್ಲಿ ಹಿಂದೂ ಯುವಕನ ಕೊಲೆಯಾಗಿದೆ. ಮೊದಲು ಮುಖ್ಯಮಂತ್ರಿಗಳು ಮಾತನಾಡುವುದನ್ನು ನಿಲ್ಲಿಸಿ ಕೃತಿಯಲ್ಲಿ ಕಠಿಣತೆ ತೋರಬೇಕು. ಪ್ರತಿ ಹತ್ಯೆ ನಡೆದಾಗಲೂ ನಾವು ಎಸ್ ಡಿಪಿಐ ಸಂಘಟನೆ ನಿಷೇಧ ಮಾಡಿ ಎಂದು ಒತ್ತಾಯ ಮಾಡುತ್ತಲೇ ಇದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಆ ಸಂಘಟನೆಯನ್ನು ಬ್ಯಾನ್ ಮಾಡಲಿ ಎಂದು ಪ್ರತಾಪ್ ಸಿಂಹ್ ಆಕ್ರೋಶ ಹೊರಹಾಕಿದ್ದಾರೆ.