fbpx

ಎಸ್.ಎಂ ಕೃಷ್ಣ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಸ್ವಾಗತಾರ್ಹ: ಪ್ರತಾಪ ಸಿಂಹ

ನವದೆಹಲಿ: ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಎಸ್.ಎಂ. ಕೃಷ್ಣ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸ್ವಾಗತಾರ್ಹ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಸಾಫ್ಟ್‌ವೇರ್ ಕಂಪೆನಿಗಳ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ಪ್ರಯತ್ನಿಸಿ ಯಶಸ್ವಿಯಾದ ಅವರು, ಜಾಗತಿಕ ಸ್ಥಾನಮಾನ ದೊರೆಯಲು ಕಾರಣರಾದರು. ಭೂ ದಾಖಲೆಗಳ ಗಣಕೀಕರಣ ವ್ಯವಸ್ಥೆ ಜಾರಿಗೊಳಿಸಿದರು ಎಂದರು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಪ್ರಾರಂಭಿಸಿದ ಕೃಷ್ಣ, ವಿದೇಶಾಂಗ ಸಚಿವರಾಗಿದ್ದ ಸಂದರ್ಭ ಪಾಸ್‌ಪೋರ್ಟ್‌ ಪಡೆಯುವ ವ್ಯವಸ್ಥೆಯನ್ನೂ ಸರಳೀಕರಣಗೊಳಿಸಿದರು. ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿರ್ಧಾರ ಅಭಿನಂದನೀಯ ಎಂದು ಅವರು ಹೇಳಿದರು.

ಇದುವರೆಗೆ ಸಾಹಿತ್ಯ, ಸಂಗೀತ ಕ್ಷೇತ್ರದ ಗಣ್ಯರಿಗೂ, ಚಲನಚಿತ್ರ ಕಲಾವಿದರಿಗೂ ಸೀಮಿತವಾಗಿದ್ದ ದಸರಾ ಉದ್ಘಾಟನೆಯ ಹೊಣೆಯನ್ನು ಯಶಸ್ವಿ ರಾಜಕಾರಣಿಗೂ ವಹಿಸುವ ಮೂಲಕ ಬೊಮ್ಮಾಯಿ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಅವರು ತಿಳಿಸಿದರು.

ಮೈಸೂರಿನ ಅಭಿವೃದ್ಧಿಗೂ ಕೊಡುಗೆ ನೀಡುವ ಮೂಲಕ ಕೃಷ್ಣ ಅವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. 20 ವರ್ಷಗಳ ಹಿಂದೆಯೇ ಮೈಸೂರು- ಬೆಂಗಳೂರು ಹೆದ್ದಾರಿ ಅಭಿವೃದ್ಧಿ, ಮೈಸೂರಿನ ವರ್ತುಲ ರಸ್ತೆ ನಿರ್ಮಾಣದಲ್ಲಿ ಅವರ ಕೊಡುಗೆ ಇದೆ ಎಂದು ಅವರು ಸ್ಮರಿಸಿದರು.

‘ರಾಜಕೀಯ ಭಿನ್ನಾಭಿಪ್ರಾಯ ದೂರವಿರಿಸಿ ಕೃಷ್ಣ ಅವರ ಸೇವೆಯನ್ನು ನೋಡಬೇಕಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ನಾವು ಹೇಳಿಲ್ಲ.ಬದಲಿಗೆ, ಕೇವಲ ನೆಹರೂ ಕುಟುಂಬವೊಂದೇ ಅಭಿವೃದ್ಧಿ ಮಾಡಿದೆ ಎಂಬ ಹೇಳಿಕೆ ತಪ್ಪು’ ಎಂದರು.

ಕಾಂಗ್ರೆಸ್‌ನಲ್ಲಿ ಒಳ್ಳೆಯ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೂ ದೇಶದ ಅಭಿವೃದ್ಧಿಯ ಶ್ರೇಯಸ್ಸನ್ನು ಒಂದು ಕುಟುಂಬಕ್ಕೆ ಮಾತ್ರ ಸಮರ್ಪಣೆ ಮಾಡುವುದು ತಪ್ಪು’ ಎಂದು ಪ್ರತಾಪಸಿಂಹ ಅಭಿಪ್ರಾಯಪಟ್ಟರು.

‘ಕಾಂಗ್ರೆಸ್ ಪಕ್ಷದಲ್ಲಿದ್ದ ಅನೇಕ ನಾಯಕರ ಕೊಡುಗೆಯನ್ನು ನಾವು ಶ್ಲಾಘಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪೆನಯ ಕುರಿತು ಮಾತನಾಡುವಾಗ ಪ್ರಧಾನಿ ಮೋದಿ ಅವರು ಬಸವಣ್ಣ ಅವರನ್ನು ಸ್ಮರಿಸುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಜಾರಿಗೆ ನೆಹರೂ ಕುಟುಂಬವೇ ಪ್ರೇರಣೆ ಎಂದು ಕಾಂಗ್ರೆಸ್‌ ಮುಖಂಡರು ಕೊಚ್ಚಿಕೊಳ್ಳುವುದು ಸರಿಯಲ್ಲ’ ಎಂದು ಅವರು ಟೀಕಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕೇವಲ ಕಾಂಗ್ರೆಸ್ ಅಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಆರಂಭವಾಗಿತ್ತು. ಆಗ ಕಾಂಗ್ರೆಸ್‌ ಇರಲೇ ಇಲ್ಲ. ಕಾಂಗ್ರೆಸ್‌ ಸ್ಥಾಪನೆಗೆ ಮೊದಲೇ ಅನೇಕರು ಹೋರಾಟ ಮಾಡಿದ್ದಾರೆ. ಕಾಂಗ್ರೆಸ್‌ ಮುಖಂಡರನ್ನೂ ಹೊರತಪಡಿಸಿ ಅನೇಕರು ಸ್ವಾತಂತ್ರ್ಯಕ್ಕೆ ಕಾರಣರಾಗಿದ್ದಾರೆ ಎಂಬುದನ್ನು ಮರೆಯಕೂಡದು ಎಂದು ಅವರು ಹೇಳಿದರು.

error: Content is protected !!