ಎಲ್ಲಾ ಕೊಡುತ್ತಿದ್ದರೆ ಉಚಿತ ಅಪಾಯ ಖಚಿತ!

ನವದೆಹಲಿ (ಏ.05): ಹಲವಾರು ರಾಜ್ಯಗಳು ಹೀಗೇ ಉಚಿತ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೆ ಆ ರಾಜ್ಯಗಳು ಕೂಡಾ ಶ್ರೀಲಂಕಾ (Srilanka) ಮಾದರಿಯಲ್ಲಿ ಆರ್ಥಿಕ ಅದಃಪತನಕ್ಕೆ ಇಳಿಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗಿನ ಸಭೆಯಲ್ಲಿ ಕೆಲ ಹಿರಿಯ ಅಧಿಕಾರಿಗಳ ಕಳವಳ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪ್ರಧಾನಿ ಮೋದಿ ತಮ್ಮ ಅಧಿಕೃತ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಕಾರ‍್ಯದರ್ಶಿಗಳೊಂದಿಗೆ ಸುದೀರ್ಘ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು.

ಈ ವೇಳೆ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳಲ್ಲಿನ ಲೋಪದೋಷಗಳನ್ನು ಸೂಚಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಮಾತನಾಡಿ, ಇತ್ತೀಚೆಗೆ ಚುನಾವಣೆಗೆ ಒಳಪಟ್ಟರಾಜ್ಯಗಳೂ ಸೇರಿ ಕೆಲವು ರಾಜ್ಯಗಳ ಉಚಿತ ಯೋಜನೆಗಳು ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳುವಂಥವಲ್ಲ. ಇವು ಭಾರತವನ್ನು ಶ್ರೀಲಂಕಾ ಹಾದಿಗೆ ಕೊಂಡೊಯ್ಯಬಹುದು ಎಂದು ದೂರು ಹೇಳಿದರು. ಎಲ್ಲಾ ಸಲಹೆಗಳನ್ನು ಪ್ರಧಾನಿ ಮೋದಿ ಅವರು ಮುಕ್ತ ಮನಸ್ಸಿನಿಂದ ಆಲಿಸಿದರು ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾ ಸದ್ಯ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇಂಧನ, ಅಡುಗೆ ಅನಿಲ, ವಿದ್ಯುತ್‌ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಪ್ರಧಾನಮಂತ್ರಿಗಳ ಪ್ರಧಾನ ಕಾರ‍್ಯದರ್ಶಿ ಪಿ.ಕೆ.ಮಿಶ್ರಾ ಮತ್ತು ಕ್ಯಾಬಿನೆಟ್‌ ಕಾರ್ಯದರ್ಶಿ ರಾಜೀವ್‌ ಗೌಬಾ ಸೇರಿದಂತೆ ಕೇಂದ್ರ ಸರ್ಕಾರದ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!