ಎರಡು ವಾರಕ್ಕಿಂತ ಹೆಚ್ಚು ದಿನ ಒಂದೇ ಮಾಸ್ಕ್ ಬಳಸಿದರೆ ಅಪಾಯ ಗ್ಯಾರೆಂಟಿ!

ನವದೆಹಲಿ: ಕೊರೋನಾ 2ನೇ ಅಲೆ ಸೃಷ್ಟಿಸುವ ಕರಾಳತೆಯ ಮಧ್ಯೆಯೇ ಭಾರತೀಯರನ್ನು ಬ್ಲ್ಯಾಕ್ ಫಂಗಸ್ (mucormycosis) ಕಾಡುತ್ತಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ.
ಈ ಸಂಬಂಧ ಏಮ್ಸ್ನ ನ್ಯೂರೋಸರ್ಜನ್ ವೈದ್ಯರು ನೀಡಿರುವ ಹೇಳಿಕೆ ಪ್ರಕಾರ ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುತ್ತದೆಯಂತೆ. ಸತತವಾಗಿ ಒಂದೇ ಮಾಸ್ಕನ್ನು ಧರಿಸುವುದರಿಂದ ಫಂಗಸ್ ಬೆಳೆಯುತ್ತಿದೆ ಎಂದು ಡಾ. ಸರಾಟ್ ಚಂದ್ರ ತಿಳಿಸಿದ್ದಾರೆ. ಇದಕ್ಕೆ ಅಸ್ವಚ್ಛವಾದ ಮಾಸ್ಕ್ ಕಾರಣವಿರಬೇಕು ಎಂದು ವೈದ್ಯರು ವಿಶ್ಲೇಷಿಸಿದ್ದಾರೆ. ಸತತವಾಗಿ ಒಂದೇ ಮಾಸ್ಕ್ ಧರಿಸುವುದರಿಂದ ಫಂಗಸ್ ಸುಲಭವಾಗಿ ಬೆಳೆಯುತ್ತಿದೆ. ಹೀಗಾಗಿಯೇ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನಿಯಂತ್ರಿತ ಮಧುಮೇಹ, ಅತಿಯಾದ ಸ್ಟಿರಾಯಿಡ್ ಬಳಕೆ, ಮೆಡಿಕಲ್ ಆಕ್ಸಿಜನ್ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್ ಫಂಗಸ್ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಏಮ್ಸ್ ವೈದ್ಯರು ತಿಳಿಸಿದರು.
ಇನ್ನು ಆಕ್ಸಿಜನ್ ಸಿಲಿಂಡರ್ನಿಂದ ಕೋಲ್ಡ್ ಆಕ್ಸಿಜನನ್ನು ನೇರವಾಗಿ ನೀಡುವುದು ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಹಿಂದೆಂದೂ ಪ್ಯಾಂಡಮಿಕ್ನೊಂದಿಗೆ ಫಂಗಸ್ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಆದರೆ ಈಗ ಕೊರೋನಾ 2ನೇ ಅಲೆಯ ಸಮಯದಲ್ಲಿ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.