fbpx

ಉಭಯವಾಸಿ ಆಧ್ಯಾತ್ಮ ಗುರು ‘ಚಂಗಪ್ಪಣ್ಣ’

ಅಲ್ಲಿಗೆ ತಲುಪಲು ಇನ್ನೇನು‌ ಸ್ವಲ್ಪ ದೂರವಿತ್ತಷ್ಟೆ. ನಾ ನಿಂತಲ್ಲಿಂದ ಮುಂದಕ್ಕೆ ನಡೆದುಕೊಂಡೇ ಹೋಗಬೇಕಿತ್ತು.‌ ಕೆಂಪನಿಗೆ ಅಲ್ಲೇ ಸ್ಟಾಂಡ್ ಹಾಕಿ, ಸುತ್ತಲು ಒಮ್ಮೆ ಕಣ್ಣು ಹಾಯಿಸಿದೆ. ಕಾಡಿನೊಳಗೆ ದಾರಿತಪ್ಪಿದ ಅನುಭವ. ಪಕ್ಕದಲ್ಲೇ ಹರಿಯುತ್ತಿದ್ದ ಸಣ್ಣ ತೊರೆ, ದುರ್ಗಮ ಹಾದಿ, ಇದೀಗ ಹಾದಿಗೆ ಅಡ್ಡ ಬಿದ್ದು, ಯಾರೂ ತೆರವುಗೊಳಿಸದೆ, ಹಲವು ವರ್ಷಗಳೇ ಕಳೆದಿದ್ದ ದೈತ್ಯ ಬಸುರಿ ಮರ...!

ಇಷ್ಟು ಹೊತ್ತು‌ ಆ ಕೆಟ್ಟ ಹಾದಿಯಲ್ಲಿ ಎಡವುತ್ತಾ ಬಂದು, ಈಗ ಸ್ಟಾಂಡಿಗೊರಗಿ ನಿಂತಿರುವ ಕೆಂಪ, ಅವನ ಹ್ಯಾಂಡಲಿಗೆ ಸಿಕ್ಕಿಸಿದ್ದ ಸಣ್ಣ ಕೈ-ಬ್ಯಾಗನ್ನು ಎತ್ತಿಕೊಂಡು ಅಡ್ಡ ಬಿದ್ದಿದ್ದ ಬಸುರಿ ಮರವನ್ನು ಬಳಸಿ, ಮುಂದೆ ನಡೆದೆ…

ಕಾಡು ಹಕ್ಕಿಯ ಕಲರವ ಆ ವಾತವರಣವನ್ನು ಇನ್ನಷ್ಟು ಗಂಭೀರವಾಗಿಸಿತ್ತು. ಜೇಬಿನಿಂದ ಮೊಬೈಲ್ ತೆಗೆದು ನೋಡಿದೆ. ನೆಟ್ವರ್ಕ್ ಸಿಗ್ನಲ್ ಮಕಾಡೆ ಮಲಗಿತ್ತು. ಬೆಳಗ್ಗಿನ ಬಿಸಿಲು ಮುಗಿದು, ಈಗ ಮಧ್ಯಾಹ್ನದ ಬಿಸಿಲು ಆ ಕಾಡಿನೊಳಗಿನ ಹಾದಿಯಲ್ಲಿ ಸಾಗುತ್ತಿದ್ದ ನನ್ನನ್ನು ಬಾದಿಸತೊಡಗಿತ್ತು.
ಸುಮಾರು ಹತ್ತು ನಿಮಿಷದ ನಡಿಗೆ. ನಾನು ತಲುಪಬೇಕಿದ್ದ ಸ್ಥಳಕ್ಕೆ ಹತ್ತಿರಾಗಿದ್ದೆ. ಹರಿಯುತ್ತಿದ್ದ ತೊರೆಯ ಆ ಬದಿಯಿಂದ ಬಡಕಲು ನಾಯೊಂದು ನನ್ನ ಜಾಡುಹಿಡಿದು, ಸೊರಗಿದ ಸ್ವರದಲ್ಲಿ ಬೊಗಳ ತೊಡಗಿತ್ತು.

ನಾಯಿಯ ಸದ್ದಿಗೆ ಹಳೆಯ ಹೆಂಚು ಮನೆಯಿಂದ ಹೊರಗೆ ಬಂದು, ಬಿಸಿಲಿಗೆ ಕೈ ಅಡ್ಡಾಗಿಸಿ ತೊರೆ ದಾಟಿ ಅವರ ಮನೆಯ ಕಡೆ ಹೋಗುತ್ತಿದ್ದ ನನ್ನನ್ನೇ ನೋಡುತ್ತಿದ್ದರು‌ ಚಂಗಪ್ಪಣ್ಣ. ನಾಯಿ ಈಗ ಬೊಗಳುವುದನ್ನು ನಿಲ್ಲಿಸಿ, ಬಾಲವಲ್ಲಾಡಿಸುತ್ತಾ ಕುಂಯ್ ಗುಡತೊಡಗಿತ್ತು.

ತೊರೆಗೂ ಅವರ ಮನೆಗೂ ಸಂಪರ್ಕ ಸೇತುವೆಯಂತಿದ್ದ ಬೈನೆ ಮರದ ತುಂಡನ್ನು ಮೆಟ್ಟಿ, ನಾನು ಚಂಗಪ್ಪಣ್ಣನಿಗೆ ಹತ್ತಿರಾದೆ. ಭಾವಪರವಶವಾಗಿ ಕೈ ಹಿಡಿದುಕೊಂಡು, ಮನೆಯ ವರಾಂಡಕ್ಕೆ ಕರೆದೊಯ್ದರು. ನಾಯಿ ಅದರ ಪಾಡಿಗೆ ಅದು ಹೋಗಿ ವರಾಂಡದ ಮೂಲೆಯಲ್ಲಿ ಮುದುಡಿಕೊಂಡಿತು.

ಕೈಯಲ್ಲಿದ್ದ ಕೈ ಚೀಲವನ್ನು ಚಂಗಪ್ಪಣ್ಣನ ಕೈಗೆ ಕೊಟ್ಟೆ. ಅದರೊಳಗೆ ಒಂದು ಬಾಟಲಿ ಗಾಂಧಾರಿ ಮೆಣಸಿನ ವೈನ್ ಹಾಗು ಐದು ಕಟ್ಟು ಬೀಡಿ ಇತ್ತು.
“ಇದೆಲ್ಲಾ ಯಾಕೆ ತಂದೆ?” ಎಂದು ಎಂದಿನಂತೆ ನಕ್ಕರು.

“ಗುರು‌ಕಾಣಿಕೆ ಚಂಗಪ್ಪಣ್ಣ…” ಎಂದು ಕಣ್ಣು ಮಿಟುಕಿಸಿದೆ.

“ನಿನ್ನೆಯ ಪೋರ್ಕ್ ಇದೆ ಇರು, ಎರಡು ತುಂಡು ತರುತ್ತೇನೆ” ಎಂದು ಒಳಗೆ ಹೋದರು. ಮೂಲೆಯಲ್ಲಿ ಮಗಿದ್ದ ನಾಯಿ ಹಾಗೇ ಮಲಗಿತ್ತು.


ಈ ಚಂಗಪ್ಪಣ್ಣ ನನಗೊಂದು ರೀತಿಯಲ್ಲಿ ಆಧ್ಯಾತ್ಮಿಕ ಗುರು ಹಾಗು ಉಭಯವಾಸಿ ಮನುಷ್ಯ. ಇವರು‌ ಬಹುತೇಕ ಸಮಯ ಭೂಮಿಯ ಮೇಲಿದ್ದರೆ, ಇನ್ನುಳಿದ ಸಮಯವನ್ನು ನೀರಿನಲ್ಲಿ ಕಳೆಯುತ್ತಾರೆ. ಎಲ್ಲಾ ಧರ್ಮದ ಧಾರ್ಮಿಕ ಗ್ರಂಥಗಳನ್ನು ಹಾಗು ವೇದ, ಉಪನಿಷತ್ತುಗಳನ್ನು ಓದಿಕೊಂಡಿರುವ. ಕೆಲ ವರ್ಷಗಳಿಂದ ಏನನ್ನೋ ಹುಡುಕುತ್ತ ಆಧ್ಯಾತ್ಮಿಕ ಸುಳಿಯಲ್ಲಿ ಈಜುತ್ತಿರುವ ಇವರ ಹುಡುಕಾಟದ ನಡುವಲ್ಲಿ ನಾನು ಇವರ ಕೈಗೆ ಸಿಕ್ಕಿದ್ದೆ ಒಂದು ಅಸಂಬದ್ಧ.

ಏಸು ಕ್ರಿಸ್ತನ ಬೈಬಲನ್ನು ಅಭ್ಯಸಿಸಿದ ಇವರು ಪ್ರಪಂಚದಲ್ಲಿಯೇ ಆತನಷ್ಟು ಕರುಣಾಮಯಿ ಯಾರೂ ಇಲ್ಲ ಎಂದು ಹೇಳುತ್ತಾರೆ ಹಾಗು ಇವರು ಓದಿದ ಕಾನ್ವೆಂಟ್ ಶಾಲೆಯಲ್ಲಿ ಇವರಿಗೆ ಬೆತ್ತದ ಕೋಲಿನಲ್ಲಿ ಬಾರಿಸುತ್ತಿದ್ದ ಚರ್ಚ್ ಫಾದರ್ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.

ಆತನನ್ನು ಕೊಲ್ಲುತ್ತಿದ್ದರೂ. ಅವರು ಅರಿಯದೆ ಮಾಡುತ್ತಿದ್ದಾರೆ, ಇವರನ್ನು ಕ್ಷಮಿಸು ದೇವರೇ ಎಂದ ಕ್ರೈಸ್ತ ಪುಣ್ಯಪುರುಷನ ಅನುಯಾಯಿ ಫಾದರ್ ನಾನು ಹೋಂ ವರ್ಕ್ ಮಾಡದ ಸಣ್ಣ ತಪ್ಪನ್ನೂ ಕ್ಷಮಿಸುತ್ತಿರಲಿಲ್ಲ ಎಂದು ಮರುಗುತ್ತಾರೆ.
ಇವರಿಗೆ ಅವರ ತಂದೆಯ ಮೇಲೂ ಅಷ್ಟೇ ಬೇಸರ ಹಾಗು ಕೊಪ ಇದೆ. ಮನೆಯಲ್ಲೇ ಭಗವದ್ಗೀತೆ ಬೋಧಿಸುತ್ತಿದ್ದ ತಂದೆಗೆ ಒಂದು ದಿನ “ಅಪ್ಪ ಈ ಶ್ರೀ ಕೃಷ್ಣ ಪರಮಾತ್ಮನಿಗೆ ಯುದ್ಧ ತಡೆಯಬಹುದಿತ್ತಲ್ಲ ದೇವರು‌ ಅನ್ನುತ್ತೀಯ ದೇವರೆಲ್ಲಾದರೂ ಯುದ್ಧ ಮಾಡಿಸುತ್ತಾನಾ?” ಎಂದು ಇವರು ಕೇಳಿದಕ್ಕೆ. “ಅಧಿಕ ಪ್ರಸಂಗತನ ನಿನ್ನದು” ಇದು ಧರ್ಮಯುದ್ಧ. ಎಂದು ಬೆನ್ನಿಗೆ ಗುದ್ದಿದ್ದರಂತೆ. ಅಲ್ಲಿಂದ ಅವರಿಗೆ ಅವರ ತಂದೆಯನ್ನೂ ಕಂಡರೆ ಅಷ್ಟಕ್ಕಷ್ಟೆ. ತಂದೆಯೊಂದಿಗೆ ಮಾತು ಬಿಟ್ಟು. ಕೊನೆಗೆ ಊರೇ ಬಿಟ್ಟು. ಮಂಗಳೂರಿಗೆ ಹೋಗಿದ್ದ ಚಂಗಪಣ್ಣ. ತಂದೆ ತೀರಿಹೋದ ಮೇಲೆ ಮರಳಿ ಬಂದಾಗ‌ ಅವರ ಅಣ್ಣ ತಮ್ಮಂದಿರು ಮದುವೆ ಆಗಿ ಬೇರೆ ಊರು‌ ಸೇರಿ, ತಾಯಿಯೂ ತೀರಿಹೋಗಿ, ಮನೆ ಖಾಲಿಯಾಗಿತ್ತು. ಮತ್ತೆ ಇವರು ಮಂಗಳೂರಿಗೆ ಹೋಗದೆ, ಕಾಡು ಬಿದ್ದಿದ್ದ ಹಳೇ ತೋಟವನ್ನು ರಿಪೇರಿ ಮಾಡುತ್ತಾ ಇಲ್ಲೇ ಉಳಿದಿದ್ದಾರೆ.

“ಚಂಗಪ್ಪಣ್ಣ ನಿಮಗೆ ಮದುವೆ ಆಗಬೇಕು ಅನಿಸಿಲ್ಲವೇ?” ಎಂದು ಕೇಳಿದರೆ. ನಾನು ಬ್ರಹ್ಮನನ್ನು ಹುಡುಕುತ್ತಿರುವ ಬ್ರಹ್ಮಚಾರಿ, ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಆತನಿಗೆ ಮಾತ್ರ ಗೊತ್ತಿದೆ. ಅವನನ್ನು ಕೇಳಬೇಕಿದೆ. ಆ ಕಾರಣಕ್ಕೆ ನಾನು ಕಠಿಣ ಬ್ರಹ್ಮಚರ್ಯವನ್ನು ಮೈ ಗೂಡಿಸಿಕೊಂಡಿದ್ದೇನೆ ಎನ್ನುತ್ತಾರೆ.
“ಕುರಾನ್ ಬಗ್ಗೆ ಏನು ಹೇಳುತ್ತೀರಾ?” ಎಂದರೆ. ಮಹಮದ್ ಪೈಗಂಬರ್ ಆದರ್ಶ ಪುರುಷ. ಆದರೇ ಆತ ಹೇಳಿದ್ದೆ ಬೇರೆ, ಇಲ್ಲಿ ಆಗುತ್ತಿರುವುದೇ ಬೇರೆ. ಆದರ್ಶ ಪುರುಷರ ಆದರ್ಶ, ತತ್ವ ಸಿದ್ಧಾಂತಗಳನ್ನು ಈ ಹಾಳು ಜನ ತಿರುಚಿ, ಹುಚ್ಚರಂತೆ ಆಡುತ್ತಿದ್ದಾರೆ ಎಂದು ಎಲ್ಲರಿಗೂ ಬೈಯ್ಯಲು ತೊಡಗುತ್ತಾರೆ.
ಈ ಚಂಗಪ್ಪಣ್ಣ ಎಷ್ಟು ಪವರ್ ಫುಲ್ ಮನುಷ್ಯ ಎಂದರೆ ಅವರ ಕೋಣೆಯಲ್ಲೇ ಕುಳಿತು. ವರ್ಷಕ್ಕೊಮ್ಮೆ ಶಬರಿಮಲೆಯ ಜ್ಯೋತಿ ದರ್ಶನ ಮಾಡುತ್ತಾರಂತೆ ಅದಕ್ಕೆ ಜಿಜ್ಞಾಸೆಯೊಂದಿಗೆ ಕೇಳಿದೆ, ‘ಅಲ್ಲ ಚಂಗಪ್ಪಣ್ಣ ನೀವು ಹಂದಿ ತಿನ್ನುತ್ತೀರ…ಬೀಡಿ ಎಳೆಯುತ್ತೀರ… ಆಗಾಗ್ಗೆ ಎಣ್ಣೆಯನ್ನು ಹಾಕುತ್ತೀರಾ. ಮತ್ತೆ ಆಧ್ಯಾತ್ಮ ಎನ್ನುತ್ತೀರ. ಸಾಕಷ್ಟು ಪಾಪ ಕೃತ್ಯ ಮಾಡಿರುವ ನನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡಿದ್ದೀರ. ಏನಿದರ ಮರ್ಮ?’ ಎಂದು. ಸ್ವಲ್ಪಮಟ್ಟಿಗೆ ಸಿಟ್ಟು ಮಾಡಿಕೊಂಡ ಅವರು,
‘ಮಾಂಸ ತಿನ್ನಬಾರದು ಅಂತ ಯಾರು ಹೇಳಿದ್ದಾರೆ ? ನೋಡು ಈ ಪ್ರಪಂಚ ಆಗಿರುವುದು ಪಂಚಭೂತಗಳಿಂದ ಈ ಮಾಂಸವೂ ಅಷ್ಟೆ, ನೀನು ಅಷ್ಟೆ, ನಾನು ಅಷ್ಟೆ, ಕಿತ್ತಳೆ ಹಣ್ಣೂ ಅಷ್ಟೆ. ಇಲ್ಲಿ ಎಲ್ಲವೂ ಒಂದೆ. ಮಾಂಸ ಬೇರೆ ಅಲ್ಲ, ಕಿತ್ತಳೆ ಹಣ್ಣು ಬೇರೆ ಅಲ್ಲ. ಹೆಂಡ ಬೇರೆ ಅಲ್ಲ, ಬೀಡಿ ಬೇರೆ ಅಲ್ಲ’ ಎಂದು ಒಂದು ಬೀಡಿಯನ್ನು ಕೈಗೆತ್ತಿಕೊಂಡು ಬೆಂಕಿ ಹಚ್ಚಿದ್ದರು. ಅವರ ಏಕಮಾತ್ರ ಶಿಷ್ಯನಾದ ನನಗೂ ಒಂದು ಬೀಡಿ ಕೊಟ್ಟಿದ್ದರು. ನಾನು ಅವರೊಂದಿಗೆ ಬೀಡಿ ಎಳೆಯುತ್ತಾ‌..

ಗಾಢವಾಗಿ ಏನನ್ನೋ ಯೋಚಿಸತೊಡಗಿದೆ.
ಆಗ ನುಡಿದರು ಚಂಗಪ್ಪಣ್ಣ
ಅವರ ಏಕಮಾತ್ರ ಶಿಷ್ಯನಾದ ನನ್ನ ಕುರಿತು ‘ನೋಡು ನಿನ್ನೊಳಗೆ ಒಂದು ಜ್ಯೋತಿ ಇದೆ. ಅದು ನನಗೆ ಗೊತ್ತಿದೆ. ಈಗ ನೀನು ಉಂಡಾಡಿ ಗುಂಡನಂತೆ ಯಾರ ಮಾತು ಕೇಳದೆ. ಓಡಾಡಿಕೊಂಡಿದ್ದೀಯಾ. ಆದರೆ ನಿರ್ದಿಷ್ಟ ವಯಸ್ಸಿನಲ್ಲಿ ನೀನು ಪುಣ್ಯ ಪುರುಷ ಆಗುತ್ತೀಯಾ. ಆಗ ನಾನು ತೀರಿ ಹೋಗಿರುತ್ತೇನೆ ತಿಳಿಯಿತೇ’ ಎಂದರು. ನಾನು ಮಾತನ್ನು ಬೇರೆಡೆಗೆ ತಿರುಗಿಸಿ, “ಅಲ್ಲ ಚಂಗಪ್ಪಣ್ಣ ಈ ಹುಡುಗಿಯರೂ ಪಂಚಭೂತಗಳಿಂದ ಆಗಿರುವುದು ಅಲ್ಲವೇ?” ಎಂದಿದ್ದೆ.
‘ಹೌದು‌’ ಎಂದು ತೀಕ್ಷ್ಣವಾಗಿ ನನ್ನನ್ನು ನೋಡಿ. ‘ನೋಡು ನಿನ್ನ ಜಾತಕ ನನ್ನ ಕೈಯ್ಯಲಿದೆ. ನಿನ್ನ ಎಲ್ಲಾ ಕಳ್ಳಾಟ ನನಗೆ ಗೊತ್ತಿದೆ’ ಎಂದು ಕಣ್ಣು ಮಿಟುಕಿಸಿದರು. ನಾನೂ ಕಣ್ಣು ಎವೆ ಇಕ್ಕದೆ ಅವರನ್ನೊಮ್ಮೆ ನೋಡಿದೆ.

ಇಷ್ಟು ಮಾತನಾಡಿ ಅಂದು ಮರಳಿದ್ದ ನಾನು. ಸುಮಾರು ಮೂರು ತಿಂಗಳು ಕಳೆದು ಇಲ್ಲಿಗೆ ಬಂದು, ಹೀಗೆ ಕೂತಿದ್ದೆ. ಹಾಗು ಚಂಗಪ್ಪಣ್ಣ ಒಳಗೆ ರಾತ್ರಿಯ ಹಂದಿ ಗಸಿಯನ್ನು ಬಿಸಿ ಮಾಡುತ್ತಿದ್ದರು.
ಸ್ವಲ್ಪ ಹೊತ್ತಲ್ಲೇ ಒಂದು ಸಣ್ಣ ಪಾತ್ರೆಯಲ್ಲಿ ಸಣ್ಣ ಸಣ್ಣ ಪೊಕ್೯ ತುಂಡುಗಳನ್ನು ತಂದು ಮುಂದಿಟ್ಟರು. ನಾಯಿಗೆ ಮೂಳೆ ಗ್ಯಾರಂಟಿ ಎಂದು ಮಲಗಿದಲ್ಲಿಂದಲೇ ಬಾಲ ಅಲ್ಲಾಡಿಸಿತು!
ನಾನು ತಂದಿದ್ದ ವೈನ್ ಬಗ್ಗಿಸಲು ಅಲ್ಲಿಗೆ ಎರಡು ಗಾಜಿನ ಲೋಟವೂ ಬಂತು.
ವೈನ್ ಹೀರುತ್ತಾ. ಕುಳಿತ ನಾವು ಕೊಂಚ ಕಾಲ ನಿಶ್ಯಬ್ಧವಾಗಿದ್ದೊ. ನಡು ನಡುವೆ ಹಂದಿ ಮೂಳೆ ಚಪ್ಪರಿಸುತ್ತಿದ್ದೊ. ಚಂಗಪ್ಣಣ್ಣ ಹೊಸ ಕಟ್ಟಿನಿಂದ ಬೀಡಿ ಹೊರಗೆಳೆದರು. ಒಂದು ಸಾಕು ನನಗೆ ಬೇಡ ಎಂದೆ.

ಒಂದನ್ನು ಮಾತ್ರ ಅವರು ಕೈಗೆತ್ತಿಕೊಂಡು ಬೆಂಕಿ ಗೀರಿ ಹೊಗೆ ಬಿಡತೊಡಗಿದರು.
” ನನ್ನ ಕಾಲ ಹತ್ತಿರ ಬರುತ್ತಿದೆ. ನಿನಗೆ ನಾನು ಅಂದು ಕೊಟ್ಟಿದ್ದ ಗ್ರಂಥಗಳನ್ನು ನೀನು ಇನ್ನು ಮುಟ್ಟಿನೋಡಿಲ್ಲ, ಮುಟ್ಟುವುದೂ ಇಲ್ಲ. ನಿನಗೆ ಆ ಸಮಯ ಇನ್ನೂ ಬಂದಿಲ್ಲ. ಸಮಯ ಬಂದಾಗ ಆಗುವುದನ್ನು ಯಾರಿಗೂ ತಡೆಯಲು ಸಾಧ್ಯವಾಗುವುದಿಲ್ಲ”. ಎಂದು ಗಂಭೀರವಾದರು.
‘ನನಗೆ ದೈಹಿಕವಾಗಿ ಮಾತ್ರ ಸಾವು. ಮಾನಸಿಕವಾಗಿ ನನಗೆ ಮುಕ್ತಿ ಇನ್ನು ಸಿಗಲಿಲ್ಲ‌.’ ಎನ್ನುತ್ತಾ ನಿಟ್ಟುಸಿರಾದರು.

“ಬ್ರಹ್ಮ ಸಿಕ್ಕಿದ್ನಾ ?” ಅಂತ ಕೇಳಿದೆ.

‘ಇಲ್ಲ ಸ್ವಲ್ಪ ಸೈತಾನಗಳ ಕಾಟ ಇಲ್ಲಿ. ನೋಡು, ಎಂದು ನಡು ತಲೆಯನ್ನು ತೋರಿಸಿದರು. ಇಲ್ಲಿಂದ ಇಳಿಸಿದ್ದು ಗಂಟಲವರೆಗೂ ಇಳಿದು ಬಿಟ್ಟಿತ್ತು. ಸ್ವಲ್ಪ ಆಗಿದ್ದರೆ ತೆಗೆದು ಬಿಡುತ್ತಿತ್ತು ಪ್ರಾಣ. ಅಮ್ಮನನ್ನು ಕರೆದೆ, ಪ್ರತ್ಯಕ್ಷವಾದಳು. ಸೈತಾನ ಓಡಿಹೋಯಿತು. ಇಂತಹ ಹೊಡೆತಗಳು ನನಗೆ ಮಾಮೂಲಿ’ ಎಂದರು.

ನಂತರ ಮಾತು ಬದಲಿಸಿ,
‘ಬಿಡು ಇದೆಲ್ಲ ನಿನಗೆ ಈಗ ಅರ್ಥ ಆಗುವುದಿಲ್ಲ. ನಿನಗೆ‌‌ ನಾನು‌ ಈಗ ಬರಲು ಹೇಳಿದ್ದು. ಈ ಊರಲ್ಲಿ ಒಬ್ಬ ಕೊಲೆಗಡುಕ ರೌಡಿ ಇದ್ದಾನೆ. ಅವನಿಗೆ ಒಬ್ಬ ಸುಪಾರಿ ಕೊಟ್ಟಿದ್ದಾನೆ. ಮೂರು‌ ಬಾರಿ ಪ್ರಯತ್ನಿಸಿದ್ದಾನೆ ನನ್ನನ್ನು ಮುಗಿಸಲು’ ಅಂದರು.
“ಅಯ್ಯೋ, ನಡಿರೀ.. ಸ್ಟೇಷನಿಗೆ ಕಂಪ್ಲೆಂಟ್ ಕೊಡೋಣ” ಅಂದೆ.

“ಯಾರ ಮೇಲೆ ?” ಅಂದರು.

“ಸುಪಾರಿ ಕೊಟ್ಟವನ ಮೇಲೆ ಹಾಗು ತೆಗೆದುಕೊಂಡವನ ಮೇಲೆ” ಎಂದೆ.

“ಅವರು ಸತ್ತು ಹತ್ತು ವರ್ಷಗಳು ಕಳೆದಿದೆ. ಇದೆಲ್ಲ ಅತಿಮಾನುಷ ವಿಷಯ, ನಿನಗೆ ಗೊತ್ತಿರಲಿ ಎಂದು ಹೇಳಿದ್ದಷ್ಟೆ” ಅಂದರು.

ನಾನು‌ ಮುಖವನ್ನೇ ನೋಡುತ್ತಾ ಕುಳಿತೆ. “ಅವರಿಗೆ ಒಂದು ಗತಿ ಕಾಣಿಸುತ್ತಿದ್ದೇನೆ” ಎಂದು ವೈನ್ ಗ್ಲಾಸ್ ಕೈಗೆತ್ತಿಕೊಂಡು, ಬೀಡಿ ಎಳೆಯುತ್ತಾ ಆಲೋಚನೆಯಲ್ಲಿ ಮಗ್ನರಾದರು.

“ಇವತ್ತು‌ ಬಾವಿ‌ ಕ್ಲೀನ್ ಮಾಡೋದಿಲ್ವ? ಎಂದು ಕೇಳಿದೆ” ಬಾ ತೋರಿಸುತ್ತೇನೆ ಎಂದು ತೋಡಿನ ಪಕ್ಕದ ಹಳೆಯ ಹತ್ತು‌ ಅಡಿಯ ಬಾವಿಯನ್ನು ಎಂದಿನಂತೆ ತೋರಿಸಿ, “ನಿನ್ನೆ ಅಷ್ಟೇ ಕ್ಲೀನ್ ಮಾಡಿದೆ ನೋಡು” ಎಂದರು. “ಅಲ್ಲ ಚಂಗಪ್ಪಣ್ಣ ನಿಮಗೆ ಈ ಬಾವಿಯನ್ನು ಕ್ಲೀನ್ ಮಾಡೋದೆ ಕೆಲಸ ಆಯ್ತಲ್ಲ. ಇದು ತೊರೆ ಪಕ್ಕವೇ ಇದೆ, ನೀರನ್ನ ಯಾಕೆ‌ ಕಟ್ಟಿ ಇಡ್ತಿರಾ. ಹರಿಯಲು ಬಿಡಿ, ಬಾವಿಗಿಳಿದು ವಾರಕ್ಕೆ ಮೂರು ಬಾರಿ ಕ್ಲೀನ್ ಮಾಡುವ ನಿಮ್ಮ ಕೆಲಸ ತಪ್ಪುತ್ತೆ” ಅಂದೆ.

“ನೋಡು ಇಲ್ಲಿ ಎಲ್ಲವೂ ಪೂರ್ವ ನಿರ್ಧರಿತ. ಆತ ಕೊಡುವ ಕೆಲಸ ಮಾಡಲೇಬೇಕು” ಎಂದು ಆಕಾಶ ನೋಡಿದರು.

“ನೀವು ಭೂಮಿಯಲ್ಲೂ, ನೀರಿನಲ್ಲೂ ವಾಸಿಸುವ ಉಭಯವಾಸಿ ಆಗೋದ್ರಲ್ಲ ಚಂಗಪ್ಪಣ್ಣ”ಎಂದು ನಕ್ಕೆ. ಅವರು‌ ಪ್ರತಿಕ್ರಿಯೆ ನೀಡದೆ. ಆಕಾಶವನ್ನೇ ನೋಡುತ್ತಿದ್ದರು.

ನಡು ಮಧ್ಯಾಹ್ನ ಎಲ್ಲಿಂದಲೋ ಬಂದು ಆವರಸಿದ್ದ ದಿಢೀರ್ ಮೋಡ ಅಲ್ಲಿ ಅಷ್ಟೂ ಹೊತ್ತು ಅಸ್ತಿತ್ವ ಸಾಧಿಸಿದ್ದ ಸುಡು ಬಿಸಿಲನ್ನು ಮರೆ ಮಾಚಿತ್ತು.

ರಂಜಿತ್ ಕವಲಪಾರ

error: Content is protected !!