fbpx

ಉದಯವಾಣಿ ಓದುಗರಿಗೆ ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಚಿರಪರಿಚಿತ.

ಹೇಮಂತ್ ಸಂಪಾಜೆ

ಕರಾವಳಿ ಭಾಗದಲ್ಲಿ ಜನಮೆಚ್ಚುಗೆಯ ವರದಿಗಾರರಾಗಿ, ಮುಖ್ಯ ವರದಿಗಾರರಾಗಿ, ಮಂಗಳೂರು ಬ್ಯುರೊ ಮುಖ್ಯಸ್ಥರಾಗಿ ಹಾಗೂ ಸಹಾಯಕ ಸಂಪಾದಕರಾಗಿ ಒಟ್ಟು 36 ವರ್ಷ ನಮ್ಮ ಉದಯವಾಣಿ ಪತ್ರಿಕೆಗಾಗಿ ದುಡಿದಿದ್ದಾರೆ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 200 ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನರಸಿಕೊಂಡು ಬಂದಿವೆ.

ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿರುವ ನನಗೆ ಕೇವಲ ಒಂದು ಸಲ ಅವರನ್ನು ನೇರವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು, ಅದೂ.. ಆಸ್ಪತ್ರೆಯಲ್ಲಿ!, ಹೌದು.. 2017ರಲ್ಲಿ ನನ್ನ ಮೂರು ತಿಂಗಳ ಮಗುವಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆ. ಬಹಳ ಆತಂಕಕ್ಕೆ‌ ಒಳಗಾಗಿದ್ದ ನನಗೆ ಮನೋಹರ್ ಪ್ರಸಾದ್ ಸರ್ ಅಂದು ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದ್ದರು, ಸ್ವತಃ ತಾವೇ ಆಸ್ಪತ್ರೆಗೆ ಬಂದು ‘ಏನೂ ಹೆದರಬೇಡಿ, ಕಂದನಿಗೆ ದೇವರ ಆಶೀರ್ವಾದವಿದೆ’ ಎಂದಿದ್ದರು, ಮಾತ್ರವಲ್ಲ ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯಸ್ಥರ ಜತೆ ಮಾತನಾಡಿ ‘ನಮ್ಮ ಸಿಬ್ಬಂದಿ ಕುಟುಂಬಕ್ಕೆ ಅಗತ್ಯ ಸಹಾಯ ನೀಡಬೇಕೆಂದು’ ಮನವಿ ಮಾಡಿದ್ದರು. ದಿಕ್ಕು ತೋಚದೆ ನಿಂತಿದ್ದಾಗ ತಕ್ಷಣ ಸ್ಪಂದಿಸಿದ ಅವರಲೊಬ್ಬ ದೇವರನ್ನು ಕಂಡಿದ್ದೇನೆ.

ಸದ್ಯ ಅವರು ಕಚೇರಿ ಕರ್ತವ್ಯಗಳಿಂದ ನಿವೃತ್ತಿಯಾಗಿದ್ದಾರೆ. ಪತ್ರಕರ್ತರಿಗೆ ನಿವೃತ್ತಿ ಎನ್ನುವುದಿಲ್ಲ. ಅಂತಹುದರಲ್ಲಿ ಕವಿ, ಭಾಷಣಕಾರ, ನಿರೂಪಕ, ಸಂದರ್ಶಕ…ಹೀಗೆ ಅವರೊಬ್ಬರು ಬಹುಮುಖ ಪ್ರತಿಭೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಮಾಜದ ಹಲವಾರು ಕೆಲಸ ಕಾರ್ಯಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಾರೆ ಎನ್ನುವುದು ನಮ್ಮೆಲ್ಲರ ನಿರೀಕ್ಷೆ, ಅವರ ಮುಂದಿನ ಜೀವನ ಹೆಚ್ಚು ಲವಲವಿಕೆ, ಚಟುವಟಿಕೆಯಿಂದ ಕೂಡಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಹೇಮಂತ್ ಸಂಪಾಜೆ

error: Content is protected !!