fbpx

ಈಚುಮಾಡು ಪೈಸಾರಿ ಜಾಗ ವಸತಿ ರಹಿತರಿಗೆ ವಿತರಿಸಲು ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗಕ್ಕೆ ಮನವಿ ಸಲ್ಲಿಕೆ


ಪೊನ್ನಂಪೇಟೆ ತಾಲ್ಲೂಕು ಶ್ರೀಮಂಗಲ ಹೋಬಳಿ ಕೆ. ಬಾಡಗ ಗ್ರಾಮದ ಸರ್ವೆ ನಂ. 29/1ರಲ್ಲಿರುವ 18 ಏಕ್ರೆ 48 ಸೆಂಟ್ಸ್ ಈಚುಮಾಡು ಪೈಸಾರಿ ಪರಂಬು ಜಾಗದ ಅತಿಕ್ರಮಣವನ್ನು ತೆರವುಗೊಳಿಸಿ ಕೆ. ಬಾಡಗ ಗ್ರಾಮದ ವಸತಿ ರಹಿತ ಆದಿವಾಸಿಗಳ ಮತ್ತು ನಿವಾಸಿಗಳ ಕುಟುಂಬಗಳಿಗೆ ಭೂ ಮಂಜೂರು ಮಾಡಿ ಸೂರು ಒದಗಿಸಿಕೊಡುವಂತೆ ಕೊಡಗು ಜಿಲ್ಲಾ ಭೂಮಿ ವಸತಿ ಹಕ್ಕು ವಂಚಿತರ ಆದಿವಾಸಿಗಳ ಹೋರಾಟ ಸಮಿತಿ, ಕೆ. ಬಾಡಗ ಇವರ ವತಿಯಿಂದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನಸೂಚಿತ ಬುಡಕಟ್ಟುಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.

ಈಚುಮಾಡು ಪೈಸಾರಿಯಲ್ಲಿರುವ 18 ಏಕರೆ 48 ಸೆಂಟ್ಸ್ ಜಾಗವು ಉಳ್ಳವರ ಹಾಗೂ ಭೂಗಳ್ಳರ ಪಾಲಾಗಿದೆ. ಪೈಸಾರಿ ಜಾಗದ ಅಗತ್ಯ ಲಭ್ಯತೆ ಕುರಿತಾಗಿ ವಿವರಗಳೊಂದಿಗೆ ದಾಖಲಾತಿಗಳನ್ನು ಹಾಜರುಪಡಿಸುವುದರೊಂದಿಗೆ ಪೈಸಾರಿಯ ಅತಿಕ್ರಮಣವನ್ನು ತೆರವುಗೊಳಿಸಿ ಕೆ. ಬಾಡಗ ಗ್ರಾಮದ ವ್ಯಾಪ್ತಿಯ ವಸತಿ ರಹಿತ ಆದಿವಾಸಿ ಕುಟುಂಬಗಳಿಗೆ ಭೂ ಮಂಜೂರು ಮಾಡಿ ಸೂರು ಒದಗಿಸಿಕೊಡುವಂತೆ ಹಲವು ಸಲ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಆದಿವಾಸಿಗಳ ಈ ಬೇಡಿಕೆಗೆ ಯಾವುದೇ ರೀತಿಯ ಸ್ಪಂದನೆ ಮತ್ತು ನ್ಯಾಯ ದೊರೆತಿಲ್ಲ ಹಾಗೂ ವಸತಿ ರಹಿತ ಆದಿವಾಸಿಗಳ ಸಮಸ್ಯೆಗಳಿಗೆ ಕಾಳಜಿ ತೋರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಉಳ್ಳವರ ಹಾಗೂ ಭೂಗಳ್ಳರ ಪರವಾಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಸರಕಾರದ ಭೂಮಿಯನ್ನು ಬಿಡಿಸಿ ಸ್ಥಳೀಯ ಗ್ರಾಮದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು.

ಈಚುಮಾಡು ಪೈಸಾರಿ ವ್ಯಾಪ್ತಿಯಲ್ಲಿ ಉಳ್ಳವರ ಪರವಾಗಿರುವ ಅಧಿಕಾರಿಗಳ ವಿರುದ್ಧ ಸಹಾಯಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಜಮೀನನನ್ನು ವಶಪಡಿಸಿಕೊಳ್ಳಲು ಕೆ. ಬಾಡಗ ಗ್ರಾಮ ಪಂಚಾಯಿತಿಗೆ ಆದೇಶಿಸಬೇಕು ಹಾಗೂ ವಸತಿ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದ್ದು, ತಮ್ಮ ಈ ಬೇಡಿಕೆ ಈಡೇರದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸಮಿತಿಯ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಅಪ್ಪುರವರು ತಿಳಿಸಿದ್ದಾರೆ.

error: Content is protected !!