ಈಚಿಮಾಡು ಪೈಸಾರಿ ಒತ್ತುವರಿ ತೆರವಿಗೆ ಆಗ್ರಹ: ಫೈಸಾರಿ ಸಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಆದಿವಾಸಿಗಳ ಆಗ್ರಹ

ಕೊಡಗು: ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿ ಕೆ. ಬಾಡಗ ಗ್ರಾಮದ ಸರ್ವೆ ನಂ. 29/1 ರ ಈಚಿಮಾಡು ಪೈಸಾರಿಯಲ್ಲಿ ಅತಿಕ್ರಮಣವಾಗಿರುವ 18 ಏಕ್ರೆ ಜಾಗವನ್ನು ತೆರವುಗೊಳಿಸಿ ಆದಿವಾಸಿಗಳಿಗೆ ಸೂರು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ವೀರಾಜಪೇಟೆ ತಾಲ್ಲೂಕು ಆದಿವಾಸಿಗಳ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯುತ್ತಿರುವ ಕುರಿತು ವರದಿಯಾಗಿದೆ. ಧರಣಿ ನಿರತರ ಪೈಕಿ ಕೆಲವರು ಪೈಸಾರಿಯ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಹಾಗೂ ಕೆಲವರು ಪಾಳುಬಿದ್ದಿರುವ ಮನೆಯೊಳಗೆ ಸೇರಿಕೊಂಡು ಸೂರು ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.

ಈಚುಮಾಡು ಪೈಸಾರಿಯಲ್ಲಿ 18 ಏಕರೆ ಪೈಸಾರಿ ಜಾಗವಿದ್ದು ಕಳೆದ 10-20 ವರ್ಷಗಳ ಹಿಂದೆ ಪಂಚಾಯತಿಯಿಂದ ಐದಾರು ಮನೆಗಳನ್ನು ನಿರ್ಮಿಸಿ ಬಡ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿತ್ತು. ಹೀಗಾಗಿ ಆದಿವಾಸಿಗಳ ಹೆಸರಿನಲ್ಲಿಯೇ ರಸ್ತೆ, ವಿದ್ಯುತ್, ನೀರು ಹಾಗೂ ಮತ್ತಿತರ ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಆದರೆ ಇದನ್ನು ಸಹಿಸದ ಸುತ್ತಮುತ್ತಲಿನ ಸ್ಥಳೀಯ ಪ್ರಭಾವಿಗಳು ಈ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ 18 ಏಕರೆ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇವರಿಂದ ಸೂರು ಕಳೆದುಕೊಂಡವರು ಹಾಗೂ ಇನ್ನುಳಿದ ವಸತಿಹೀನರು ಒಂದೆಡೆ ಸುತ್ತಮುತ್ತಲಿನ ತೋಟಗಳಲ್ಲಿ ಕಾರ್ಮಿಕರಾಗಿ ಲೈನ್ ಮನೆಯಲ್ಲಿ ಮತ್ತು ಇನ್ನೂ ಕೆಲವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಕೆಲವರು ಬೀದಿಪಾಲಾಗಿದ್ದರೆ ಇನ್ನೊಂದೆಡೆ ಪೈಸಾರಿಯಲ್ಲಿನ ಮನೆಗಳು ಕಾಡು ಪಾಲಾಗಿವೆ. ಈ ಪೈಕಿ ಮನೆಯೊಂದು ಧರಶಾಹಿ ಆಗಿದೆ. ವಸತಿ ಕಲ್ಪಿಸಿ ಕೊಡಿ ಎಂಬ ಬೇಡಿಕೆಗೆ ಇನ್ನೂ ಕೂಡ ಮನ್ನಣೆ ದೊರೆಯದ ಕಾರಣ ಇಂದು ಆದಿವಾಸಿಗಳು, ತಮ್ಮ ಸಂಘಟನೆಯಾದ ವೀರಾಜಪೇಟೆ ತಾಲ್ಲೂಕು, ಕೆ. ಬಾಡಗ ಆದಿವಾಸಿಗಳ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಈಚುಮಾಡು ಪೈಸಾರಿಯಲ್ಲಿ ಪ್ರತಿಭಟನೆಗೆ ಇಳಿದರು. ಕೆಲವರು ಪೈಸಾರಿಯ ಜಾಗದಲ್ಲಿ ಮನೆಗಾಗಿ ಸ್ಥಳ ಗುರುತಿಸಿಕೊಂಡು ಟೆಂಟ್ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ಖಾಲಿಯರುವ ಮನೆಯೊಳಗೆ ಸೇರಿಕೊಳ್ಳುವ ಮೂಲಕ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇವರ ಪೈಕಿ 23 ಆದಿವಾಸಿ ಕುಟುಂಬಗಳ ಅಂದಾಜು 100 ಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಇವರಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿ ವಯಸ್ಸಿನವರೂ ಇದ್ದಾರೆ. ಇನ್ನಾದರೂ ಶಾಶ್ವತವಾಗಿ ನೆಲೆಯೂರಲು ವಾಸಯೋಗ್ಯ ಮನೆ ದೊರೆಯಲಿ ಎಂಬುದು ಇವರೆಲ್ಲರ ಆಶಯವಾಗಿದೆ.

ಸೂರು ದೊರೆಯುವವರೆಗೆ ಮುಂದುವರೆಯಲಿದೆ ಹೋರಾಟ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿರುವ ಈ ಸಮಿತಿಯ ಮುಖಂಡ ಅಪ್ಪುರವರು ತಮ್ಮ ಬೇಡಿಕೆ ಈಡೇರುವ ತನಕ ನಿರಂತರವಾಗಿ ಹೋರಾಟವನ್ನು ಮುಂದುವರೆಸುವ ಮುನ್ಸೂಚನೆಯನ್ನಿತ್ತಿದ್ದಾರೆ. ನಮಗೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ 100 ಏಕರೆ ಜಾಗ ಬೇಡ; ಅವರ ಆಸ್ತಿಯಲ್ಲಿ ಪಾಲೂ ಬೇಡ. ನಮಗೆ ವಾಸಿಸಲು ಸಣ್ಣ ಸೂರನ್ನು ಒದಗಿಸಿಕೊಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

error: Content is protected !!