fbpx

“ಇಸ್ರೇಲ್ ಕೃಷಿ ಯಶಸ್ಸಿನ ಗುಟ್ಟು”

ಅಂಕಣ: ಅಭಿವ್ಯಕ್ತಿ


✍️ ರಾಜೇಶ್ ಕಂಬೇಗೌಡ, ತುಮಕೂರು.

ಅಲ್ಲಿ ಎತ್ತ ನೋಡಿದರೂ ಬಯಲು ಪ್ರದೇಶ, ಒಣ ಹವೆ, ಅತೀ ಕಡಿಮೆ ಮಳೆ ಬೀಳುವ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿರುವ ಪ್ರದೇಶ, ಒಂದೆಡೆ ಮರುಭೂಮಿ ಮತ್ತೊಂದೆಡೆ ದಟ್ಟ ಹಸಿರು, ಬಣ್ಣ ಬಣ್ಣದ ಹೂಗಳು, ಮಾವು, ಖರ್ಜೂರ, ದ್ರಾಕ್ಷಿಯ ಸುಂದರ ತೋಟಗಳು.

ಅರೇ ಯಾವ ಜಿಲ್ಲೆಯ ಬಗ್ಗೆ ಅಂತ ಯೋಚಿಸುತ್ತಿದ್ದೀರಾ ಖಂಡಿತಾ ನಿಮ್ಮ ಊಹೆ ಸುಳ್ಳು. ಇದು ನಮ್ಮಲ್ಲಿಯ ಮೂರು ಜಿಲ್ಲೆಗಳನ್ನು ಸೇರಿಸಿದರೆ ಸಿಗುವ ವಿಸ್ತೀರ್ಣದಷ್ಟಿರುವ ಪುಟ್ಟ ದೇಶ ಇಸ್ರೇಲ್. ಇಡೀ ಜಗತ್ತಿಗೇ ಕೃಷಿ ಪಾಠವನ್ನು ಕಲಿಸುತ್ತಿರುವ ದೇಶವದು. ನಮ್ಮ ದೇಶಕ್ಕಿಂತ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಪಡೆದ ದೇಶವದು(1948). ಜನಸಂಖ್ಯೆ ನಮ್ಮ ಬೆಂಗಳೂರಿಗಿಂತ ಕಡಿಮೆ ಬರೀ 84 ಲಕ್ಷ.

ತನ್ನಲ್ಲಿನ ವಿಜ್ಞಾನ, ತಂತ್ರಜ್ಞಾನ, ಕರ್ತವ್ಯ ನಿಷ್ಠೆ, ಕೃಷಿ ಉದ್ಯಮ, ಪ್ರವಾಸೋದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ದೇಶ ಇಸ್ರೇಲ್.
ವಿಶ್ವದಲ್ಲಿಯೇ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯದೊಂದಿಗೆ ಪ್ರಪಂಚವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಇಸ್ರೇಲ್ ನಲ್ಲಿ ಕೃಷಿ ಮಾಡಲು ಯೋಗ್ಯವಲ್ಲದ ಭೂಮಿ ಹೆಚ್ಚು ಕೃಷಿ ಯೋಗ್ಯ ಭೂಮಿಯೇ ಕಡಿಮೆ ಆದರೂ ಇಸ್ರೇಲ್ ನಲ್ಲಿ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ತಾವೇ ಬೆಳೆದುಕೊಳ್ಳುತ್ತಾರೆ ಹಾಗೂ ತಾಜಾ ಉತ್ಪನ್ನಗಳನ್ನ ಹಲವಾರು ದೇಶಗಳಿಗೆ ರಫ್ತು ಮಾಡುವುದರಲ್ಲಿ ಎತ್ತಿದ ಕೈ ಮತ್ತು ಕೃಷಿ ತಂತ್ರಜ್ಞಾನದಲ್ಲಿ ವಿಶ್ವದ ನಾಯಕ ಸ್ಥಾನ ಪಡೆದಿದೆ.

ಕೃಷಿ ಗೆ ಮುಖ್ಯವಾಗಿ ಬೇಕಾಗಿರುವುದು ನೀರು ಇತರೆ ದೇಶಗಳಿಗೆ ಹೋಲಿಸಿದರೆ ಇಸ್ರೇಲ್ ನಲ್ಲಿ ನೀರಿನ ಕೊರತೆ ಪ್ರಮುಖ ಸಮಸ್ಯೆ.
ಸೆಪ್ಟೆಂಬರ್ ಮತ್ತು ಏಪ್ರಿಲ್ ನಡುವೆ ಮಳೆ ಬೀಳುತ್ತದೆ. ಹಾಗಾಗಿ ನವೀಕರಿಸಬಹುದಾದ ನೀರಿನ ಸಂಪನ್ಮೂಲಗಳ ಸಹಾಯದಿಂದ 75% ರಷ್ಟು ನೀರನ್ನು ಕೃಷಿಯಲ್ಲಿ ಬಳಸಲಾಗುತ್ತಿದೆ.
ಅಲ್ಲಿನ ಶಾಲೆಗಳಲ್ಲಿ ನೀರನ್ನು ಉಳಿಸುವ ಪಾಠಗಳ ಜೊತೆಗೆ ಸೇರಿಸಿ ನೀರಿನ ಉಪಯೋಗಕಾರಿ ಕಾರ್ಯತಂತ್ರ, ಮಿತವಾಗಿ ಉಪಯೋಗಿಸುವುದು, ನೀರನ್ನು ಪೋಲಾಗದಂತೆ ತಪ್ಪಿಸುವುದು ಪ್ರತಿಯೊಬ್ಬನ ಜವಾಬ್ದಾರಿ ಎಂಬ ಸತ್ಯವನ್ನು ಪ್ರತಿಯೊಂದು ಮಗುವಿನಲ್ಲೂ ಬಾಲ್ಯದಿಂದಲೇ ಬೆಳೆಸುತ್ತದೆ.

ಅಲ್ಲಿ ತ್ಯಾಜ್ಯ ನೀರನ್ನು ಶುದ್ಧ ನೀರಾಗಿ ಪರಿವರ್ತನೆಗೊಳಿಸಲಾಗುತ್ತದೆ. ಪ್ರಪಂಚದ ಬೇರೆ ಯಾವ ದೇಶ ಇಸ್ರೇಲಿನಂತೆ ತ್ಯಾಜ್ಯ ನೀರಿನ ಸದ್ಭಳಕೆಯಲ್ಲಿ ಮುಂಚೂಣಿಯಲ್ಲಿಲ್ಲ. ಇಸ್ರೇಲ್‌ನಲ್ಲಿ ಶೇ. 85 ರಷ್ಟು ತ್ಯಾಜ್ಯ ನೀರನ್ನು ಬಳಸಲಾಗುತ್ತಿದೆ.
ತ್ಯಾಜ್ಯ, ನೀರಿನ ಸೌಕರ್ಯವೇ ಇಸ್ರೇಲಿನಲ್ಲಿ ಕೃಷಿಗೆ ಆಧಾರ. ಮೋಡ ಬಿತ್ತನೆ ಮತ್ತಿತರೆ ಆಧುನಿಕ ಪದ್ಧತಿಗಳಿಂದ ಬಲವಂತವಾಗಿ ಮಳೆ ತರಿಸುವುದು ಬಲು ದುಬಾರಿ ಎಂಬುದನ್ನು ಅರಿತು ತಾಜ್ಯ ನೀರನ್ನು (ಬಟ್ಟೆ, ಪಾತ್ರೆ ತೊಳೆದ ನೀರು, ಶೌಚಾಲಯದ ನೀರು ಇನ್ನಿತರೆ ದಿನಬಳಕೆಯ ನೀರು ಹಾಗೂ ಚರಂಡಿಯಲ್ಲಿ ಹರಿಯುವ ಮಳೆ ನೀರು) ಸಮರ್ಪಕವಾಗಿ ಬಳಸುವ ಯೋಜನೆಯನ್ನು ಜಾರಿಗೆ ತಂದಿರುವುದು.

ಮಳೆ ಕಡಿಮೆಯಾಗುವ ಈ ದೇಶದಲ್ಲಿ ಉತ್ತಮ ತಂತ್ರಜ್ಞಾನದಿಂದ ಕೃಷಿಯಲ್ಲಿ ಸ್ವಾವಲಂಬನೆ ಹೊಂದಿ ಬೇರೆ ದೇಶಗಳಿಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ರೀತಿ ನೋಡಿದರೆ ಯಾರಿಗಾದರೂ ಆಶ್ಚರ್ಯವೆನಿಸುತ್ತದೆ.

ಇಸ್ರೇಲಿನ ಎಲ್ಲ ಜನ ಕೃಷಿ ಬದುಕನ್ನು ಅವಲಂಂಬಿಸಿಲ್ಲ. ಕೈಗಾರಿಕೆಯೂ ಅಲ್ಲಿನ ಆರ್ಥಿಕ ಚಟುವಟಿಕೆಗಳಲ್ಲಿ ಒಂದು. ಅಮೆರಿಕದಂತೆಯೇ ಇಸ್ರೇಲ್‌ನಲ್ಲೂ ಕೃಷಿಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಅತ್ಯಲ್ಪ. ಆದರೂ, ಇಸ್ರೇಲ್‌ ಕೃಷಿಯನ್ನು ಗೆದ್ದಿದೆ. ಏಕೆಂದರೆ, ಅಲ್ಲಿನ ಕೃಷಿ ಮುಖ್ಯವಾಗಿ ಸಾಮುದಾಯಿಕ ಕಲ್ಪನೆಯದು. ಅಂದರೆ, ಸಹಕಾರಿ ತತ್ತ್ವದಡಿ ಅಲ್ಲಿನ ಜನ ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಈ ಸಾಮುದಾಯಿಕ ಕೃಷಿಯಲ್ಲಿ ಕೃಷಿಯ ಖರ್ಚುವೆಚ್ಚಗಳು ಒಬ್ಬ ರೈತನ ಮೇಲೆ ಬೀಳುವುದಿಲ್ಲ. ಅಷ್ಟರಮಟ್ಟಿಗೆ ಅಲ್ಲಿನ ರೈತ ಈ ಹೊರೆಯಿಂದ ಮುಕ್ತ. ಇದೇ ಕಾರಣಕ್ಕಾಗಿಯೇ ಯಾವುದೇ ಯಂತ್ರ, ತಂತ್ರಜ್ಞಾನದ ಅಳವಡಿಕೆ ಅಲ್ಲಿ ಸುಲಭ. ಇತ್ತೀಚೆಗೆ ನಾವು ನೋಡುತ್ತಿರುವ ಹಸಿರುಮನೆ ಕೃಷಿ (ಗ್ರೀನ್ ಹೌಸ್), ಹನಿ ನೀರಾವರಿ ಪದ್ಧತಿಗಳೆಲ್ಲ ಇಸ್ರೇಲಿನ ಕೊಡುಗೆಗಳೇ ಆಗಿವೆ.

ಹಸಿರು ಮನೆಯಲ್ಲಿ (ಗ್ರೀನ್ ಹೌಸ್) ಬೆಳೆಯಲಾಗುವ ತರಕಾರಿ, ಹೂಗಳು ಇಸ್ರೇಲಿನ ಮುಖ್ಯ ಬೆಳೆಗಳು. ಇಷ್ಟಲ್ಲದೆ ವಿವಿಧ ಹಣ್ಣಿನ ಬೆಳೆಗಳು, ತರಕಾರಿ ಬೆಳೆಗಳು, ಜೇನು ಸಾಕಾಣಿಕೆ, ಹೈನುಗಾರಿಕೆ, ಕೃಷಿ, ಮೀನುಗಾರಿಕೆ, ಪ್ಲಾಸ್ಟಿಕ್ ಉದ್ಯಮ, ಸಾಮೂಹಿಕ ಕೃಷಿ ಕುಟುಂಬ ಇನ್ನೂ ಹಲವಾರು ರೀತಿಯ ಉದ್ಯಮಗಳನ್ನು ಮೈಗೂಡಿಸಿಕೊಂಡಿರುವ ಈ ದೇಶ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಉದಾಹರಣೆ.

ಇಸ್ರೇಲಿನ ಕೃಷಿಗೆ ಬೆನ್ನೆಲುಬಾಗಿರುವುದು ಆಧುನಿಕ ತಂತ್ರಜ್ಞಾನ ಎನ್ನುವುದು ಬಹಳ ಮುಖ್ಯವಾದ ವಿಷಯ.
ಸಂತಸದ ವಿಷಯವೆಂದರೆ ಇಸ್ರೇಲ್ ನಮ್ಮ ಮಿತ್ರ ರಾಷ್ಟ್ರ. ಕಳೆದ ಬಾರಿ ಇಸ್ರೇಲ್ ನ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ಸಮುದ್ರದ ಉಪ್ಪು ನೀರನ್ನ ಕುಡಿಯುವ ನೀರಾಗಿ ಶುದ್ಧೀಕರಿಸಿ ಪರಿವರ್ತಿಸುವ ಯಂತ್ರವನ್ನು ಉಡುಗೊರೆಯಾಗಿ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದು.

ರಾಜೇಶ್ ಕಂಬೇಗೌಡ, ಅಂಕಣಕಾರರು

error: Content is protected !!