fbpx

ಇಚ್ಛಾಶಕ್ತಿಯಿಂದ ಮಾತ್ರ ಸ್ವಚ್ಛತಾ ಆಂದೋಲನ ಯಶಸ್ವಿ ಸಾಧ್ಯ:ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕ್ರಮದಲ್ಲಿ ಶಾಸಕ ಬೋಪಯ್ಯ ನುಡಿ

ಕೊಡಗು: ಸಂಪೂರ್ಣ ಗ್ರಾಮ ಸ್ವಚ್ಛತಾ ಆಂದೋಲನ ಜನತೆಯ ಸಾಮೂಹಿಕ ಹೊಣೆಗಾರಿಕೆಯಾಗಬೇಕು. ಜನರ ಇಚ್ಛಾಶಕ್ತಿಯಿಂದ ಮಾತ್ರ ಈ ಸ್ವಚ್ಛತಾ ಆಂದೋಲನದ ಯಶಸ್ವಿ ಸಾಧ್ಯ ಎಂದು ಶಾಸಕರಾದ ಕೆ.ಜಿ. ಬೋಪಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152ನೇ ಹಾಗೂ ಸ್ವತಂತ್ರ ಭಾರತದ 2ನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 117ನೇ ಜಯಂತಿಯ ಅಂಗವಾಗಿ ವಿರಾಜಪೇಟೆಯ ಕಾವೇರಿ ಕಾಲೇಜು ಬಳಿ ಆಯೋಜಿಸಲಾಗಿದ್ದ ಸ್ವಚ್ಛತಾ ಆಂದೋಲನ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸಂಪೂರ್ಣ ಸ್ವಚ್ಛತಾ ಆಂದೋಲನದ ಪರಿಕಲ್ಪನೆ ಗ್ರಾಮಗಳಿಂದಲೇ ಜಾರಿಯಾಗಬೇಕು. ಹೀಗಾದರೆ ಮಾತ್ರ ಇದರ ಮೂಲ ಉದ್ದೇಶ ಈಡೇರಿದಂತಾಗುತ್ತದೆ ಎಂದು ಅವರು ಹೇಳಿದರು.

ಸ್ವಚ್ಛತೆ ಕುರಿತು ನಿರಂತರವಾದ ಜನಜಾಗೃತಿಯೂ ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಬಹುಪ್ರಮುಖವಾದದ್ದು. ಜೊತೆಗೆ ಸ್ವಚ್ಛತಾ ಆಂದೋಲನದ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ನಿರಂತರ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟ ಕೆ.ಜಿ. ಬೋಪಯ್ಯ ಅವರು, ಸಂಪೂರ್ಣ ಸ್ವಚ್ಛತಾ ಆಂದೋಲನ ಗ್ರಾಮ ಮಟ್ಟದಲ್ಲಿ ಜಾರಿಗೊಳಿಸಲು ಬಿಜೆಪಿ ಪಕ್ಷ ಕಟಿಬದ್ಧವಾಗಿದೆ. ಈ ಕಾರಣದಿಂದ ಪಕ್ಷದ ಶಕ್ತಿ ಕೇಂದ್ರಗಳ ವತಿಯಿಂದ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಬೋಪಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಳಪಂಡ ಮೊಣ್ಣಪ್ಪ ಮತ್ತು ಆಶಾ ಕಾರ್ಯಕರ್ತೆ ಹೆಚ್.ಶಾಂತಿ ಅವರನ್ನು ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶಾಸಕ ಕೆ.ಜಿ. ಬೋಪಯ್ಯ ಅವರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷರಾದ ನೆಲ್ಲಿರ ಚಲನ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿ.ಕೆ. ಬೋಪಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸೇರಿದಂತೆ ಬಿಟ್ಟಂಗಾಲ ಗ್ರಾಮ ಪಂಚಾಯತಿ ಸದಸ್ಯರು, ಶಕ್ತಿ ಕೇಂದ್ರದ ಮುಖಂಡರು, ವಿವಿಧ ಘಟಕದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

ನಂತರ, ಕಾವೇರಿ ಕಾಲೇಜು ಆವರಣದಿಂದ ಬಿಟ್ಟಂಗಾಲ ಜಂಕ್ಷನ್ ವರೆಗೆ ರಸ್ತೆಬದಿಯ ತ್ಯಾಜ್ಯಗಳನ್ನು ಸಂಗ್ರಹಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಆರಂಭದಿಂದ ಕೊನೆಯವರೆಗೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

error: Content is protected !!