ಇಂದು ಸಂಕಷ್ಟ ಚತುರ್ಥಿ; ಈ ದಿನದ ಪೂಜೆ, ವಿಧಿ ವಿಧಾನಗಳ ಬಗ್ಗೆ ಅರಿಯಿರಿ!

ಇಂದು (ಭಾನುವಾರ, ಜೂನ್ 27) ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಕೊಡು ಎಂದು ಗಣಪತಿಯಲ್ಲಿ ಬೇಡಿಕೊಳ್ಳುತ್ತಾ, ವಿಶೇಷ ಪೂಜಾ ವಿಧಿ ವಿಧಾನದ ಮೂಲಕ ಭಕ್ತಿಯಿಂದ ಪಾರ್ಥಿಸುವ ದಿನವಿದು. ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿಯನ್ನು ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ ಎಂದೂ ಕರೆಯಲಾಗುತ್ತದೆ. ಸಂಕಷ್ಟಗಳನ್ನು ತೊರೆದು ಜೀವನದುದ್ದಕ್ಕೂ ಸುಖ ಶಾಂತಿಯಿಂದ ಜೀವನ ಸಾಗಿಸುವ ದೃಷ್ಟಿಯಿಂದ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಮೋದಕ ಮಾಡಿ ನೈವೇದ್ಯ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಇಂದು ಮಧ್ಯಾಹ್ನ 3:54ರಿಂದ ಚತುರ್ಥಿ ತಿಥಿ ಆರಂಭಗೊಳ್ಳುತ್ತದೆ. ಜೂನ್ 28ರಂದು ಅಂದರೆ ನಾಳೆ ಮಧ್ಯಾಹ್ನ 2:16ಕ್ಕೆ ಚತುರ್ಥಿ ತಿಥಿ ಮುಕ್ತಾಯಗೊಳ್ಳುತ್ತದೆ.
ಗಣಪತಿಯನ್ನು ಬುದ್ಧಿವಂತ, ಜ್ಞಾನದ ದೇವರು ಎಂದು ಕರೆಯಲಾಗುತ್ತದೆ. ತೊಂದರೆಗಳನ್ನು ಎದುರಿಸಿ ದುಃಖವನ್ನು ಮೆಟ್ಟಿನಿಂತು ಜೀವನದುದ್ದಕ್ಕೂ ಯಶಸ್ಸನ್ನೇ ಕಾಣುವಂತೆ ಗಣೇಶನಲ್ಲಿ ಬೇಡಿಕೊಳ್ಳುವ ದಿನವಿದು.
ಗಣೇಶನ ಭಕ್ತರು ಬೇಗ ಎದ್ದು ಸ್ನಾನ ಮಾಡಿ. ಶುಭ್ರವಾದ ವಸ್ತ್ರವನ್ನು ಧರಿಸಿ ಗಣೇಶನ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಗಣೇಶನ ಅಚ್ಚುಮೆಚ್ಚಿನ ಸಿಹಿ ಮೋದಕ ತಯಾರಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಲಾಗುತ್ತದೆ. ಹೂವುಗಳಿಂದ ಅಲಂಕಾರಗೊಂಡ ಗಣೇಶನ ಧ್ಯಾನದಲ್ಲಿ ದಿನವಿಡೀ ಕಾಲ ಕಳೆಯುತ್ತಾರೆ.
ಇಂದು ಭಕ್ತರು ಕಟ್ಟುನಿಟ್ಟಾದ ವ್ರತವನ್ನು ಕೈಗೊಳ್ಳುತ್ತಾರೆ. ಭಕ್ತರು ಸೂರ್ಯೋದಯ ಕಾಲದಿಂದ ಉಪವಾಸ ಕೈಗೊಳ್ಳುತ್ತಾರೆ. ಉಪವಾಸದಲ್ಲಿ ಯಾವುದೇ ಭಂಗವಾಗದಂತೆ ನೋಡಿಕೊಳ್ಳುವುದು ಉತ್ತಮ. ದಿನವಿಡೀ ಗಣೇಶನ ಸ್ತುತಿ, ಭಜನೆಯಲ್ಲಿ ಭಕ್ತರು ಧ್ಯಾನಸ್ಥರಾಗುತ್ತಾರೆ.
ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ಕುಟುಂಬ ಸಹಬಾಳ್ವೆಯಿಂದ ಶಾಂತಿಯುತವಾಗಿ ಜೀವನ ನಡೆಸಲು ದೇವರಲ್ಲಿ ಮೊರೆ ಹೋಗುವುದೇ ಈ ದಿನದ ವಿಶೇಷ. ಜೀವನದ ಎಲ್ಲಾ ಅಡೆತಡೆಗಳನ್ನು, ವಿಘ್ನಗಳನ್ನು ದೂರವಾಗಿಸು ಎಂದು ಭಕ್ತಿಯಿಂದ ವಿನಾಯಕನಲ್ಲಿ ಬೇಡಿಕೆ ಇಡುವುದೇ ಈ ದಿನದ ಭಕ್ತರ ಪ್ರಾರ್ಥನೆ.