ಇಂದು ವೀರ ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮದಿನ…

ದೇಶ ಕಂಡ ಅಸಲಿ ಮಹಾತ್ಮ ಕ್ರಾಂತಿ ವೀರ ಇವರೇ!

1883, ಮೇ 28ರಂದು ಮಹಾರಾಷ್ಟ್ರದ ನಾಶಿಕ್ನಲ್ಲಿ ಜನಿಸಿದ ಸಾವರ್ಕರ್, ಈ ದೇಶ ಕಂಡ ಅಪರೂಪದ ಹೋರಾಟಗಾರ. ಸಾವರ್ಕರ್ ತಮ್ಮ ಶರೀರದ ಕಣ ಕಣ, ಜೀವನದ ಕ್ಷಣ ಕ್ಷಣವನ್ನೂ ದೇಶಕ್ಕಾಗಿ ಅರ್ಪಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ಆದರೆ ಇತ್ತೀಚೆಗೆ ಸಾಕಷ್ಟು ವಿವಾದಗಳು ಇವರ ಹೆಸರಿಗೆ ಮೆತ್ತಿಕೊಳ್ಳುತ್ತಿವೆ. ಜೀವಕ್ಕೆ ಹೆದರಿ ಬ್ರಿಟಿಷರ ಪರ ನಿಂತಿದ್ದ ಹೆದರುಪುಕ್ಕಲ ಎಂಬೆಲ್ಲ ಟೀಕೆಗಳು ಇವರ ವಿರುದ್ಧ ಮಾಡಲಾಗುತ್ತಿದೆ.

ಆದರೆ, ಇವರ ಜೀವನವೇ ಒಂದು ಹೋರಾಟದ ಪುಸ್ತಕ. ಹಿಂದುತ್ವದ ಉಗ್ರ ಪ್ರತಿಪಾದಕ. ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ.

ವಾಜಪೇಯಿಯವರು ಹೇಳುವಂತೆ, “ಸಾವರ್ಕರ್ ಎಂದರೆ ತೇಜಸ್ಸು,
ಸಾವರ್ಕರ್ ಎಂದರೆ ತ್ಯಾಗ
ಸಾವರ್ಕರ್ ಎಂದರೆ ಮಾಸದ ತಾರುಣ್ಯ, ಪ್ರಖರ ರಾಷ್ಟ್ರವಾದ.. ಎಂದೂ ರಾಜಿ ಮಾಡಿಕೊಳ್ಳದ ರಾಷ್ಟ್ರವಾದ! ತನುಮನ ಸರ್ವಸ್ವವನ್ನೂ ಸಮರ್ಪಣೆ ಮಾಡಿಕೊಂಡ ಅಸಾಧಾರಣ ರಾಷ್ಟ್ರಪ್ರೇಮ… ಸಾವರ್ಕರರಲ್ಲಿ ಎತ್ತರವೂ ಇತ್ತು, ಆಳವೂ ಇತ್ತು”

ಈ ಮಾತುಗಳೆಲ್ಲ ಉತ್ಪ್ರೇಕ್ಷೆಗಳಲ್ಲ ಸಾವರ್ಕರ್‌ರ ವ್ಯಕ್ತಿತ್ವವು ಹಾಗಿತ್ತು. ಬ್ರಿಟಿಷರು ಅವರಿಗೆ ಒಡ್ಡಿದ ಅಮಾನುಷ ಕಿರುಕುಳದ ವೃತ್ತಾಂತಗಳನ್ನೂ, ಅದನ್ನೆಲ್ಲ ಅವರು ಶಾಂತವಾಗಿ ಸಹಿಸಿ, ದೃಢವಾಗಿ ನಿಂತ ವೃತ್ತಾಂತಗಳನ್ನು ತಿಳಿದರೆ ನಿಜಕ್ಕೂ ಮೈನವಿರೇಳುತ್ತದೆ.

ಬಾಲ ಗಂಗಾಧರ್ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯ್ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಿತರಾದ ವಿ.ಡಿ. ಸಾವರ್ಕರ್ ಅವರು ಬ್ರಿಟಿಷರಿಗೆ ತಲೆನೋವು ಎನಿಸುವ ಮಟ್ಟಕ್ಕೆ ಹೋರಾಟಗಳನ್ನ ಮಾಡಿದರು. 1857ರ ಸಿಪಾಯಿ ದಂಗೆ ಬಗ್ಗೆ ಇವರು ಬರೆದ “ದ ಹಿಸ್ಟರಿ ಆಫ್ ದ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್” ಪುಸ್ತಕ ಅನೇಕ ಹೋರಾಟಗಾರರಿಗೆ ಸ್ಫೂರ್ತಿಯಾಯಿತು. ಬ್ರಿಟಿಷರು ಈ ಪುಸ್ತಕವನ್ನು ನಿಷೇಧಿಸಿದರೂ ಬೇರೆ ಬೇರೆ ದೇಶಗಳಲ್ಲಿ ಮುದ್ರಣ ಕಂಡು ಭಾರತಕ್ಕೆ ಈ ಪುಸ್ತಕಗಳನ್ನ ಸಾಗಿಸಲಾಗುತ್ತಿತ್ತು.

ಸಾವರ್ಕರ್ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದ್ದ ಸೆಲ್ಯೂಲಾರ್ ಜೈಲು

1921ರಲ್ಲಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿ 50 ವರ್ಷ ಜೈಲುಶಿಕ್ಷೆ ವಿಧಿಸಿತು. ಅಂಡಮಾನ್ ಜೈಲಿನಲ್ಲಿರಿಸಿತು. ಅತ್ಯಂತ ಉಗ್ರತಮ ಶಿಕ್ಷೆ ಇವರಿಗೆ ಕಾದಿತ್ತು. 10 ವರ್ಷ ಯಮಯಾತನೆಯ ಶಿಕ್ಷೆ ಅನುಭವಿಸಿದ ಇವರನ್ನು 1921ರಲ್ಲಿ ಕೆಲ ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು.

ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂದುತ್ವದ ಉಗ್ರ ಪ್ರತಿಪಾದಕರಷ್ಟೇ ಅಲ್ಲ, ಆ ಶಬ್ದವನ್ನು ಜನಪ್ರಿಯಗೊಳಿಸಿದ್ದೇ ಅವರು. ಅವರು ದ್ವಿರಾಷ್ಟ್ರ ಕಲ್ಪನೆಗೆ ಬೆಂಬಲ ನೀಡಿದ್ದರು. ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರ, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕೆಂಬುದು ಇವರ ಅಭಿಪ್ರಾಯವಾಗಿತ್ತು.

ವಿನಾಯಕ ದಾಮೋದರ ಸಾವರ್ಕರರಿಗೆ “ವೀರ” ಎಂಬ ಬಿರುದು ಹನ್ನೆರಡನೆಯ ವಯಸ್ಸಿನಲ್ಲೇ ಸಿಕ್ಕಿತ್ತು. ಒಮ್ಮೆ ಸಾವರ್ಕರ ಹಳ್ಳಿ ಭಾಗೂರಗೆ ಇಸ್ಲಾಮಿ ಮತಾಂಧರ ತಂಡವೊಂದು ದಾಳಿ ಮಾಡಿ, ಎಲ್ಲೆಂದರಲ್ಲಿ ನುಗ್ಗುತ್ತಾ ಕೊಳ್ಳೆ ಹೊಡೆಯುತ್ತ ಬರುತ್ತಿದ್ದ ಈ ಗುಂಪನ್ನು ಬಾಲಕ ವಿನಾಯಕ ದಾಮೋದರ್ ಸಾವರ್ಕರ್ ತನ್ನ ಸಹಪಾಠಿಗಳನ್ನೆಲ್ಲ ಸೇರಿಸಿಕೊಂಡು ತಂಡ ಕಟ್ಟಿ ಎದುರಿಸುತ್ತಾರೆ. ಸಂಖ್ಯೆಯಲ್ಲಿ ಮತ್ತು ದೈಹಿಕ ಬಲದಲ್ಲಿ ಪ್ರಬಲರಾದ ಎದುರಾಳಿಗಳನ್ನೆದುರಿಸಲು ಅಡಗಿ ಮರೆಯಲ್ಲಿ ಕುಳಿತು ದಾಳಿ ಮಾಡುವ ಗೆರಿಲ್ಲಾ ಯುದ್ಧ ತಂತ್ರವನ್ನು ಬಾಲಕ ಸಾವರ್ಕರ್ ಆಗಲೇ ಯಶಸ್ವಿಯಾಗಿ ಮಾಡಿದ್ದರು. ಹಳ್ಳಿಗೆ ನುಗ್ಗಿದ ಒಬ್ಬೊಬ್ಬ ದಾಳಿಕೋರ ಮತಾಂಧನನ್ನು ಕೂಡ ಬಿಡದೇ ಎಲ್ಲರನ್ನೂ ಓಡಿಸಿದ ಬಾಲಕ ವಿನಾಯಕ ದಾಮೋದರ ಸಾವರ್ಕರನ ಧೈರ್ಯ ಸಾಹಸ ಕೊಂಡಾಡಿದ ಹಳ್ಳಿಯ ಜನ “ವೀರ ಸಾವರ್ಕರ” ಎಂದು ಬಿರುದು ಕೊಟ್ಟರು. ಮುಂದೆ ಅದೇ ಶಾಶ್ವತವಾಯಿತು.

‘ಜಾತಸ್ಯ ಮರಣಂ ಧೃವಂ’ ಅಂದರೆ ಹುಟ್ಟಿದವರೆಲ್ಲರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎಂಬ ನಿಯಮದಂತೆ  1966 ಫೆಬ್ರುವರಿ 26 ರಂದು ಸಾವರ್ಕರು ವಿಧಿವಶರಾದರು ಸಾವಿನ ಮನೆಯಲ್ಲಿ ಶತೃತ್ವ ತೋರಬಾರದು ಎಂಬ ನಿಯಮವಿದ್ದರೂ, ಅವರು  ನಿಧನರಾದಾಗ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೂಡ ಸಿಗದೇ ಹೋದಾಗ, ಅವರ ಅಪ್ಪಟ ಅಭಿಮಾನಿ, ನಟ ವಿ. ಶಾಂತಾರಾಮ್ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು.  ಮಹಾರಾಷ್ಟ್ರದ  ಅಂದಿನ  ಸರ್ಕಾರದ ಯಾವೊಬ್ಬ ಸಚಿವರೂ ಕೂಡ ಸಾವರ್ಕರ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿಲ್ಲ. ಲೋಕಸಭೆಯಲ್ಲಿ  ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ, ಸಾವರ್ಕರ್ ಅವರು  ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ  ಕುಂಟು ನೆಪವೊಡ್ಡಿ ಅಂದಿನ ಸಭಾಧ್ಯಕ್ಷರು ತಿರಸ್ಕರಿಸಿದ್ದು ನಿಜಕ್ಕೂ ಒಬ್ಬ ದೇಶಭಕ್ತನಿಗೆ ತೋರಿದ ಅಗೌರವವೇ ಸರಿ. ಒಂದೇ ಕುಟುಂಬದ   ಸದಸ್ಯರು ಅದೂ ಅವರು  ಬದುಕಿದ್ದಾಗಲೇ ಆತ್ಮಪ್ರಶಂಸೆಯಂತೆ ಭಾರತ ರತ್ನ  ಪ್ರಶಸ್ತಿಯನ್ನು ಅವರಿಗೆ ಅವರೇ ಪಡೆದುಕೊಂಡು ಸಂಭ್ರಮಿಸಿದರೇ ವಿನಃ  ವೀರಸಾವರ್ಕರ್ ಮತ್ತು ಅಂಬೇಡ್ಕರ್ ಅಂತಹ ಧೀಮಂತ ರಾಷ್ಟ್ರಭಕ್ತರಿಗೆ ಕೊಡುವ ಮನಸ್ಸು ಮಾಡದಿರುವುದು ನಿಜಕ್ಕೂ ದುಃಖಕರ ವಿಷಯವೇ ಸರಿ. ಒಂದಂತೂ  ಸತ್ಯ.  ಯಾರು ಏನೇ ಹೇಳಿದರೂ ಅವರ ಬದುಕು ಮತ್ತು ಹೋರಾಟ  ಎಂಥವರಿಗೂ ರೋಮಾಂಚನವನ್ನುಂಟು ಮಾಡಿ ಅವರನ್ನು  ದೇಶ ಕಾರ್ಯಕ್ಕೆ ಪ್ರೇರೇಪಿಸುತ್ತದೆ. ಅಂತಹ ಪುಣ್ಯಾತ್ಮರ ಹೋರಾಟ,  ತ್ಯಾಗ ಮತ್ತು ಬಲಿದಾನಗಳ ಫಲವನ್ನೇ ದೇಶದ ಸ್ವಾತಂತ್ರ್ಯರೂಪದಲ್ಲಿ ನಾವಿಂದು ಅನುಭವಿಸುತ್ತಿರುವುದು ಎಂಬುದನ್ನು ಸಕಲ ಭಾರತೀಯರ ಮನಸ್ಸಿನಲ್ಲಿ ಸದಾಕಾಲವೂ ಹಸುರಾಗಿಯೇ ಇದೆ.

✍️ ಅನ್ವೇಶ್ ಕೇಕುಣ್ಣಾಯ

error: Content is protected !!