ಇಂದು ಬಲಿದಾನ ದಿವಸ್!

ಅಂದು 1931ರ ಫೆಬ್ರವರಿ 27, ಶುಕ್ರವಾರ. ಸರಿಯಾಗಿ 90 ವರ್ಷಗಳ ಹಿಂದಿನ ಮಾತು. ಅಲಹಾಬಾದ್​ನ ಆಲ್ಪ್ರೆಡ್ ಪಾರ್ಕ್​ನಲ್ಲಿ ಭಾರತದ ಸ್ವಾತಂತ್ರ್ಯ ಇತಿಹಾಸದ ಒಂದು ಹೊಸ ಪುಟ ತೆರೆದುಕೊಳ್ಳುತ್ತಿತ್ತು. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 14 ಛಡಿ ಏಟು ತಿನ್ನುವಾಗಲೇ ಅವನು ಹೇಳಿದ್ದ, ‘ಮುಂದೆಂದೂ ಪೊಲೀಸರು ನನ್ನನ್ನು ಮುಟ್ಟುವಂತಿಲ್ಲ. ಶತ್ರುಗಳನ್ನು ದಿಟ್ಟತನದಿಂದ ಎದುರಿಸುತ್ತೇನೆ. ಸ್ವತಂತ್ರನಾಗಿ ಇರುತ್ತೇನೆ. ಸ್ವತಂತ್ರಕ್ಕಾಗಿ ಮಡಿಯುತ್ತೇನೆ’.

ಅಂದು ಅವನು ತನ್ನ ನಿವಾಸ ಬಿಟ್ಟಾಗಲೇ ಅದೇನೋ ಅಪಶಕುನಗಳು! ಸುಮಾರು ನಾಲ್ಕಾರು ವರ್ಷಗಳಿಂದ ಪೊಲೀಸರೂ ಅವನನ್ನು ಬಂಧಿಸಲೆಂದು ಹರಸಾಹಸ ಪಡುತ್ತಿದ್ದರು, ಅವನನ್ನು ಜೀವಂತವಾಗಿ ಹಿಡಿಯಲು ಅಥವಾ ನಿರ್ಜೀವನನ್ನಾಗಿ ಮಾಡಲು. ಅವನೇ ಚಂದ್ರಶೇಖರ ಆಜಾದ್!

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಪ್ರೀತಿಯ ಭಯ್ಯಾ! ಮನೆಮನಗಳ ಮಮತಾಮೂರ್ತಿ! ಪೊಲೀಸರ ಸಿಂಹಸ್ವಪ್ನ! ಅವನನ್ನು ಮುಗಿಸಿಹಾಕಲು ಅಹರ್ನಿಶಿ ಪ್ರಯತ್ನಿ ಸುತ್ತಿದ್ದ ಪೊಲೀಸರಿಗೆ, ಅವನ ಮಿತ್ರದ್ರೋಹಿ ಕ್ರಾಂತಿಕಾರಿಯೊಬ್ಬನ ಮೂಲಕವೇ ಅಂದಿನ ಅವನ ಕಾರ್ಯಕ್ರಮಗಳ ಒಳಸುಳಿವು ದೊರೆತಿತ್ತು. ಬೆಳಗ್ಗೆ ಒಂಬತ್ತರ ವೇಳೆಗೇ ಅವರಿಗೆ ಆಜಾದನ ಚಲನವಲನಗಳ ಸುಳಿವು ದೊರೆತಿತ್ತು. ಸುಮಾರು 120 ಪೊಲೀಸರ ಶಸ್ತ್ರಸಜ್ಜಿತ ಪಡೆ ತಯಾರಾಗಿ ನಿಂತಿತ್ತು.

ಆಜಾದ್ ಆಲ್ಪ್ರೆಡ್ ಪಾರ್ಕ್​ನಲ್ಲಿ ಗೆಳೆಯ ಕ್ರಾಂತಿಕಾರಿ ಸುಖದೇವ ರಾಜನೊಂದಿಗೆ ಮುಂದಿನ ಹೋರಾಟದ ರೂಪರೇಷೆಗಳನ್ನು ಕುರಿತು ರ್ಚಚಿಸುತ್ತ ಒಂದು ಮರದ ಕೆಳಗೆ ಕುಳಿತಿದ್ದ. ಇದ್ದಕ್ಕಿದ್ದಂತೆ ತುಸು ದೂರದಲ್ಲಿ ಬಂದು ನಿಂತಿತು ಒಂದು ಪೊಲೀಸ್ ವಾಹನ. ಅದರಿಂದ ಹೊರಕ್ಕೆ ಜಿಗಿದ ಒಬ್ಬ ಶ್ವೇತವರ್ಣೀಯ ಪೊಲೀಸ್ ಅಧಿಕಾರಿ ನಾಟ್ ಬಾದರ್ ‘ಹೂ ಆರ್ ಯು’ ಎನ್ನುತ್ತ ಒಂದು ಕ್ಷಣವೂ ಬಿಡುವು ಕೊಡದೆ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿಯೇ ಬಿಟ್ಟ! ಗುಂಡು ಆಜಾದನ ಬಲತೊಡೆಗೆ ಬಡಿದಿತ್ತು. ಕ್ರಾಂತಿಸಿಂಹ ಹೂಂಕರಿಸುತ್ತ ಮೇಲೆದ್ದು ನಿಂತ. ಅವನ ಬಳಿಯಿದ್ದ ಮೌಝುರ್ ಪಿಸ್ತೂಲಿನಿಂದ ಪ್ರತ್ಯುತ್ತರ ಹಾರಿತ್ತು. ನಾಟ್ ಬಾವರ್​ನ ಪಿಸ್ತೂಲು ಹಿಡಿದ ಬಲಗೈ ನಿಷ್ಕ್ರಿಯವಾಗಿತ್ತು. ಏಕಾಕಿ ಆಜಾದ್ ಮತ್ತು ನೂರಕ್ಕೂ ಹೆಚ್ಚಿನ ಪೊಲೀಸರ ನಡುವೆ ಶುರುವಾಗಿತ್ತು ಗುಂಡಿನ ಭೀಕರ ಹೋರಾಟ. ಚಲಿಸಲು ಸಾಧ್ಯವಾಗದ ಸ್ಥಿತಿಯಲ್ಲೂ ಆಜಾದ್ ತನ್ನ ಮೌಝುರ್​ನಿಂದ ಪೊಲೀಸರಿಗೆ ಮಾರುತ್ತರ ನೀಡಿದ್ದ. 32 ನಿಮಿಷಗಳ ಅವ್ಯಾಹತ ಗುಂಡಿನ ಸುರಿಮಳೆಯನ್ನು ಎದುರಿಸಿ ಹೋರಾಡಿದ್ದ! ರಣಾಂಗಣದಲ್ಲಿ ಬ್ರಿಟಿಷರಿಗೆ ಕ್ರಾಂತಿವೀರನೊಬ್ಬನ ಪಿಸ್ತೂಲಿನ ಗುಂಡುಗಳ ರುಚಿ ತಿಳಿಯುತ್ತಿತ್ತು. ಅಭಿನವ ಅಭಿಮನ್ಯುವಿನ ಪರಿಚಯವಾಗುತ್ತಿತ್ತು. ಕೊನೆಯಲ್ಲಿ ಯಾವಾಗ ತಾನು ಬದುಕುಳಿಯುವ ಸಾಧ್ಯತೆಗಳು ಇಲ್ಲವೆಂದು ಖಚಿತವಾಯಿತೋ ಮೌಝುರ್​ನಲ್ಲಿದ್ದ ಕೊನೆಯ ಗುಂಡನ್ನು ತನ್ನ ತಲೆಯ ಮೇಲೇ ಪ್ರಯೋಗಿಸಿಕೊಂಡ. ‘ಮೈ ಆಜಾದ್ ಹೂಂ, ಆಜಾದ್ ಹೀ ರಹೂಂಗಾ’ ಎಂಬ ತನ್ನ ಬಾಲ್ಯದ ಪ್ರತಿಜ್ಞೆಯನ್ನು ಪೂರೈಸಿದ್ದ. ಪೊಲೀಸರ ಕೈಗೆ ಜೀವಂತ ಸಿಗದೆ ಹುತಾತ್ಮನಾಗಿಬಿಟ್ಟ.

ಅವನಿಗೆ ಇತಿಹಾಸ ಪುಟಗಳಲ್ಲಿ ಸ್ಥಾನ ದೊರೆಯಲಿಲ್ಲ. ಆದರೆ ಜನರ ಹೃದಯಗಳಲ್ಲಿ ಅವನ ಹೆಸರು ಅಮರವಾಯಿತು. ಆಜಾದ್ ಜನನ 1906ರ ಜುಲೈ 23ರಂದು. ಶ್ರಾವಣ ಶುದ್ಧ ಬಿದಿಗೆ. ಹುಟ್ಟಿದ್ದು ಸೀತಾರಾಮ ತಿವಾರಿ ಎಂಬ ಬಡ ಬ್ರಾಹ್ಮಣನ ಮನೆಯಲ್ಲಿ. ಅಂದಿನ ಮಧ್ಯಪ್ರದೇಶದ ಒಂದು ಕುಗ್ರಾಮ ಭಾವರಾದಲ್ಲಿ. ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಾದರೂ ಸೀತಾರಾಮ ತಿವಾರಿ ಮಾಡಿದ್ದು ಕೂಲಿಯ ಕೆಲಸ, ತೋಟದ ಮಾಲಿಯ ಕೆಲಸ. ತಾಯಿ ಮುಗ್ಧೆ, ಅನಕ್ಷರಸ್ಥೆ ಜಗರಾನ್ ದೇವಿ. ಯಾವ ಆಸ್ತಿಪಾಸ್ತಿ ಇಲ್ಲದಿದ್ದರೂ ಸ್ವಾಭಿಮಾನ, ಸ್ವತಂತ್ರ ಮನೋಧರ್ಮ, ಸ್ವಪ್ರಯತ್ನ ಯಥೇಚ್ಛವಾಗಿತ್ತು ಆ ಕುಟುಂಬದಲ್ಲಿ. ಬ್ರಾಹ್ಮಣ ಕುಲದಲ್ಲಿ ಜನಿಸಿದ್ದರಿಂದ ಸಂಸ್ಕೃತ ವಿದ್ವಾಂಸನಾಗಬೇಕೆಂಬ ಹೆಬ್ಬಯಕೆ ಬಾಲಕ ಚಂದ್ರಶೇಖರನದು. ಅದಕ್ಕಾಗಿ ಸೇರಿದ್ದು ಕಾಳೀ ಕ್ಷೇತ್ರ. ಆದರೆ ವಿಧಿ ಬಯಸಿದ್ದೇ ಬೇರೆ. ದಿಟ್ಟ ಕ್ರಾಂತಿಕಾರಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ.

ಹಿಂದುಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸ್ಥಾಪನೆಯಾದಾಗ ಆಜಾದ್ ಅದರ ಸೇನಾಪತಿಯಾದ. ಮನೆಗಳನ್ನು ತೊರೆದು ದೇಶದ ಬಿಡುಗಡೆಯ ಪಣತೊಟ್ಟು ಬಂದಿದ್ದ ಕ್ರಾಂತಿಕಾರಿ ಯುವಕರೆಲ್ಲರಿಗೂ ಇವನು ಪಂಡಿತ್​ಜಿ, ಭಯ್ಯಾ. ಕ್ರಾಂತಿಯ ಕಾರ್ಯಾಚರಣೆಗಳ ವೇಳೆ ಸೇನಾಪತಿ. ಮಿಕ್ಕವೇಳೆಯಲ್ಲಿ ಮನೆಯ ಹಿರಿಯಣ್ಣನಿದ್ದಂತೆ. ಅವರ ಕಷ್ಟಸುಖಗಳಲ್ಲಿ ಭಾಗಿ. ಆದರೆ ಸಂಸ್ಥೆಯ ಕರ್ತವ್ಯದ ವಿಷಯದಲ್ಲಿ ಕಿಂಚಿತ್ತೂ ರಾಜಿ ಇಲ್ಲ. ಸ್ಯಾಂಡರ್ಸ್ ವಧಾ ಪ್ರಕರಣದಲ್ಲಾಗಲೀ, ಹಲವು ದರೋಡೆಗಳ ಪ್ರಸಂಗಗಳಲ್ಲಾಗಲೀ, ಅಸೆಂಬ್ಲಿ ಬಾಂಬ್ ಸ್ಪೋಟದ ಭಗತ್​ಸಿಂಗ್-ಬಟುಕೇಶ್ವರ ದತ್ತರ ಬಂಧನದ ಪ್ರಸಂಗದಲ್ಲಾಗಲೀ ತೆರೆಯ ಹಿಂದಿನ ನೇತೃತ್ವ ಅವನದೇ. ಅವನೇ ಯೋಜನೆಗಳ ಮುಖ್ಯ ಪಾತ್ರಧಾರಿಯಾಗಿದ್ದ. ಈ ಕ್ರಾಂತಿಕಿಡಿಯ ಹೋರಾಟ ಎಂದೆಂದಿಗೂ ಸ್ಪೂರ್ತಿ ನೀಡುವಂಥದ್ದು.

error: Content is protected !!